ನೀರಜ್ ಚೋಪ್ರಾಗೆ ಗೌರವ ಲೆಫ್ಟಿನೆಂಟ್ ಕರ್ನಲ್ ಹುದ್ದೆ ಪ್ರದಾನ

ನೀರಜ್ ಚೋಪ್ರಾ | PC : olympics.com
ಚೆನ್ನೈ : ಅವಳಿ ಒಲಿಂಪಿಕ್ಸ್ ಪದಕ ವಿಜೇತ ನೀರಜ್ ಚೋಪ್ರಾರಿಗೆ ಮಂಗಳವಾರ ಪ್ರಾದೇಶಿಕ ಸೇನೆಯಲ್ಲಿ ಗೌರವ ಲೆಫ್ಟಿನೆಂಟ್ ಕರ್ನಲ್ ಹುದ್ದೆ ಪ್ರದಾನ ಮಾಡಲಾಗಿದೆ.
ಈ ನೇಮಕಾತಿ ಎಪ್ರಿಲ್ 16ರಿಂದ ಜಾರಿಗೆ ಬಂದಿದೆ ಎಂದು ಸಾಪ್ತಾಹಿಕ ಸರಕಾರಿ ಪತ್ರಿಕೆ ಹಾಗೂ ಭಾರತ ಸರಕಾರದ ಅಧಿಕೃತ ದಾಖಲೆ ‘ದ ಗಝೆಟ್ ಆಫ್ ಇಂಡಿಯಾ’ದಲ್ಲಿ ತಿಳಿಸಲಾಗಿದೆ.
‘‘1948ರ ಪ್ರಾದೇಶಿಕ ಸೇನೆ ನಿಯಮಾವಳಿಗಳ 31ನೇ ಪ್ಯಾರಾದಲ್ಲಿ ನೀಡಲಾಗಿರುವ ಅಧಿಕಾರಗಳನ್ನು ಬಳಸಿಕೊಂಡು, 2025 ಎಪ್ರಿಲ್ 16ರಿಂದ ಜಾರಿಗೆ ಬರುವಂತೆ ಹರ್ಯಾಣದ ಪಾಣಿಪತ್ನ ಖಾಂಡ್ರ ನಿವಾಸಿ ನೀರಜ್ ಚೋಪ್ರಾರಿಗೆ ಗೌರವ ಲೆಫ್ಟಿನೆಂಟ್ ಕರ್ನಲ್ ಹುದ್ದೆಯನ್ನು ಪ್ರದಾನ ಮಾಡಲು ರಾಷ್ಟ್ರಪತಿಯವರು ಸಂತೋಷಪಡುತ್ತಾರೆ’’ ಎಂಬುದಾಗಿ ಸೇನಾ ವ್ಯವಹಾರಗಳ ಇಲಾಖೆಯ ಜಂಟಿ ಕಾರ್ಯದರ್ಶಿ ಮೇಜರ್ ಜನರಲ್ ಜಿ.ಎಸ್. ಚೌಧರಿ ನೀಡಿರುವ ಹೇಳಿಕೆಯೊಂದು ತಿಳಿಸಿದೆ.
ಇದಕ್ಕೂ ಮೊದಲು, ಅವರನ್ನು 2016 ಆಗಸ್ಟ್ 26ರಂದು ಭಾರತೀಯ ಸೇನೆಯಲ್ಲಿ ನಾಯಿಬ್ ಸುಬೇದಾರ್ ದರ್ಜೆಯಲ್ಲಿ ಜೂನಿಯರ್ ಕಮಿಶನ್ಡ್ ಆಫೀಸರ್ ಆಗಿ ನೇಮಿಸಲಾಗಿತ್ತು. ಎರಡು ವರ್ಷಗಳ ಬಳಿಕ ಅವರಿಗೆ ಅರ್ಜುನ ಪ್ರಶಸ್ತಿ ನೀಡಲಾಗಿತ್ತು.
ಅವರು ಖೇಲ್ ರತ್ನ ಮತ್ತು ವಿಶಿಷ್ಟ ಸೇವಾ ಪದಕವನ್ನೂ ಪಡೆದಿದ್ದಾರೆ. 2021ರಲ್ಲಿ ಅವರಿಗೆ ಸೇನೆಯಲ್ಲಿ ಸುಬೇದಾರ್ ಹುದ್ದೆಗೆ ಭಡ್ತಿ ನೀಡಲಾಗಿತ್ತು.