ರಾಷ್ಟ್ರೀಯ ಗೇಮ್ಸ್ 2025: ಅನಿಮೇಶ್ ಕುಜೂರ್ಗೆ ಚಿನ್ನ
200 ಮೀ. ಓಟ: ಜ್ಯೋತಿಗೆ ಸ್ವರ್ಣ, ಕರ್ನಾಟಕದ ಉನ್ನತಿಗೆ ಬೆಳ್ಳಿ

ಅನಿಮೇಶ್ ಕುಜೂರ್ | PC : X
ಡೆಹ್ರಾಡೂನ್: ಪುರುಷರ 200 ಮೀ ಓಟದಲ್ಲಿ ಮಂಗಳವಾರ ಚಿನ್ನದ ಪದಕ ಜಯಿಸಿದ ಒಡಿಶಾದ ಓಟಗಾರ ಅನಿಮೇಶ್ ಕುಜೂರ್ 2025ರ ಆವೃತ್ತಿಯ ರಾಷ್ಟ್ರೀಯ ಗೇಮ್ಸ್ನಲ್ಲಿ ತನ್ನ ಮೂರನೇ ಸ್ವರ್ಣ ಸಂಪಾದಿಸಿದರು.
ಕುಜೂರ್ 20.58 ಸೆಕೆಂಡ್ನಲ್ಲಿ ಗುರಿ ತಲುಪಿ ಪುರುಷರ 200 ಮೀ.ಓಟದಲ್ಲಿ ಮೊದಲ ಸ್ಥಾನ ಪಡೆದರು. ರಗುಲ್ ಕುಮಾರ್(21.06ಸೆ.)ಹಾಗೂ ನಿತಿನ್(21.07 ಸೆ.)ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕ ಜಯಿಸಿದರು.
ಹಿಂದಿನ 3 ದಿನಗಳಲ್ಲಿ ಪುರುಷರ 100 ಮೀ. ಹಾಗೂ ಪುರುಷರ 4-100 ಮೀ.ರಿಲೇಯಲ್ಲಿ ಚಿನ್ನದ ಪದಕ ಜಯಿಸಿದ್ದ ಕುಜೂರ್ ಇಂದು 3ನೇ ಚಿನ್ನಕ್ಕೆ ಮುತ್ತಿಟ್ಟರು.
ಇದೇ ವೇಳೆ ಮಹಿಳೆಯರ 200 ಮೀ. ಓಟದಲ್ಲಿ ಜ್ಯೋತಿ ಯರ್ರಾಜಿ ಚಿನ್ನದ ಪದಕ ಜಯಿಸಿದರು. ಜ್ಯೋತಿ ಈಗಾಗಲೇ 100 ಮೀ. ಹರ್ಡಲ್ಸ್ನಲ್ಲೂ ಚಿನ್ನ ಜಯಿಸಿದ್ದಾರೆ.
ಆಂಧ್ರದ ಜ್ಯೋತಿ(23.35 ಸೆ.) ಚಿನ್ನಕ್ಕೆ ಕೊರಳೊಡ್ಡಿದರೆ, ಕರ್ನಾಟಕದ ಉನ್ನತಿ ಅಯ್ಯಪ್ಪ(23.70 ಸೆ.)ಹಾಗೂ ತೆಲಂಗಾಣದ ನಿತ್ಯಾ ಗಾಂಧೆ(3.76 ಸೆ.)ಕ್ರಮವಾಗಿ ಬೆಳ್ಳಿ ಹಾಗೂ ಕಂಚು ಗೆದ್ದುಕೊಂಡರು.
*ಕೆ.ಎಂ. ಚಂದಾ ಕೂಟ ದಾಖಲೆ:
ಇದೇ ವೇಳೆ ಕೆ.ಎಂ. ಚಂದಾ ಅವರು ರಾಷ್ಟ್ರೀಯ ಗೇಮ್ಸ್ನಲ್ಲಿ ಕೂಟ ದಾಖಲೆಯೊಂದಿಗೆ ಮಹಿಳೆಯರ 800 ಮೀ. ಓಟದಲ್ಲಿ ಸತತ ಮೂರನೇ ಚಿನ್ನದ ಪದಕ ಜಯಿಸಿದರು.
2:00.82 ಸೆಕೆಂಡ್ನಲ್ಲಿ ಗುರಿ ತಲುಪಿದ ಚಂದಾ ಚಿನ್ನದ ಪದಕ ಜಯಿಸಿದರು. ಇದು ಅವರ ಕೂಟ ದಾಖಲೆಯಾಗಿದ್ದು, 2022ರ ಗುಜರಾತ್ ನ್ಯಾಶನಲ್ ಗೇಮ್ಸ್ನಲ್ಲಿನ ತನ್ನದೆ ಟೈಮಿಂಗ್ ಉತ್ತಮಪಡಿಸಿಕೊಂಡರು. 2022ರಲ್ಲಿ ನ್ಯಾಶನಲ್ ಗೇಮ್ಸ್ನಲ್ಲಿ 800 ಮೀ. ಓಟ ಪುನರಾರಂಭವಾದ ನಂತರ ಪ್ರಾಬಲ್ಯ ಸಾಧಿಸುತ್ತಾ ಬಂದಿದ್ದಾರೆ. ಪಂಜಾಬ್ನ ಟ್ವಿಂಕಲ್ ಚೌಧರಿ ಹಾಗೂ ಅಮನ್ದೀಪ್ ಕೌರ್ ಮಹಿಳೆಯರ 800 ಮೀ. ಓಟದಲ್ಲಿ ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕ ಜಯಿಸಿದರು.
ಸರ್ವಿಸಸ್ ತಂಡದ ಮುಹಮ್ಮದ್ ಅಫ್ಸಲ್ ಪುರುಷರ 800 ಮೀ.ಓಟದಲ್ಲಿ ಚಿನ್ನದ ಪದಕ ಜಯಿಸಿದರು.
* ಪ್ರವೀಣ್ ಚಿತ್ರವೇಲ್ಗೆ ಸ್ವರ್ಣ :
ಪುರುಷರ ಟ್ರಿಪಲ್ ಜಂಪ್ನಲ್ಲಿ 16.50 ಮೀ.ಎತ್ತರಕ್ಕೆ ಜಿಗಿದ ಪ್ರವೀಣ್ ಚಿತ್ರವೇಲ್ ಚಿನ್ನದ ಪದಕ ಗೆದ್ದುಕೊಂಡರು. ಮುಹಮ್ಮದ್ ಸಲಾಹುದ್ದೀನ್(16.01 ಮೀ.)ಹಾಗೂ ಮುಹಮ್ಮದ್ ಮುಹ್ಸಿನ್(15.57 ಮೀ.)ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕ ಗೆದ್ದುಕೊಂಡರು.
*ರೇಸ್ ವಾಕ್ನಲ್ಲಿ ಕೂಟ ದಾಖಲೆ ಪತನ:
ಪುರುಷರ 20 ಕಿ.ಮೀ. ರೇಸ್ ವಾಕ್ನಲ್ಲಿ ಸುಮಾರು 6 ಕ್ರೀಡಾಪಟುಗಳು 1:23.26 ಸೆಕೆಂಡ್ನಲ್ಲಿ ಗುರಿ ತಲುಪಿ 2011ರಲ್ಲಿ ನಿರ್ಮಿಸಲ್ಪಟ್ಟಿದ್ದ ಕೂಟ ದಾಖಲೆ ಮುರಿದರು.
ಸರ್ವಿನ್ ಸೆಬಾಸ್ಟಿಯನ್(1:21.23 ಸೆ.)ನೂತನ ದಾಖಲೆಯೊಂದಿಗೆ ಚಿನ್ನದ ಪದಕ ಜಯಿಸಿದರು.
ಸೂರಜ್ ಪನ್ವಾರ್(1:21.34) ಹಾಗೂ ಅಮನ್ಜೋತ್ ಸಿಂಗ್(1:24.42)ಕ್ರಮವಾಗಿ 2ನೇ ಹಾಗೂ 3ನೇ ಸ್ಥಾನ ಪಡೆದರು. ಪರಮ್ಜೀತ್ ಸಿಂಗ್, ರಾಮ್ ಬಾಬು ಹಾಗೂ ಮುಕೇಶ್ ನೇತ್ರಾವಾಲ್ ಹಾಲಿ ದಾಖಲೆಯನ್ನು ಮುರಿದರು. ಎಲ್ಲ ಆರು ಅತ್ಲಿಟ್ಗಳು ಮುಂಬರುವ ಏಶ್ಯನ್ ಅತ್ಲೆಟಿಕ್ಸ್ ಚಾಂಪಿಯನ್ಶಿಪ್ನ ಅರ್ಹತಾ ಮಾನದಂಡ ತಲುಪಿದ್ದಾರೆ.







