ಆಗಸ್ಟ್ 16ರಂದು ಪೋಲ್ಯಾಂಡ್ ಡೈಮಂಡ್ ಲೀಗ್; ನೀರಜ್ ಚೋಪ್ರಾ-ಅರ್ಷದ್ ನದೀಮ್ ಮುಖಾಮುಖಿ

ನೀರಜ್ ಚೋಪ್ರಾ, ಅರ್ಷದ್ ನದೀಮ್ | PC : PTI
ಹೊಸದಿಲ್ಲಿ, ಜು.13: ಒಲಿಂಪಿಕ್ಸ್ ನಲ್ಲಿ ಎರಡು ಬಾರಿ ಪದಕ ವಿಜೇತ ನೀರಜ್ ಚೋಪ್ರಾ ಅವರು ಬಹು ನಿರೀಕ್ಷಿತ ಆಗಸ್ಟ್ 16ರಂದು ಪೋಲ್ಯಾಂಡ್ ನ ಸಿಲೇಸಿಯಾದಲ್ಲಿ ನಡೆಯಲಿರುವ ಡೈಮಂಡ್ ಲೀಗ್ ನಲ್ಲಿ ಹಾಲಿ ಚಾಂಪಿಯನ್ ಪಾಕಿಸ್ತಾನದ ಅರ್ಷದ್ ನದೀಮ್ ಅವರೊಂದಿಗೆ ಸೆಣಸಾಡಲಿದ್ದಾರೆ. ಈ ಇಬ್ಬರು 2024ರ ಪ್ಯಾರಿಸ್ ಗೇಮ್ಸ್ ನಂತರ ಮೊದಲ ಬಾರಿ ಮುಖಾಮುಖಿಯಾಗುತ್ತಿದ್ದಾರೆ.
ಪ್ಯಾರಿಸ್ ನಲ್ಲಿ ಪುರುಷರ ಜಾವೆಲಿನ್ ಸ್ಪರ್ಧಾವಳಿ ನಡೆದ ಒಂದು ವರ್ಷದ ನಂತರ ಚೋಪ್ರಾ ಹಾಗೂ ನದೀಮ್ ಪರಸ್ಪರ ಮುಖಾಮುಖಿಯಾಗುತ್ತಿದ್ದು, 2024ರ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಭಾರತೀಯ ಆಟಗಾರನನ್ನು ಹಿಂದಿಕ್ಕಿದ ನದೀಮ್ 92.97 ಮೀ.ದೂರಕ್ಕೆ ಜಾವೆಲಿನ್ ಎಸೆದು ಚಿನ್ನದ ಪದಕ ಜಯಿಸಿದ್ದರು.
2021ರ ಟೋಕಿಯೊ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಜಯಿಸಿದ್ದ 27ರ ಹರೆಯದ ಚೋಪ್ರಾ ಅವರು ಪ್ಯಾರಿಸ್ನಲ್ಲಿ 89.45 ಮೀ.ದೂರಕ್ಕೆ ಜಾವೆಲಿನ್ ಎಸೆದು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟಿದ್ದರು.
ಸಿಲೇಸಿಯಾ ಡೈಮಂಡ್ ಲೀಗ್ ನಲ್ಲಿ ಪುರುಷರ ಜಾವೆಲಿನ್ ಎಸೆತದ ಸ್ಪರ್ಧೆಯಲ್ಲಿ ಚೋಪ್ರಾ ಹಾಗೂ ನದೀಮ್ ಸ್ಪರ್ಧಿಸಲಿದ್ದಾರೆ ಎಂದು ವಿಶ್ವ ಅತ್ಲೆಟಿಕ್ಸ್ ಹೇಳಿಕೆಯೊಂದರಲ್ಲಿ ತಿಳಿಸಿದೆ.





