ಒಲಿಂಪಿಕ್ಸ್ನಲ್ಲಿ ಪದಕ ಗೆಲ್ಲುವತ್ತ ನೀರೂ ಧಾಂಡಾ ಚಿತ್ತ

Photo : PTI
ಹೊಸದಿಲ್ಲಿ: 2026ರ ಆವೃತ್ತಿಯ ಏಶ್ಯನ್ ಗೇಮ್ಸ್ಗೆ ತೆರಳಲು ಕೆಲವೇ ದಿನಗಳು ಬಾಕಿ ಇರುವಾಗ ನೀರೂ ಧಾಂಡಾ ವೈರಲ್ ಜ್ವರದಿಂದ ಬಳಲಿದ್ದರು. ಜಪಾನ್ಗೆ ತೆರಳುವ ಮೊದಲು ಚೇತರಿಸಿಕೊಳ್ಳಲು ಹೆಚ್ಚು ಸಮಯ ಲಭಿಸಿರಲಿಲ್ಲ. ಔಷಧಿಗಳು, ಓಆರ್ಎಸ್ ಹಾಗೂ ಏಶ್ಯನ್ ಗೇಮ್ಸ್ನಲ್ಲಿ ಪದಕ ಗೆಲ್ಲುವ ಕನಸು ಹೊತ್ತು ಜಪಾನಿಗೆ ತೆರಳಿದ್ದರು.
ಐಚಿ-ನಗೋಯಕ್ಕೆ ತಲುಪಿದ ನಂತರ ತನ್ನ ಹೊಟೇಲ್ ಕೊಠಡಿಗೆ ತೆರಳಿದ ನೀರೂ, ಶಾಟ್ ಗನ್ ಹಿಡಿದು, ‘ನೀರೂ ನೀನು ತರಬೇತಿಯಲ್ಲಿದ್ದೀಯ’’ ಎಂದು ಮನಸ್ಸಿನಲ್ಲಿ ಅಂದುಕೊಂಡಿದ್ದರು. ಈ ರೀತಿಯ ಸಂದೇಶವನ್ನು ತನ್ನ ಮನಸ್ಸಿಗೆ ರವಾನಿಸಿದ್ದರು. ಜ್ವರದ ಬಗ್ಗೆ ತಲೆ ಕೆಡಿಸಿಕೊಳ್ಳದೆ ಏಕಾಗ್ರತೆ ಕಾಯ್ದುಕೊಂಡರು.
ನೀರಿನ ಬಾಟಲ್ಗಳು, ಒಆರ್ಎಸ್ ಹಾಗೂ ಔಷಧಿಗಳನ್ನು ತನ್ನೊಂದಿಗೆ ಇಟ್ಟುಕೊಂಡಿದ್ದ ನೀರೂ ತನ್ನ ಪದಕದ ಕನಸನ್ನು ಉಳಿಸಿಕೊಂಡರು. ಈ ವರ್ಷಾರಂಭದಲ್ಲಿ ಲೊನಾಟೊದಲ್ಲಿ ಐಎಸ್ಎಸ್ಎಫ್ ವಿಶ್ವಕಪ್ನಲ್ಲಿ ಚಿನ್ನದ ಪದಕ ಜಯಿಸಿದ್ದ ನೀರೂ ಏಶ್ಯನ್ ಗೇಮ್ಸ್ನಲ್ಲಿ ಎರಡು ಚಿನ್ನ ಹಾಗೂ ಒಂದು ಬೆಳ್ಳಿ ಜಯಿಸಿ ಭಾರತದ ಪರ ಶ್ರೇಷ್ಠ ಪ್ರದರ್ಶನ ನೀಡಿದ ಕ್ರೀಡಾಪಟುವಾಗಿ ಹೊರಹೊಮ್ಮಿದರು.
ನೀರೂ ಮೊದಲಿಗೆ ಮಹಿಳೆಯರ ವೈಯಕ್ತಿಕ ಟ್ರ್ಯಾಪ್ ಇವೆಂಟ್ನಲ್ಲಿ ಚಿನ್ನದ ಪದಕ ಜಯಿಸಿದರು. ಆನಂತರ ಮನೀಶಾ ಕೀರ್ ಹಾಗೂ ಆಶಿಮಾ ಅಹ್ಲಾವತ್ ಅವರೊಂದಿಗೆ ಸೇರಿಕೊಂಡು ಮಹಿಳೆಯರ ಟ್ರ್ಯಾಪ್ ಟೀಮ್ ಇವೆಂಟ್ನಲ್ಲಿ ಬೆಳ್ಳಿ ಪದಕ ಜಯಿಸಿದರು. ಗೇಮ್ಸ್ನ ಕೊನೆಯ ದಿನಕ್ಕಿಂತ ಮೊದಲು ಕೀನ್ಯನ್ ಚೆನೈ ಜೊತೆ ಟ್ರ್ಯಾಪ್ ಮಿಕ್ಸೆಡ್ ಟೀಮ್ ಸ್ಪರ್ಧೆಯಲ್ಲಿ ಮತ್ತೊಂದು ಚಿನ್ನ ಜಯಿಸಿದ್ದರು.
ಶೂಟಿಂಗ್ ರೇಂಜ್ಗೆ ತಲುಪುವ ಮೊದಲೇ ಜ್ವರದಿಂದ ಪೀಡಿತರಾಗಿದ್ದ ನೀರೂ ಅವರ ಮೂರು ಪದಕಗಳ ಸಾಧನೆಯು ಅಸಾಧಾರಣವಾಗಿದೆ.
‘‘ನಾನು ಅಸ್ವಸ್ಥಳಾಗಿದ್ದೇನೆ ಅಥವಾ ಸುಸ್ತಾಗಿದ್ದೇನೆ ಎಂಬ ಭಾವನೆಯನ್ನು ನನ್ನ ಮನಸ್ಸಿನೊಳಗೆ ಬರಲು ಬಿಡಲಿಲ್ಲ. ನಾನು ಅನಾರೋಗ್ಯದಿಂದ ಬಳಲುತ್ತಿದ್ದೇನೆ ಎಂದು ಯೋಚಿಸಲು ನಾನು ಇಷ್ಟಪಡಲಿಲ್ಲ. ನನಗೆ ನಿತ್ರಾಣ ಅಥವಾ ದೌರ್ಬಲ್ಯವೆನಿಸಿದಾಗಲೆಲ್ಲಾ,ನೀರೂ ನೀನು ಈಗ ತರಬೇತಿಯಲ್ಲಿದ್ದೀಯಾ ಎಂದು ನನಗೆ ನಾನೇಜೋರಾಗಿ ಹೇಳಿಕೊಳ್ಳುತ್ತಿದ್ದೆ. ಏಶ್ಯನ್ ಗೇಮ್ಸ್ನುದ್ದಕ್ಕೂ ನನ್ನನ್ನು ಹುರಿದುಂಬಿಸಿದ್ದು, ಇದೇ’’ ಎಂದು ನೀರೂ ‘ಟೈಮ್ಸ್ ಆಫ್ ಇಂಡಿಯಾ’ಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ತಿಳಿಸಿದರು.
ಭಾರತದ ಮೊತ್ತ ಮೊದಲ ಏಶ್ಯನ್ ಗೇಮ್ಸ್ ಶೂಟಿಂಗ್ ಗೋಲ್ಡ್ ಮೆಡಲಿಸ್ಟ್ ರಾಜಾ ರಣಧೀರ್ ಸಿಂಗ್ಗೆ ನೀರೂ ತನ್ನ ಮೂರು ಪದಕಗಳ ಗೊಂಚಲನ್ನು ಸಮರ್ಪಿಸಿದರು. ರಣಧೀರ್ ಸಿಂಗ್ ಮೇನಲ್ಲಿ ತನ್ನ 79ನೇ ವಯಸ್ಸಿನಲ್ಲಿ ನಿಧನರಾದರು. ಐದು ಬಾರಿಯ ಒಲಿಂಪಿಯನ್ ರಣಧೀರ್ 1978ರಲ್ಲಿ ಏಶ್ಯನ್ ಗೇಮ್ಸ್ನಲ್ಲಿ ಭಾರತಕ್ಕೆ ಮೊತ್ತ ಮೊದಲ ಚಿನ್ನದ ಪದಕ ಗೆದ್ದುಕೊಟ್ಟಿದ್ದರು.
ವಿಶ್ವಕಪ್ ಮುಕ್ತಾಯವಾಯಿತು. ಏಶ್ಯನ್ ಗೇಮ್ಸ್ ಸಮಾಪ್ತಿಯಾಗಿದೆ. ಇದೀಗ ನೀರೂ ತನ್ನ ಚಿತ್ತವನ್ನು ಲಾಸ್ ಏಂಜಲೀಸ್ನಲ್ಲಿ 2028ರಲ್ಲಿ ನಡೆಯಲಿರುವ ಒಲಿಂಪಿಕ್ ಗೇಮ್ಸ್ನತ್ತ ಹರಿಸಲಿದ್ದಾರೆ. ದೋಹಾದಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್ಶಿಪ್ ನೀರೂ ಅವರ ತಕ್ಷಣದ ಗುರಿಯಾಗಿದೆ. ಈ ಚಾಂಪಿಯನ್ಶಿಪ್ 2028ರ ಒಲಿಂಪಿಕ್ಸ್ಗೆ ಕೋಟಾ ಅವಕಾಶವನ್ನು ಕಲ್ಪಿಸಲಿದೆ.
‘‘ಇದೀಗ ಜಪಾನ್ನಿಂದ ತೆರಳಿದ ನಂತರ ನನ್ನ ಗಮನ ದೋಹಾದಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್ಶಿಪ್ನತ್ತ ಹರಿಯಲಿದೆ. ಲಾಸ್ ಏಂಜಲೀಸ್ ಒಲಿಂಪಿಕ್ಸ್ಗೆ ಅರ್ಹತೆ ಪಡೆಯಲು ಇದು ನೆರವಾಗಲಿದೆ. ನಾನು ಅದರತ್ತ ಗಮನ ಹರಿಸುವೆ. ಅದು ನನ್ನ ಅಂತಿಮ ಗುರಿ. ಒಲಿಂಪಿಕ್ಸ್ನಲ್ಲಿ ಪದಕ ಗೆಲ್ಲಲೇಬೇಕು’’ಎಂದು ನೀರೂ ಹೇಳಿದ್ದಾರೆ.






