ನೀರಜ್ ಇತಿಹಾಸ ನಿರ್ಮಿಸಲಿದ್ದಾರೆ, ಭಾರತ ಟೋಕಿಯೊ ಗೇಮ್ಸ್ ದಾಖಲೆ ಮುರಿಯಲಿದೆ: ಪೇಸ್

ನೀರಜ್ ಚೋಪ್ರಾ | PC: olympics.com
ಹೊಸದಿಲ್ಲಿ : ಭಾರತದ ಜಾವೆಲಿನ್ ಸ್ಟಾರ್ ನೀರಜ್ ಚೋಪ್ರಾ ಸತತ ಒಲಿಂಪಿಕ್ಸ್ ಚಿನ್ನದ ಪದಕದೊಂದಿಗೆ ಇತಿಹಾಸ ನಿರ್ಮಿಸುವ ಗುರಿ ಇಟ್ಟುಕೊಂಡಿದ್ದಾರೆ. ಟೋಕಿಯೊ ಒಲಿಂಪಿಕ್ಸ್ ನಲ್ಲಿ 87.58 ಮೀ.ದೂರಕ್ಕೆ ಜಾವೆಲಿನ್ ಎಸೆದಿರುವ ನೀರಜ್ ಚಿನ್ನದ ಪದಕ ಜಯಿಸಿದ್ದರು.
ನೀರಜ್ ಪ್ಯಾರಿಸ್ನಲ್ಲಿ ತನ್ನ ಎರಡನೇ ಒಲಿಂಪಿಕ್ಸ್ ಗಾಗಿ ತಯಾರಿ ನಡೆಸುತ್ತಿದ್ದಾರೆ. ಎಲ್ಲರ ಕಣ್ಣು ಪ್ರತಿಭಾವಂತ ಅಥ್ಲೀಟ್ ನೀರಜ್ ಮೇಲೆ ನೆಟ್ಟಿದೆ. ನೀರಜ್ ಐತಿಹಾಸಿಕ ಸಾಧನೆಯ ವಿಶ್ವಾಸದಲ್ಲಿದ್ದಾರೆ.
ಭಾರತದ ಮೊದಲ ವೈಯಕ್ತಿಕ ಒಲಿಂಪಿಕ್ಸ್ ಚಿನ್ನದ ಪದಕವನ್ನು ಶೂಟರ್ ಅಭಿನವ್ ಬಿಂದ್ರಾ 2008ರ ಬೀಜಿಂಗ್ ಒಲಿಂಪಿಕ್ಸ್ನಲ್ಲಿ ಗಳಿಸಿದ್ದರು. ಆ ನಂತರ ಟೋಕಿಯೊದಲ್ಲಿ ನಡೆದಿದ್ದ ಒಲಿಂಪಿಕ್ಸ್ನಲ್ಲಿ ನೀರಜ್ ಭಾರತಕ್ಕೆ ವೈಯಕ್ತಿಕ ವಿಭಾಗದಲ್ಲಿ ಎರಡನೇ ಚಿನ್ನದ ಪದಕ ಗೆದ್ದುಕೊಟ್ಟಿದ್ದರು.
ಪ್ಯಾರಿಸ್ನಲ್ಲಿ ಮತ್ತೊಂದು ಚಿನ್ನದ ಪದಕ ಗೆದ್ದುಕೊಂಡು ಬರುವ ಸಾಮರ್ಥ್ಯ ನೀರಜ್ಗೆ ಇದೆ ಎಂದು ಲೆಜೆಂಡರಿ ಟೆನಿಸ್ ಪಟು ಲಿಯಾಂಡರ್ ಪೇಸ್ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪ್ಯಾರಿಸ್ನಲ್ಲಿ ಭಾರತದ ಬ್ಯಾಡ್ಮಿಂಟನ್ ಕ್ವೀನ್ ಪಿ.ವಿ. ಸಿಂಧು ಸತತ ಮೂರನೇ ಬಾರಿ ಪದಕ ಗೆಲ್ಲಲಿದ್ದಾರೆ ಎಂದು 1996ರ ಅಟ್ಲಾಂಟ ಗೇಮ್ಸ್ ನಲ್ಲಿ ಪುರುಷರ ಸಿಂಗಲ್ಸ್ ಟೆನಿಸ್ನಲ್ಲಿ ಕಂಚಿನ ಪದಕ ಬಾಚಿಕೊಂಡಿದ್ದ ಪೇಸ್ ಹೇಳಿದ್ದಾರೆ.
ಸಿಂಧು ಅವರು ರಿಯೋ ಒಲಿಂಪಿಕ್ಸ್ನಲ್ಲಿ ಬೆಳ್ಳಿ ಪದಕ ಜಯಿಸಿದ್ದರೆ, ಟೋಕಿಯೊ ಗೇಮ್ಸ್ನಲ್ಲಿ ಕಂಚಿಗೆ ತೃಪ್ತಿಪಟ್ಟಿದ್ದರು.
ಭಾರತವು ಟೋಕಿಯೊ ಒಲಿಂಪಿಕ್ಸ್ ನಲ್ಲಿ 7 ಪದಕಗಳನ್ನು ಜಯಿಸಿ ಅದ್ಭುತ ಸಾಧನೆ ಮಾಡಿತ್ತು. ಕೋವಿಡ್-19 ಕಾರಣ ಒಲಿಂಪಿಕ್ಸ್ ಮುಂದೂಡಲ್ಪಟ್ಟಿತ್ತು. ಅಂತಹ ಸಮಯದಲ್ಲಿ ಕ್ರೀಡಾ ಸಚಿವಾಲಯವು ಅಥ್ಲೀಟ್ಗಳಿಗೆ ಬೆಂಬಲ ನೀಡಿದೆ. ರಿಯೋ ಗೇಮ್ಸ್ ನಿಂದ ಟೋಕಿಯೊ ಗೇಮ್ಸ್ ತನಕ ಕ್ರೀಡಾಪಟುಗಳು ಉತ್ತಮ ನಿರ್ವಹಣೆ ತೋರಿದ್ದಾರೆ. ಒಲಿಂಪಿಕ್ಸ್ ಗಾಗಿ ಪ್ಯಾರಿಸ್ಗೆ ಪ್ರಯಾಣಿಸಿರುವ ಭಾರತದ ಪ್ರತಿಯೊಬ್ಬ ಅಥ್ಲೀಟ್ಗಳಿಗೂ ಶುಭ ಹಾರೈಸುವೆ ಎಂದು ಪೇಸ್ ತಿಳಿಸಿದ್ದಾರೆ.
ನಮ್ಮ ಒಲಿಂಪಿಕ್ಸ್ ಇತಿಹಾಸದಲ್ಲಿ ನೀರಜ್ ಓರ್ವ ಶ್ರೇಷ್ಠ ಕ್ರೀಡಾಪಟು. ಅವರ ಮೇಲೆ ಅಪಾರ ಒತ್ತಡವಿದೆ, ಅವರ ಕಠಿಣ ಪರಿಶ್ರಮ, ನಮ್ರತೆ ಹಾಗೂ ಉತ್ಸಾಹಕ್ಕೆ ನಾನು ದೊಡ್ಡ ಬೆಂಬಲಿಗನಾಗಿದ್ದೇನೆ. ಅವರು ಒತ್ತಡವನ್ನು ನಿಭಾಯಿಸುವ ರೀತಿಯಿಂದ ಯುವಕರು ಕಲಿಯಬೇಕಾಗಿದೆ. ಈ ಬಾರಿಯೂ ಅವರು ಪದಕದೊಂದಿಗೆ ವಾಪಸಾಗುವ ವಿಶ್ವಾಸವಿದೆ. ಪಿ.ವಿ. ಸಿಂಧು ಓರ್ವ ಶ್ರೇಷ್ಠ ಬ್ಯಾಡ್ಮಿಂಟನ್ ಆಟಗಾರ್ತಿಯಾಗಿದ್ದಾರೆ. ಒಲಿಂಪಿಕ್ಸ್ ನಲ್ಲಿ ಸತತ ಎರಡು ಪದಕ ಗೆಲ್ಲುವುದು ಮಹತ್ವದ ಸಾಧನೆಯಾಗಿದೆ. ನಾನು ಆಕೆಯ ಪ್ರಬಲ ಬೆಂಬಲಿಗ. ಪ್ಯಾರಿಸ್ ಒಲಿಂಪಿಕ್ಸ್ಗಾಗಿ ಅವರಿಗೆ ಶುಭ ಕೋರುವೆ ಎಂದು ಆಂಗ್ಲ ದಿನಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಪೇಸ್ ಹೇಳಿದ್ದಾರೆ.
ಭಾರತದಲ್ಲಿ ಟೆನಿಸ್ ಭವಿಷ್ಯದ ಕುರಿತು ಪ್ರತಿಕ್ರಿಯಿಸಿದ ಪೇಸ್, ಭಾರತೀಯ ಟೆನಿಸ್ನಲ್ಲಿ ಅದರಲ್ಲೂ ಮುಖ್ಯವಾಗಿ ಡಬಲ್ಸ್ ಆಡುವ ಸಾಕಷ್ಟು ಕ್ರೀಡಾಳುಗಳು ಇದ್ದಾರೆ. ಹೆಚ್ಚಿನ ಜ್ಞಾನ ಹಾಗೂ ಪರಿಶ್ರಮದಿಂದ ನಾವು ನಮ್ಮ ಸಿಂಗಲ್ಸ್ ಆಟಗಾರರನ್ನು ಗಮನಾರ್ಹವಾಗಿ ಅಭಿವೃದ್ದಿಪಡಿಸಬಹುದು. ಇದು ನಮ್ಮ ಮುಂದಿನ ಹೆಜ್ಜೆಯಾಗಬೇಕು. ಏಕೆಂದರೆ ದೈಹಿಕವಾಗಿ ಹಾಗೂ ಆರ್ಥಿಕವಾಗಿ ಟೆನಿಸ್ ಒಂದು ಸವಾಲಿನ ಕ್ರೀಡೆ ಎಂದರು.







