ನೀರಜ್ ಚೋಪ್ರಾ ತರಬೇತಿಗೆ 11.80 ಲಕ್ಷ ರೂ. ನೀಡಿದ ಕ್ರೀಡಾ ಸಚಿವಾಲಯ

ನೀರಜ್ ಚೋಪ್ರಾ | Photo Credit : PTI
ಹೊಸದಿಲ್ಲಿ, ಜ.15: ಎರಡು ಬಾರಿಯ ಒಲಿಂಪಿಕ್ಸ್ ಪದಕ ವಿಜೇತ ಭಾರತದ ಸ್ಟಾರ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಅವರು ದಕ್ಷಿಣ ಆಫ್ರಿಕಾದ ಪೊಚೆಫ್ಸ್ಟ್ರೂಮ್ನಲ್ಲಿ ತಮ್ಮ ತರಬೇತಿಯನ್ನು ಆರಂಭಿಸಿದ್ದಾರೆ. ಕ್ರೀಡಾ ಸಚಿವಾಲಯದ ಮಿಷನ್ ಒಲಿಂಪಿಕ್ಸ್ ಸೆಲ್ (ಎಂಒಸಿ) ಹೊಸ ಕೋಚ್ ಜೈ ಚೌಧರಿ ಅವರೊಂದಿಗೆ 32 ದಿನಗಳ ಶಿಬಿರದಲ್ಲಿ ಪಾಲ್ಗೊಳ್ಳಲು ಅನುಮತಿ ನೀಡಿದೆ.
ಚೋಪ್ರಾ ಕಳೆದ ವಾರ ಝೆಕ್ ದಂತಕಥೆ ಜಾನ್ ಝೆಲೆಝ್ನಿ ಅವರಿಂದ ಬೇರ್ಪಟ್ಟಿದ್ದು, ಜೈ ಚೌಧರಿ ಅವರಿಂದ ತರಬೇತಿ ಪಡೆಯಲು ನಿರ್ಧರಿಸಿದ್ದರು. ಚೌಧರಿ ಅವರು ಈ ಹಿಂದೆ ಪಾಣಿಪತ್ನಲ್ಲಿ ಚೋಪ್ರಾಗೆ ತರಬೇತಿ ನೀಡಿದ್ದರು.
28 ವರ್ಷದ ಚೋಪ್ರಾ ವಿಶ್ವದ ಪ್ರಮುಖ ಜಾವೆಲಿನ್ ಎಸೆತಗಾರರ ತರಬೇತಿ ಕೇಂದ್ರವಾಗಿರುವ ಪೊಚೆಫ್ಸ್ಟ್ರೂಮ್ನಲ್ಲಿ ಫೆಬ್ರವರಿ 5ರ ತನಕ ಇರಲಿದ್ದಾರೆ. ಈ ತರಬೇತಿಗಾಗಿ ಕೇಂದ್ರ ಕ್ರೀಡಾ ಸಚಿವಾಲಯವು 11.80 ಲಕ್ಷ ರೂ. ಸಹಾಯಧನ ನೀಡಿದೆ ಎಂದು ಭಾರತದ ಕ್ರೀಡಾ ಪ್ರಾಧಿಕಾರ ಪಿಟಿಐಗೆ ತಿಳಿಸಿದೆ.
ಟಾರ್ಗೆಟ್ ಒಲಿಂಪಿಕ್ಸ್ ಪೋಡಿಯಂ ಯೋಜನೆಯಡಿ ಗಣ್ಯ ಕ್ರೀಡಾಪಟುಗಳಿಗೆ ಆರ್ಥಿಕ ಹಾಗೂ ಲಾಜಿಸ್ಟಿಕ್ಸ್ ಸಹಾಯ ನಿರ್ಧರಿಸುವ ಮಿಷನ್ ಒಲಿಂಪಿಕ್ಸ್ ಸೆಲ್ ಬುಧವಾರ ಸಭೆ ನಡೆಸಿದೆ.





