National Sports Awards 2025: ದಿವ್ಯಾ ದೇಶ್ಮುಖ್, ಗಾಯತ್ರಿ ಗೋಪಿಚಂದ್ ಸಹಿತ 17 ಕ್ರೀಡಾಪಟುಗಳಿಗೆ ಅರ್ಜುನ ಪ್ರಶಸ್ತಿ

ದಿವ್ಯಾ ದೇಶ್ಮುಖ್ (chessbase.in), ಗಾಯತ್ರಿ ಗೋಪಿಚಂದ್(PTI) , ತೇಜಸ್ವಿನ್ ಶಂಕರ್(PTI)
ಹೊಸದಿಲ್ಲಿ : ಕ್ರೀಡಾ ಸಚಿವಾಲಯ ಮಂಗಳವಾರ 2025ನೇ ಸಾಲಿನಲ್ಲಿ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಗೆ ಯಾವುದೇ ಕ್ರೀಡಾಪಟುವನ್ನು ಆಯ್ಕೆ ಮಾಡದಿರಲು ನಿರ್ಧರಿಸಿದೆ. ಆಯ್ಕೆ ಸಮಿತಿಯ ಶಿಫಾರಸುಗಳನ್ನು ಮರುಪರಿಶೀಲಿಸಿದ ಬಳಿಕ ವಿಶ್ವಕಪ್ ವಿಜೇತ ಚೆಸ್ ಆಟಗಾರ್ತಿ ದಿವ್ಯಾ ದೇಶ್ಮುಖ್, ಡೆಕಾಥ್ಲೀಟ್ ತೇಜಸ್ವಿನ್ ಶಂಕರ್ ಮತ್ತು ಬ್ಯಾಡ್ಮಿಂಟನ್ ಆಟಗಾರ್ತಿ ಗಾಯತ್ರಿ ಗೋಪಿಚಂದ್ ಸೇರಿದಂತೆ 17 ಕ್ರೀಡಾಪಟುಗಳಿಗೆ ಅರ್ಜುನ ಪ್ರಶಸ್ತಿಯನ್ನು ಘೋಷಿಸಿದೆ.
ಮಾಜಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅರುಣ್ ಕುಮಾರ್ ಮಿಶ್ರಾ ಅವರ ನೇತೃತ್ವದ ಆಯ್ಕೆ ಸಮಿತಿಯು ಹಾಕಿ ತಾರೆ ಹಾರ್ದಿಕ್ ಸಿಂಗ್ ಅವರನ್ನು ದೇಶದ ಅತ್ಯುನ್ನತ ಕ್ರೀಡಾ ಗೌರವವಾದ ಖೇಲ್ ರತ್ನ ಪ್ರಶಸ್ತಿಗೆ ಪರಿಗಣಿಸಿತ್ತು. ಆದರೆ ಅಂತಿಮವಾಗಿ ಅವರು ಪ್ರಶಸ್ತಿಯ ಸ್ಪರ್ಧೆಯಿಂದ ಹೊರಬಿದ್ದರು.
ವಿಶ್ವಕಪ್ ವಿಜೇತ ಚೆಸ್ ಆಟಗಾರ್ತಿ ದಿವ್ಯಾ ದೇಶ್ಮುಖ್, ಡೆಕಾಥ್ಲೀಟ್ ಹಾಗೂ ಹೈಜಂಪ್ ಕ್ರೀಡಾಪಟು ತೇಜಸ್ವಿನ್ ಶಂಕರ್ ಮತ್ತು ಬ್ಯಾಡ್ಮಿಂಟನ್ ಆಟಗಾರ್ತಿ ಗಾಯತ್ರಿ ಗೋಪಿಚಂದ್ ಸೇರಿದಂತೆ 17 ಕ್ರೀಡಾಪಟುಗಳನ್ನು ಮಂಗಳವಾರ ಅರ್ಜುನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಅರ್ಜುನ ಪ್ರಶಸ್ತಿಗೆ ಆಯ್ಕೆಯಾದವರ ಪಟ್ಟಿಯಲ್ಲಿ ಗ್ರ್ಯಾಂಡ್ಮಾಸ್ಟರ್ ವಿದಿತ್ ಗುಜರಾತಿ, ಟ್ರೀಸಾ ಜಾಲಿ, ಗ್ಲಾಸ್ಗೋ ಕಾಮನ್ವೆಲ್ತ್ ಗೇಮ್ಸ್ ನ ಬೆಳ್ಳಿ ಪದಕ ವಿಜೇತ ಬಾಕ್ಸರ್ ನರೇಂದ್ರ ಬರ್ವಾಲ್ ಹಾಗೂ ಯುವ ರೈಫಲ್ ಶೂಟರ್ ಧನುಷ್ ಶ್ರೀಕಾಂತ್ ಸೇರಿದ್ದಾರೆ.
ಈ ವರ್ಷ ಆಯ್ಕೆ ಸಮಿತಿಯು ಅರ್ಜುನ ಪ್ರಶಸ್ತಿಗಾಗಿ 24 ಕ್ರೀಡಾಪಟುಗಳ ಹೆಸರನ್ನು ಮಾತ್ರ ಶಿಫಾರಸು ಮಾಡಿತ್ತು. ಆದರೆ ಕ್ರೀಡಾ ಸಚಿವಾಲಯವು ಅಂತಿಮವಾಗಿ 17 ಮಂದಿಗೆ ಮಾತ್ರ ಪ್ರಶಸ್ತಿಯನ್ನು ಅನುಮೋದಿಸಿದೆ.






