ರಾಷ್ಟ್ರೀಯ ಮುಕ್ತ ರಿಲೇ ಸ್ಪರ್ಧೆ | ಮಿಂಚಿದ ಕರ್ನಾಟಕದ ಅಥ್ಲೀಟ್ ಗಳ ಕೊರಳಿಗೆ ಎರಡು ಬೆಳ್ಳಿ ಪದಕ

PC: PTI
ಚಂಡೀಗಢ: ಕರ್ನಾಟಕದ ಅಥ್ಲೀಟ್ ಗಳು ಇಲ್ಲಿ ಮಾರ್ಚ್ 28ರಂದು ಭಾರತೀಯ ಅಥ್ಲೆಟಿಕ್ಸ್ ಫೆಡರೇಷನ್ ವತಿಯಿಂದ ನಡೆದ ಮೂರನೇ ರಾಷ್ಟ್ರೀಯ ಮುಕ್ತ ರಿಲೇ ಚಾಂಪಿಯನ್ ಷಿಪ್ ನಲ್ಲಿ ಎರಡು ಬೆಳ್ಳಿ ಮತ್ತು ಮೂರು ಕಂಚಿನ ಪದಕಗಳನ್ನು ಗೆದ್ದುಕೊಂಡಿದ್ದಾರೆ.
20 ವರ್ಷದೊಳಗಿನ 4x100 ಮೀಟರ್ ಮಿಶ್ರ ರಿಲೇ ಸ್ಪರ್ಧೆಯಲ್ಲಿ ಕರ್ನಾಟಕ ತಂಡ ಬೆಳ್ಳಿ ಪದಕ ಗೆದ್ದುಕೊಂಡಿತು. ಚಿನ್ನದ ಪದಕವನ್ನು 45.44 ಸೆಕೆಂಡ್ ನಲ್ಲಿ ಗುರಿ ಮುಟ್ಟಿದ ಚಂಡೀಗಢ ತಂಡ ಪಡೆದುಕೊಂಡಿತು. ಅತೀಖ್ ಅಹ್ಮದ್, ಹೇಮಂತ್ ಗೌಡ ಎಂ.ವೈ., ಸೃಷ್ಠಿ ವಿ. ಮತ್ತು ಲೇಖನ ಎಸ್. ಪ್ರಸಾದ್ ಅವರನ್ನೊಳಗೊಂಡ ಕರ್ನಾಟಕ ತಂಡ 45.69 ಸೆಕೆಂಡ್ ನಲ್ಲಿ ಗುರಿ ಮುಟ್ಟಿ ಬೆಳ್ಳಿ ಪದಕ ಜಯಿಸಿತು. ಸುಹಾಸ್ ಗೌಡ ಅವರ ಮಾರ್ಗದರ್ಶನದಲ್ಲಿ ಇವರು ತರಬೇತಿ ಪಡೆದಿದ್ದರು. ಪಂಜಾಬ್ ತಂಡ ಕಂಚಿನ ಪದಕಕ್ಕೆ ತೃಪ್ತಿಪಟ್ಟಿತು.
20 ವರ್ಷದೊಳಗಿನ ಬಾಲಕರ ವಿಭಾಗದ 4x100 ಮೀಟರ್ ರಿಲೇಯಲ್ಲಿ ಕರ್ನಾಟಕ ತಂಡ 42.3 ಸೆಕೆಂಡ್ ನಲ್ಲಿ ಗುರಿ ಕ್ರಮಿಸಿ ಬೆಳ್ಳಿ ಪದಕ ಪಡೆಯಿತು. ಸರ್ವಜೀತ್, ರೇಹಾನ್ ಕುಮಾರ್, ಯಶಸ್ಸು ಡಿ. ಮತ್ತು ಅಯೂಸ್ ದೇವಾಡಿಗ ಅವರು ಕರ್ನಾಟಕ ತಂಡವನ್ನು ಪ್ರತಿನಿಧಿಸಿದರು. ಈ ವಿಭಾಗದಲ್ಲಿ ಚಿನ್ನದ ಪದಕವನ್ನು ತಮಿಳುನಾಡು ಪಡೆದುಕೊಂಡರೆ, ಒಡಿಶಾ ಕಂಚಿನ ಪದಕ ಪಡೆದುಕೊಂಡಿತು.
20 ವರ್ಷದೊಳಗಿನ ಬಾಲಕಿಯರ ವಿಭಾಗದ 4x100 ಮೀಟರ್ ರಿಲೇಯಲ್ಲಿ ಕರ್ನಾಟಕ ಕಂಚಿನ ಪದಕ ಜಯಿಸಿತು. ಸಿರಿ ಎನ್., ಅಕ್ಷಯ ಶೇಖರ್, ಎಸ್. ಕರ್ಕಡ ಮತ್ತು ಲೇಖನ ಎಸ್. ಪ್ರಸಾದ್ ಅವರನ್ನೊಳಗೊಂಡ ರಾಜ್ಯ ತಂಡ 50.13 ಸೆಕೆಂಡ್ ನಲ್ಲಿ ಗುರಿ ಕ್ರಮಿಸಿತು. ತಮಿಳುನಾಡು ಮತ್ತು ಗುಜರಾತ್ ಕ್ರಮವಾಗಿ ಬಂಗಾರ ಮತ್ತು ಬೆಳ್ಳಿ ಪದಕ ಜಯಿಸಿದವು.
20 ವರ್ಷದೊಳಗಿನ ಬಾಲಕಿಯರ 4x400 ಮೀಟರ್ ರಿಲೇಯಲ್ಲಿ ಅಕ್ಷಯ ಶೇಖರ್, ಸಾರಿಕಾ ವಿ., ಸೋನಾಲ್ ಡಿಮೆಲ್ಲೊ ಮತ್ತು ಇಶಾ ರೆನತ್ ಅವರನ್ನೊಳಗೊಂಡ ಕರ್ನಾಟಕ ತಂಡ ಕಂಚಿನ ಪದಕ ಗೆದ್ದುಕೊಂಡಿತು. ಈ ವಿಭಾಗದ ಚಿನ್ನ ತಮಿಳುನಾಡು ಹಾಗೂ ಬೆಳ್ಳಿ ಪಂಜಾಬ್ ಪಾಲಾಯಿತು.
20 ವರ್ಷದೊಳಗಿನ ಪುರುಷರ 4x400 ಮೀಟರ್ ರಿಲೇಯಲ್ಲಿ ತಮಿಳುನಾಡು ಬಂಗಾರ ಹಾಗೂ ಪಂಜಾಬ್ ಬೆಳ್ಳಿ ಪದಕ ಜಯಿಸಿದವು. ಅಲಿ ಖಾನ್, ಯಮನಪ್ಪ ಮದಾರ್, ತರುಣ್ ಕೆ.ಆರ್. ಮತ್ತು ಡಿ. ದಪ್ಪನವರ್ ಅವರನ್ನೊಳಗೊಂಡ ಕರ್ನಾಟಕ ತಂಡ ಕಂಚಿನ ಪದಕಕ್ಕೆ ತೃಪ್ತಿಪಟ್ಟಿತು.
20 ವರ್ಷದೊಳಗಿನ 4x400 ಮೀಟರ್ ಮಿಶ್ರ ರಿಲೇ ಸ್ಪರ್ಧೆಯಲ್ಲಿ ತಮಿಳುನಾಡು ಚಿನ್ನದ ಪದಕ ಗೆದ್ದುಕೊಂಡರೆ, ಪಂಜಾಬ್ ಬೆಳ್ಳಿ ಹಾಗೂ ಗುಜರಾತ್ ಕಂಚಿನ ಪದಕ ಜಯಿಸಿದವು. ಪ್ರಣವ್ ಮನೋಜ್, ಕಿಶನ್ ಡಿ., ಸೋನಾಲ್ ಡಿಮೆಲ್ಲೊ ಮತ್ತು ಇಶಾ ಅವರನ್ನೊಳಗೊಂಡ ಕರ್ನಾಟಕ ತಂಡ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟಿತು.






