ಏಷ್ಯನ್ ಪ್ಯಾರಾ ಗೇಮ್ಸ್ ನಲ್ಲಿ 3 ಬಾರಿ ಚಿನ್ನದ ಪದಕ ವಿಜೇತ ನೀರಜ್ ಯಾದವ್ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ: ಆತ್ಮಹತ್ಯೆ ಶಂಕೆ

ನೀರಜ್ ಯಾದವ್ (Photo: Economic Times)
ಹೊಸದಿಲ್ಲಿ: ಮೂರು ಬಾರಿ ಏಷ್ಯನ್ ಪ್ಯಾರಾ ಗೇಮ್ಸ್ನಲ್ಲಿ ಚಿನ್ನದ ಪದಕ ಗೆದ್ದಿದ್ದ ಭಾರತದ ಪ್ಯಾರಾ ಅಥ್ಲೀಟ್ ನೀರಜ್ ಯಾದವ್ (42) ಮಂಗಳವಾರ ರಾತ್ರಿ ಫ್ಲ್ಯಾಟ್ನಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅವರ ಸಾವಿನ ನಿಖರ ಕಾರಣ ಇನ್ನೂ ಅಧಿಕೃತವಾಗಿ ದೃಢಪಟ್ಟಿಲ್ಲ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಉತ್ತರ ಪ್ರದೇಶ ಮೂಲದ ನೀರಜ್ ಯಾದವ್ ಅವರು F55 ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದರು.
ಏಳನೇ ವಯಸ್ಸಿನಲ್ಲಿ ಪೋಲಿಯೊ ಬಾಧಿಸಿದ ನಂತರದ ಪಾರ್ಶ್ವವಾಯು ಸಮಸ್ಯೆಗೆ ಒಳಗಾಗಿದ್ದ ಅವರು, ದೈಹಿಕ ಸವಾಲುಗಳ ನಡುವೆಯೂ ಕ್ರೀಡೆಯಲ್ಲಿ ಸಾಧನೆ ಮಾಡಿದ್ದರು. 2005ರಿಂದ 2012ರವರೆಗೆ ವೀಲ್ಚೇರ್ ಟೆನಿಸ್ನಲ್ಲಿ ತೊಡಗಿಸಿಕೊಂಡಿದ್ದ ಅವರು ಬಳಿಕ ಪ್ಯಾರಾ ಅಥ್ಲೆಟಿಕ್ಸ್ಗೆ ಪ್ರವೇಶಿಸಿದ್ದರು. 2015ರ ದಿಲ್ಲಿ ರಾಜ್ಯ ಅಥ್ಲೆಟಿಕ್ಸ್ ಕೂಟದಲ್ಲಿ ಶಾಟ್ಪುಟ್, ಜಾವೆಲಿನ್ ಮತ್ತು ಡಿಸ್ಕಸ್ ಎಸೆತಗಳಲ್ಲಿ ಚಿನ್ನದ ಪದಕ ಗೆದ್ದು ಗಮನ ಸೆಳೆದಿದ್ದರು.
2018ರಲ್ಲಿ ಜಕಾರ್ತದಲ್ಲಿ ನಡೆದ ಏಷ್ಯನ್ ಪ್ಯಾರಾ ಗೇಮ್ಸ್ನ ಪುರುಷರ F55 ಜಾವೆಲಿನ್ ಎಸೆತದಲ್ಲಿ 29.84 ಮೀಟರ್ ದೂರ ಎಸೆಯುವ ಮೂಲಕ ಏಷ್ಯನ್ ದಾಖಲೆಯೊಂದಿಗೆ ನೀರಜ್ ಚಿನ್ನದ ಪದಕ ಗೆದ್ದಿದ್ದರು.
2023ರಲ್ಲಿ ಚೀನಾದ ಹಾಂಗ್ಝೌನಲ್ಲಿ ನಡೆದ ಏಷ್ಯನ್ ಪ್ಯಾರಾ ಗೇಮ್ಸ್ನಲ್ಲಿ ಜಾವೆಲಿನ್ ಮತ್ತು ಡಿಸ್ಕಸ್ ಎಸೆತಗಳಲ್ಲಿ ಚಿನ್ನ ಗೆದ್ದು ತಮ್ಮ ಪದಕಗಳ ಸಂಖ್ಯೆಯನ್ನು ಮೂರಕ್ಕೆ ಏರಿಸಿದ್ದರು.
2023ರ ಅಕ್ಟೋಬರ್ನಲ್ಲಿ ಬೆಂಗಳೂರಿನಲ್ಲಿ ಸ್ಪರ್ಧೆಯ ಹೊರಗೆ ಸಂಗ್ರಹಿಸಲಾದ ಅವರ ಮಾದರಿಯಲ್ಲಿ ನಿಷೇಧಿತ ಅನಾಬಾಲಿಕ್ ಸ್ಟೆರಾಯ್ಡ್ ಸ್ಟಾನೊಜೊಲಾಲ್ ಪತ್ತೆಯಾದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕ (NADA) ನೀರಜ್ ಅವರನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಿತ್ತು. ನಂತರ ಅವರು ತಮ್ಮ ಮಾದರಿಯ ಡಿಎನ್ಎ ಪರೀಕ್ಷೆ ನಡೆಸುವಂತೆ ಕೋರಿದ್ದರು ಎಂದು ವರದಿಯಲ್ಲಿ ತಿಳಿಸಲಾಗಿದೆ.
ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ: ಕೋಚ್
ಭಾರತದ ಮುಖ್ಯ ಪ್ಯಾರಾ ಅಥ್ಲೆಟಿಕ್ಸ್ ಕೋಚ್ ಎಸ್. ಸತ್ಯನಾರಾಯಣ ಅವರು ನೀರಜ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ತಮಗೆ ಲಭಿಸಿದೆ ಎಂದು ಟೈಮ್ಸ್ ಆಫ್ ಇಂಡಿಯಾಗೆ ತಿಳಿಸಿದ್ದಾರೆ. ಆದರೆ, ಅವರ ಸಾವಿನ ಕಾರಣವನ್ನು ಅಧಿಕೃತವಾಗಿ ದೃಢಪಡಿಸಿಲ್ಲ.
ಏಷ್ಯನ್ ಪ್ಯಾರಾ ಗೇಮ್ಸ್ನಲ್ಲಿ ಭಾಗವಹಿಸುವ ನಿರೀಕ್ಷೆ ಹೊಂದಿದ್ದ ನೀರಜ್ಗೆ ಅಮಾನತಿನಿಂದಾಗಿ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದಿರುವುದು ಮಾನಸಿಕವಾಗಿ ಪರಿಣಾಮ ಬೀರಿರಬಹುದು ಎಂದು ಕೋಚ್ ಅಭಿಪ್ರಾಯಪಟ್ಟಿದ್ದಾರೆ.






