Asian Games | ಟೀಮ್ ಇಂಡಿಯಾಕ್ಕೆ ಶುಭ ಕೋರಿದ ನೀರಜ್ ಚೋಪ್ರಾ

ನೀರಜ್ ಚೋಪ್ರಾ | Photo Credit : PTI
ಹೊಸದಿಲ್ಲಿ, ಸೆ. 19: ಜಪಾನ್ ನ ನಗೋಯಾದಲ್ಲಿ ಶನಿವಾರ 20ನೇ ಆವೃತ್ತಿಯ ಏಶ್ಯನ್ ಗೇಮ್ಸ್ ಅಧಿಕೃತವಾಗಿ ಉದ್ಘಾಟನೆಗೊಂಡಿದ್ದು, ಒಲಿಂಪಿಕ್ಸ್ ಚಾಂಪಿಯನ್ ನೀರಜ್ ಚೋಪ್ರಾ ಅವರು ಟೀಮ್ ಇಂಡಿಯಾಕ್ಕೆ ಶುಭ ಹಾರೈಸಿದ್ದಾರೆ. ಕ್ರೀಡಾಪಟುಗಳು ದೇಶಕ್ಕೆ ಹೆಮ್ಮೆ ತರಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪಾದದ ಗಾಯದಿಂದಾಗಿ 2026ರ ಆವೃತ್ತಿಯ ಏಶ್ಯನ್ ಗೇಮ್ಸ್ನಿಂದ ವಂಚಿತರಾಗಿರುವ ಚೋಪ್ರಾ, ವರ್ಣರಂಜಿತ ಉದ್ಘಾಟನಾ ಸಮಾರಂಭದೊಂದಿಗೆ ಆರಂಭವಾಗಿರುವ ಗೇಮ್ಸ್ನಲ್ಲಿ ಭಾಗವಹಿಸಲಿರುವ ಭಾರತೀಯ ಅತ್ಲೀಟ್ಗಳಿಗೆ ಎಕ್ಸ್ ಮೂಲಕ ತಮ್ಮ ಸಂದೇಶ ರವಾನಿಸಿದರು.
‘‘2026ರ ಏಶ್ಯನ್ ಗೇಮ್ಸ್ಗೆ ಟೀಮ್ ಇಂಡಿಯಾಕ್ಕೆ ಶುಭಾಶಯಗಳು. ಎಲ್ಲರೂ ದೇಶಕ್ಕೆ ಹೆಮ್ಮೆ ತರಲಿದ್ದಾರೆಂಬ ಬಗ್ಗೆ ನನಗೆ ಭರವಸೆ ಇದೆ’’ ಎಂದು ಚೋಪ್ರಾ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಏಶ್ಯನ್ ಗೇಮ್ಸ್ ಸೆ. 19ರಿಂದ ಅ. 4ರವರೆಗೆ ನಡೆಯಲಿದ್ದು, ಭಾರತವು ಹಿಂದಿನ ಆವೃತ್ತಿಗಿಂತ ಉತ್ತಮ ಪ್ರದರ್ಶನ ತೋರುವ ವಿಶ್ವಾಸದಲ್ಲಿದೆ.
ಏಶ್ಯನ್ ಗೇಮ್ಸ್ನಲ್ಲಿ ಎರಡು ಬಾರಿ ಚಿನ್ನದ ಪದಕ ಗೆದ್ದಿರುವ ಚೋಪ್ರಾ, 2020ರ ಟೋಕಿಯೊ ಒಲಿಂಪಿಕ್ಸ್ನಲ್ಲಿ ಚಿನ್ನ ಹಾಗೂ 2024ರ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಬೆಳ್ಳಿ ಪದಕ ಜಯಿಸಿದ್ದಾರೆ. 28ರ ವಯಸ್ಸಿನ ಚೋಪ್ರಾ ತರಬೇತಿಯ ಸಮಯದಲ್ಲಿ ಪಾದದ ನೋವಿಗೆ ಒಳಗಾಗಿದ್ದು, ಚೋಪ್ರಾ ಅವರ ಅನುಪಸ್ಥಿತಿಯು ಭಾರತದ ಅತ್ಲೆಟಿಕ್ಸ್ ಅಭಿಯಾನಕ್ಕೆ ಮಹತ್ವದ ಹಿನ್ನಡೆಯಾಗಿದೆ.
ಚೋಪ್ರಾಗೆ ಏಶ್ಯನ್ ಗೇಮ್ಸ್ನಲ್ಲಿ ತಮ್ಮ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲವಾದರೂ, ಭಾರತವು ನಗೋಯಾದಲ್ಲಿ ತನ್ನ ಅಭಿಯಾನ ಆರಂಭಿಸುವ ಸಮಯದಲ್ಲಿ ಅವರು ತಮ್ಮ ಸಂದೇಶ ನೀಡಿದ್ದಾರೆ.






