500ನೇ ಟೆಸ್ಟ್ ವಿಕೆಟ್ನೊಂದಿಗೆ ಲೆಜೆಂಡರಿ ಪಟ್ಟಿಗೆ ಸೇರಿದ ಲಿಯೊನ್

Photo : icc-cricket
ಪರ್ತ್: ಆಸ್ಟ್ರೇಲಿಯದ ಆಫ್ ಸ್ಪಿನ್ನರ್ ನಾಥನ್ ಲಿಯೊನ್ ತನ್ನ ವೃತ್ತಿಜೀವನದಲ್ಲಿ 500ನೇ ಟೆಸ್ಟ್ ವಿಕೆಟನ್ನು ಕಬಳಿಸಿದರು. ಈ ಸಾಧನೆಯ ಮೂಲಕ ಕೇವಲ ಏಳು ಬೌಲರ್ಗಳನ್ನು ಒಳಗೊಂಡಿರುವ ಲೆಜೆಂಡರಿ ಕ್ಲಬ್ ಗೆ ಸೇರ್ಪಡೆಯಾದರು.
ಪರ್ತ್ ನಲ್ಲಿ ಪಾಕಿಸ್ತಾನ ವಿರುದ್ಧ ರವಿವಾರ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಫಹೀಮ್ ಅಶ್ರಫ್ ವಿಕೆಟನ್ನು ಉರುಳಿಸುವುದರೊಂದಿಗೆ ಲಿಯೊನ್ ಈ ಮೈಲಿಗಲ್ಲು ತಲುಪಿದರು.
36ರ ಹರೆಯದ ಹಿರಿಯ ಸ್ಪಿನ್ನರ್ 2019ರಿಂದ ಸೀಮಿತ ಓವರ್ ಕ್ರಿಕೆಟ್ ಪಂದ್ಯವನ್ನು ಆಡುತ್ತಿಲ್ಲ. ಆದಾಗ್ಯೂ ಅವರು ತನ್ನ 123ನೇ ಟೆಸ್ಟ್ ಪಂದ್ಯದಲ್ಲಿ ಈ ಮೈಲಿಗಲ್ಲು ತಲುಪಿದ್ದಾರೆ. ಲಿಯೊನ್ 500 ವಿಕೆಟ್ ಕ್ಲಬ್ ಸೇರಿದ ಆಸ್ಟ್ರೇಲಿಯದ ಮೂರನೇ ಕ್ರಿಕೆಟಿಗ ಎನಿಸಿಕೊಂಡರು. ಶೇನ್ ವಾರ್ನ್(708 ವಿಕೆಟ್) ಹಾಗೂ ಗ್ಲೆನ್ ಮೆಗ್ರಾತ್(563) ಈ ಮೈಲಿಗಲ್ಲು ತಲುಪಿದ ಆಸ್ಟ್ರೇಲಿಯದ ಇತರ ಇಬ್ಬರು ಬೌಲರ್ಗಳಾಗಿದ್ದಾರೆ.
ಲಿಯೊನ್ ತನ್ನ 500ನೇ ವಿಕೆಟ್ ಪಡೆಯಲು ಡಿಆರ್ ಎಸ್ ಮೊರೆ ಹೋಗಬೇಕಾಯಿತು. ಆಮಿರ್ ಜಮಾಲ್ ವಿಕೆಟ್ ಉರುಳಿಸಿ 501ನೇ ವಿಕೆಟ್ ಪಡೆದ ಸಾಧನೆ ಮಾಡಿದರು.
ಲಿಯೊನ್ ಪರ್ತ್ ನಲ್ಲಿ ಮೊದಲ ಟೆಸ್ಟ್ ಆರಂಭಕ್ಕೆ ಮೊದಲು ಒಟ್ಟು 496 ವಿಕೆಟ್ ಗಳನ್ನು ಪಡೆದಿದ್ದರು. ಪಾಕಿಸ್ತಾನದ ಮೊದಲ ಇನಿಂಗ್ಸ್ ನಲ್ಲಿ ಮೂರು ವಿಕೆಟ್ ಗಳನ್ನು ಕಬಳಿಸಿದ ನಂತರ ಲಿಯೊನ್ ಗಳಿಸಿದ ಒಟ್ಟು ವಿಕೆಟ್ ಸಂಖ್ಯೆ 499ಕ್ಕೆ ತಲುಪಿತ್ತು. ರವಿವಾರ ಅಶ್ರಫ್ರನ್ನು ಎಲ್ಬಿಡಬ್ಲು ಬಲೆಗೆ ಬೀಳಿಸಿದ ಲಿಯೊನ್ ನಾಲ್ಕನೇ ದಿನದಾಟದಲ್ಲಿ ಕೊನೆಗೂ 500 ವಿಕೆಟ್ ಪೂರೈಸಿದರು. ಸಹ ಆಟಗಾರರು ಲಿಯೊನ್ರನ್ನು ಸುತ್ತುವರಿದು ಅಭಿನಂದಿಸಿ ಸಂಭ್ರಮಿಸಿದರು.
2011ರಲ್ಲಿ ಚೊಚ್ಚಲ ಪಂದ್ಯವನ್ನಾಡಿದ್ದ ಲಿಯೊನ್ ಅವರ ಶ್ರೇಷ್ಠ ಬೌಲಿಂಗ್ 8-50. ಈ ತನಕ ಅವರು 23 ಬಾರಿ ಐದು ವಿಕೆಟ್ ಗೊಂಚಲು ಹಾಗೂ ಐದು ಬಾರಿ 10 ವಿಕೆಟ್ ಗೊಂಚಲುಗಳನ್ನು ಕಬಳಿಸಿದ್ದಾರೆ.
► ಟೆಸ್ಟ್ ಕ್ರಿಕೆಟ್ ನಲ್ಲಿ ಗರಿಷ್ಠ ವಿಕೆಟ್ ಪಡೆದ ಬೌಲರ್ಗಳು
800-ಮುತ್ತಯ್ಯ ಮುರಳೀಧರನ್
708-ಶೇನ್ ವಾರ್ನ್
690-ಜೇಮ್ಸ್ ಆ್ಯಂಡರ್ಸನ್
619-ಅನಿಲ್ ಕುಂಬ್ಳೆ
604-ಸ್ಟುವರ್ಟ್ ಬ್ರಾಡ್
563-ಗ್ಲೆನ್ ಮೆಗ್ರಾತ್
519-ಕೋರ್ಟ್ನಿ ವಾಲ್ಶ್
501-ನಾಥನ್ ಲಿಯೊನ್







