ಬಾಂಗ್ಲಾದೇಶದ ಟೆಸ್ಟ್ ತಂಡದ ನಾಯಕತ್ವ ತ್ಯಜಿಸಿದ ನಜ್ಮುಲ್ ಹುಸೈನ್

ನಜ್ಮುಲ್ ಹುಸೈನ್ | PC : X
ಹೊಸದಿಲ್ಲಿ: ಕೊಲಂಬೊದಲ್ಲಿ ಶನಿವಾರ ದ್ವಿತೀಯ ಟೆಸ್ಟ್ ಪಂದ್ಯವನ್ನು ಇನಿಂಗ್ಸ್ ಅಂತರದಿಂದ ಸೋತು, ಸರಣಿಯನ್ನು ಕಳೆದುಕೊಂಡ ಬೆನ್ನಿಗೇ ನಜ್ಮುಲ್ ಹುಸೈನ್ ಶಾಂಟೊ ಬಾಂಗ್ಲಾದೇಶ ಕ್ರಿಕೆಟ್ ತಂಡದ ಟೆಸ್ಟ್ ನಾಯಕತ್ವ ತ್ಯಜಿಸುವುದಾಗಿ ಪ್ರಕಟಿಸಿದ್ದಾರೆ.
ಪಂದ್ಯ ನಂತರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಂಟೊ, ತಂಡದ ದೀರ್ಘಕಾಲದ ಹಿತಾಸಕ್ತಿ ತನ್ನ ಈ ನಿರ್ಧಾರಕ್ಕೆ ಪ್ರೇರಣೆಯಾಗಿದೆಯೇ ಹೊರತು, ವೈಯಕ್ತಿಕ ನಿರಾಶೆಯಿಂದಲ್ಲ ಎಂದು ಸ್ಪಷ್ಟಪಡಿಸಿದರು.
‘‘ನಾನು ಇನ್ನು ಮುಂದೆ ಟೆಸ್ಟ್ ಮಾದರಿಯ ಕ್ರಿಕೆಟ್ ನಲ್ಲಿ ನಾಯಕನಾಗಿ ಮುಂದುವರಿಯಲು ಬಯಸುವುದಿಲ್ಲ. ಇದು ವೈಯಕ್ತಿಕವಲ್ಲ, ತಂಡದ ಒಳಿತಿಗಾಗಿ ನಾನು ಈ ನಿರ್ಧಾರ ತೆಗೆದುಕೊಂಡಿದ್ದೇನೆ. ಇದು ತಂಡಕ್ಕೆ ಸಹಾಯ ಮಾಡುತ್ತದೆ ಎಂದು ಭಾವಿಸುತ್ತೇನೆ. ಕಳೆದ ಕೆಲವು ವರ್ಷಗಳಿಂದ ನಾನು ಡ್ರೆಸ್ಸಿಂಗ್ ರೂಮ್ ನ ಭಾಗವಾಗಿದ್ದೇನೆ. ಮೂವರು ನಾಯಕರು ಸಮಂಜಸವಲ್ಲ ಎಂದು ನನ್ನ ಭಾವನೆ. ಈ ಕುರಿತು ಮಂಡಳಿಯ ಅಭಿಪ್ರಾಯ ನನಗೆ ಗೊತ್ತಿಲ್ಲ. ನಾನು ಮಂಡಳಿಯ ನಿರ್ಧಾರ ಬೆಂಬಲಿಸುತ್ತೇನೆ. ನನ್ನ ಪ್ರಕಾರ ತಂಡವು ಮೂವರು ಪ್ರತ್ಯೇಕ ನಾಯಕರನ್ನು ನಿಭಾಯಿಸುತ್ತದೆ ಕಷ್ಟ’’ಎಂದು ಶಾಂಟೊ ಹೇಳಿದರು.
ಈ ತಿಂಗಳಾರಂಭದಲ್ಲಿ ಶಾಂಟೊ ಅವರ ಬದಲಿಗೆ ಮೆಹದಿ ಹಸನ್ ಮಿರಾಝ್ ರನ್ನು ಬಾಂಗ್ಲಾದೇಶದ ಏಕದಿನ ಕ್ರಿಕೆಟ್ ತಂಡದ ನಾಯಕರನ್ನಾಗಿ ನೇಮಿಸಲಾಗಿತ್ತು.
ಶಾಂಟೊ 2023ರಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ್ದ ನಡೆದ ಸ್ವದೇಶಿ ಸರಣಿಯ ವೇಳೆ ಟೆಸ್ಟ್ ತಂಡದ ನಾಯಕತ್ವವಹಿಸಿಕೊಂಡಿದ್ದರು. ಅವರ ನಾಯಕತ್ವದಲ್ಲಿ ಬಾಂಗ್ಲಾದೇಶ 14 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 2024ರ ಆಗಸ್ಟ್ ನಲ್ಲಿ ಪಾಕಿಸ್ತಾನ ತಂಡದ ವಿರುದ್ಧ ಎರಡು ಮಹತ್ವದ ಗೆಲುವು ಸೇರಿದಂತೆ ಒಟ್ಟು 4 ಜಯ ದಾಖಲಿಸಿದೆ. 9 ರಲ್ಲಿ ಸೋಲು ಹಾಗೂ 1ರಲ್ಲಿ ಡ್ರಾ ಸಾಧಿಸಿದೆ.
ಬಾಂಗ್ಲಾ ತಂಡವು ಮಿಶ್ರ ಫಲಿತಾಂಶ ಪಡೆದ ಹೊರತಾಗಿಯೂ ನಾಯಕನಾಗಿ ಶಾಂಟೊ ಅವರ ವೈಯಕ್ತಿಕ ಫಾರ್ಮ್ ಅತ್ಯುತ್ತಮವಾಗಿತ್ತು. ಅವರು ನಾಯಕನಾಗಿದ್ದಾಗ 36.24ರ ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ಶಾಂಟೊ ನಾಯಕತ್ವದಲ್ಲಿ ಬಾಂಗ್ಲಾದೇಶ 4 ಪಂದ್ಯಗಳಲ್ಲಿ ಗೆದ್ದಾಗ ಅವರ ಬ್ಯಾಟಿಂಗ್ ಸರಾಸರಿ 37.16ರಷ್ಟಿತ್ತು.







