ಕೋಚ್ ನವಲ್ ಸಿಂಗ್ ವಿರುದ್ಧ ಕಿರುಕುಳ ಆರೋಪಿಸಿದ ಸುಮಿತ್ ಅಂತಿಲ್, ನೀರಜ್ ಚೋಪ್ರಾ

Photo Credit : timesofindia
ಹೊಸದಿಲ್ಲಿ, ಎ. 18: ಭಾರತದ ಉನ್ನತ ಜಾವೆಲಿನ್ ಕೋಚ್ಗಳಲ್ಲಿ ಒಬ್ಬರಾಗಿರುವ ನವಲ್ ಸಿಂಗ್ ಮಾನಸಿಕ ಹಿಂಸೆ ನೀಡುತ್ತಾರೆ ಮತ್ತು ಪದೇಪದೇ ಕೆಟ್ಟ ಭಾಷೆಯಲ್ಲಿ ಬೈಯುತ್ತಾರೆ ಎಂದು ಎರಡು ಬಾರಿ ಪ್ಯಾರಾಲಿಂಪಿಕ್ ಚಾಂಪಿಯನ್ ಸುಮಿತ್ ಅಂತಿಲ್, ಒಲಿಂಪಿಕ್ ಚಾಂಪಿಯನ್ ನೀರಜ್ ಚೋಪ್ರಾ ಹಾಗೂ ಪ್ಯಾರಾಲಿಂಪಿಕ್ ಚಾಂಪಿಯನ್ ಗಳಾದ ನವದೀಪ್ ಸಿಂಗ್ ಮತ್ತು ಸಂದೀಪ್ ಚೌಧರಿ ಆರೋಪಿಸಿದ್ದಾರೆ.
ಈ ನಾಲ್ವರು ಅಥ್ಲೀಟ್ ಗಳು ಎಪ್ರಿಲ್ 10ರಂದು ಭಾರತೀಯ ಕ್ರೀಡಾ ಪ್ರಾಧಿಕಾರಕ್ಕೆ ಇಮೇಲ್ ಮೂಲಕ ಲಿಖಿತ ದೂರುಗಳನ್ನು ಸಲ್ಲಿಸಿದ್ದಾರೆ. ಆದರೆ, ದೂರಿನ ಬಳಿಕ ಯಾವುದೇ ಪ್ರಗತಿ ಆಗಿಲ್ಲ ಎಂದು ಸುಮಿತ್ ಹೇಳಿದ್ದಾರೆ ಎಂದು ‘ಸ್ಪೋರ್ಟ್ಸ್ ಸ್ಟಾರ್’ ವರದಿ ಮಾಡಿದೆ.
ಸುಮಿತ್ ತಮ್ಮ ದೂರಿನಲ್ಲಿ ಕಳೆದ ವರ್ಷದ ನವೆಂಬರ್ ನಲ್ಲಿ ನಡೆದ ಘಟನೆಯೊಂದನ್ನು ಉಲ್ಲೇಖಿಸಿದ್ದಾರೆ. ಸಚಿನ್ ಯಾದವ್ ಅವರ ಕೋಚ್ ನವಲ್ ಸಿಂಗ್ ತಮ್ಮ ಮ್ಯಾನೇಜರ್ ಗೆ ಒಂದು ರಾತ್ರಿ ಧ್ವನಿ ಸಂದೇಶವನ್ನು ಕಳುಹಿಸಿದ್ದು, ಅದರಲ್ಲಿ ಅತ್ಯಂತ ನಿಂದನಾತ್ಮಕ ಭಾಷೆಯನ್ನು ಬಳಸಿದ್ದಾರೆ ಎಂದು ಸುಮಿತ್ ತಿಳಿಸಿದ್ದಾರೆ. ‘‘ಅವರ ಬೈಗುಳವು ಕೇವಲ ನನಗೆ ಮಾತ್ರವಾಗಿರಲಿಲ್ಲ, ನೀರಜ್ ಚೋಪ್ರಾ ಸೇರಿದಂತೆ ಇತರ ಹಲವಾರು ಭಾರತೀಯ ಜಾವೆಲಿನ್ ಎಸೆತಗಾರರಿಗೂ ಅವರು ಆ ಧ್ವನಿ ಸಂದೇಶದಲ್ಲಿ ಕೆಟ್ಟದಾಗಿ ಬೈದಿದ್ದಾರೆ,’’ ಎಂದು ಹೇಳಿದ್ದಾರೆ.
‘‘ಹಿಂದೆ ಹಲವು ವರ್ಷಗಳ ಕಾಲ ನನಗೆ ಮತ್ತು ನವದೀಪ್ಗೆ ನವಲ್ ಸಿಂಗ್ ಕೋಚ್ ಆಗಿದ್ದರು. ಆ ಸಂದರ್ಭದಲ್ಲಿ ಅವರು ನಿರಂತರವಾಗಿ ನನಗೆ ಕೆಟ್ಟದಾಗಿ ಬೈಯುತ್ತಿದ್ದರು. ಅವರು ಕಂಠಪೂರ್ತಿ ಕುಡಿದು ನಮಗೆ ಗೊತ್ತಿರುವವರಿಗೆ ಧ್ವನಿ ಸಂದೇಶಗಳನ್ನು ಕಳುಹಿಸುತ್ತಿದ್ದರು ಮತ್ತು ಅದರಲ್ಲಿ ನಮಗೆ ಕೆಟ್ಟದಾಗಿ ಬೈಯುತ್ತಿದ್ದರು. ಅವರು ನನ್ನ ಮಾಜಿ ಕೋಚ್ ಎನ್ನುವ ಒಂದೇ ಕಾರಣಕ್ಕೆ ನಾನು ಈವರೆಗೆ ಸಹಿಸಿಕೊಂಡಿದ್ದೆ. ಆದರೆ, ಅವರು ನಮ್ಮ ಕುಟುಂಬ ಸದಸ್ಯರನ್ನೂ ಕೆಟ್ಟದಾಗಿ ಬೈಯಲು ಆರಂಭಿಸಿದಾಗ ಸಹಿಸಲು ಸಾಧ್ಯವಾಗಲಿಲ್ಲ.
ಮುಂದಿನ ತಲೆಮಾರಿನ ಅಥ್ಲೀಟ್ ಗಳು ಹೆದರಿಕೆಯಿಲ್ಲದೆ ತರಬೇತಿ ಪಡೆಯಲು ಸಾಧ್ಯವಾಗಬೇಕಾದರೆ ನಾನು ಈಗ ದೂರು ನೀಡುವುದು ಅಗತ್ಯವಾಗಿದೆ. ಇಲ್ಲವಾದರೆ, ಅಥ್ಲೀಟ್ ಆಗಿರುವುದಕ್ಕೆ ಏನು ಅರ್ಥ? ನಾವು ಗೆಲ್ಲುತ್ತಾ ಹೋಗಬಹುದು. ಆದರೆ, ನಮ್ಮ ಕುಟುಂಬ ಸದಸ್ಯರಿಗೆ ಬೈದರೆ, ಅವರಿಗೆ ಗೌರವ ಕೊಡದಿದ್ದರೆ ಏನರ್ಥ?’’ ಎಂದು ಸುಮಿತ್ ಹೇಳಿದರು.






