ರಾಷ್ಟ್ರೀಯ ಆಯ್ಕೆ ಟ್ರಯಲ್ಸ್ | ಅನಿಶ್, ಸಿಫ್ತ್ ಕೌರ್,ಉಮಾ ಮಹೇಶ್ ಗೆ ಗೆಲುವು

PC : X
ಹೊಸದಿಲ್ಲಿ: ಒಲಿಂಪಿಯನ್ಗಳಾದ ಅನಿಶ್ ಭನ್ವಾಲಾ, ಸಿಫ್ತ್ ಕೌರ್ ಸಮ್ರಾ ಹಾಗೂ ಜೂನಿಯರ್ ವಿಶ್ವ ಚಾಂಪಿಯನ್ಶಿಪ್ನಲ್ಲಿ ಪದಕ ವಿಜೇತ ಉಮಾಮಹೇಶ್ ಮದ್ದಿನೇನಿ ಅವರು ರಾಷ್ಟ್ರೀಯ ಆಯ್ಕೆ ಟ್ರಯಲ್ಸ್ನಲ್ಲಿ(ಟಿ3)ಜಯ ಸಾಧಿಸಿದ್ದಾರೆ.
ಡೆಹ್ರಾಡೂನ್ನ ಮಹಾರಾಣಾ ಪ್ರತಾಪ್ ಸ್ಪೋರ್ಟ್ಸ್ ಕಾಲೇಜ್ನ ತ್ರಿಶೂಲ್ ಶೂಟಿಂಗ್ ರೇಂಜ್ನಲ್ಲಿ ನಡೆದ ಕ್ರಮವಾಗಿ ಪುರುಷರ 25 ಮೀ. ರ್ಯಾಪಿಡ್ ಫೈಯರ್, ಮಹಿಳೆಯರ 50 ಮೀ. 3 ಪೊಸಿಶನ್ಸ್ ಹಾಗೂ ಪುರುಷರ 10 ಮೀ. ಏರ್ ರೈಫಲ್ ಸ್ಪರ್ಧೆಗಳಲ್ಲಿ ಅನಿಶ್, ಸಿಫ್ತ್ ಹಾಗೂ ಉಮಾ ಮಹೇಶ್ ಜಯ ಸಾಧಿಸಿದರು.
ಅನಿಶ್ ಫೈನಲ್ನಲ್ಲಿ 33 ಅಂಕ ಗಳಿಸಿದರು. ಆದರ್ಶ್ ಸಿಂಗ್(29)ಹಾಗೂ ನೌಕಾದಳದ ಪ್ರದೀಪ್ ಸಿಂಗ್ ಶೆಖಾವತ್ (23) ಕ್ರಮವಾಗಿ 2ನೇ ಹಾಗೂ 3ನೇ ಸ್ಥಾನ ಪಡೆದರು.
ಇತ್ತೀಚೆಗೆ ಮ್ಯೂನಿಕ್ನಲ್ಲಿ ವಿಶ್ವಕಪ್ ಟೂರ್ನಿಯಲ್ಲಿ ಕಂಚಿನ ಪದಕ ಜಯಿಸಿದ್ದ ಸಿಫ್ತ್ ಕೌರ್ 50 ಮೀ. 3 ಪೊಸಿಶನ್ಸ್ ಮಹಿಳೆಯರ ಫೈನಲ್ಸ್ನಲ್ಲಿ 467.3 ಅಂಕ ಗಳಿಸಿ ಮೊದಲ ಸ್ಥಾನ ಪಡೆದರು. ಆಕೃತಿ ದಹಿಯಾ(456.9)ಹಾಗೂ ಆಶಿ ಚೋಕ್ಸಿ(443.9)ಕ್ರಮವಾಗಿ 2ನೇ ಹಾಗೂ 3ನೇ ಸ್ಥಾನ ಪಡೆದರು.
ಪುರುಷರ 10 ಮೀ. ಏರ್ ರೈಫಲ್ ಫೈನಲ್ಸ್ನಲ್ಲಿ ಉಮಾಮಹೇಶ್ ಮದ್ದಿನೇನಿ 252.2 ಅಂಕ ಗಳಿಸಿ ಬ್ಯುನಸ್ ಐರಿಸ್ ವಿಶ್ವಕಪ್ನಲ್ಲಿ ಚಿನ್ನದ ಪದಕ ವಿಜೇತ ರುದ್ರಾಂಕ್ಷ್ ಪಾಟೀಲ್ರನ್ನು (251.1)ಹಿಮ್ಮೆಟ್ಟಿಸಿ ಅಗ್ರ ಸ್ಥಾನ ಪಡೆದರು. ದಿವ್ಯಾಂಶ್ ಪನ್ವಾರ್(230.1)3ನೇ ಸ್ಥಾನ ಪಡೆದರು.
ಈ ಎಲ್ಲ ಟ್ರಯಲ್ಸ್ ಆಗಸ್ಟ್ ನಲ್ಲಿ ಕಝಕ್ಸ್ತಾನದಲ್ಲಿ ನಡೆಯಲಿರುವ 16ನೇ ಆವೃತ್ತಿಯ ಏಶ್ಯನ್ ಶೂಟಿಂಗ್ ಚಾಂಪಿಯನ್ಶಿಪ್ ಹಾಗೂ ಚೀನಾದ ನಿಂಗ್ಬೊದಲ್ಲಿ ಸೆಪ್ಟಂಬರ್ನಲ್ಲಿ ನಡೆಯಲಿರುವ ಐಎಸ್ಎಸ್ಎಫ್ ವಿಶ್ವಕಪ್ಗೆ ತಯಾರಿ ನಡೆಸಲು ನೆರವಾಗುವ ಗುರಿ ಇಟ್ಟುಕೊಂಡಿವೆ.







