ಅತ್ಯಾಚಾರ ಆರೋಪದಿಂದ ನೇಪಾಳ ಕ್ರಿಕೆಟಿಗ ದೋಷಮುಕ್ತ
![ಅತ್ಯಾಚಾರ ಆರೋಪದಿಂದ ನೇಪಾಳ ಕ್ರಿಕೆಟಿಗ ದೋಷಮುಕ್ತ ಅತ್ಯಾಚಾರ ಆರೋಪದಿಂದ ನೇಪಾಳ ಕ್ರಿಕೆಟಿಗ ದೋಷಮುಕ್ತ](https://www.varthabharati.in/h-upload/2024/05/15/1266792-19.webp)
ಸಂದೀಪ್ ಲಮಿಛಾನೆ | PC : hindustantimes.com
ಕಠ್ಮಂಡು : ನೇಪಾಳ ಕ್ರಿಕೆಟ್ ತಂಡದ ತಾರಾ ಆಟಗಾರ ಹಾಗೂ ಮಾಜಿ ನಾಯಕ ಸಂದೀಪ್ ಲಮಿಛಾನೆಯನ್ನು ನ್ಯಾಯಾಲಯವೊಂದು ಬುಧವಾರ ಅತ್ಯಾಚಾರ ಪ್ರಕರಣದಿಂದ ದೋಷಮುಕ್ತಗೊಳಿಸಿದೆ.
18 ವರ್ಷದ ಬಾಲಕಿಯ ಮೇಲೆ ಅತ್ಯಾಚಾರಗೈದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ, ಕೆಳ ನ್ಯಾಯಾಲಯವೊಂದು ಜನವರಿಯಲ್ಲಿ ಲಾಮಿಛಾನೆಗೆ 8 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಕೆಳ ನ್ಯಾಯಾಲಯದ ಆದೇಶವನ್ನು ಅವರು ಹೈಕೋರ್ಟ್ನಲ್ಲಿ ಪ್ರಶ್ನಿಸಿದ್ದರು.
23 ವರ್ಷದ ಲಾಮಿಛಾನೆ ನೇಪಾಳದ ಮಹತ್ವದ ಕ್ರಿಕೆಟಿಗನಾಗಿದ್ದು, ಭಾರತ, ಆಸ್ಟ್ರೇಲಿಯ, ಪಾಕಿಸ್ತಾನ ಮತ್ತು ವೆಸ್ಟ್ ಇಂಡೀಸ್ ಗಳಲ್ಲಿ ನಡೆಯುತ್ತಿರುವ ಪ್ರಮುಖ ಟಿ20 ಲೀಗ್ ಗಳಲ್ಲಿ ಆಡುತ್ತಿದ್ದಾರೆ.
ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಲೆಗ್ ಸ್ಪಿನ್ನರ್ ಲಾಮಿಛಾನೆಯನ್ನು ನೇಪಾಳ ಕ್ರಿಕೆಟ್ ನಿಂದ 2022ರಲ್ಲಿ ಅಮಾನತುಗೊಳಿಸಲಾಗಿತ್ತು. ಪೊಲೀಸರು ಅವರನ್ನು ಬಂಧಿಸಿ ಬಳಿಕ ಜಾಮೀನಿನಲ್ಲಿ ಬಿಡುಗಡೆಗೊಳಿಸಲಾಗಿತ್ತು.
ಕಠ್ಮಂಡು ಜಿಲ್ಲಾ ನ್ಯಾಯಾಲಯವು ಜನವರಿಯಲ್ಲಿ ಅವರಿಗೆ 8 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಅವರು ಸಂತ್ರಸ್ತೆಗೆ 3,770 ಡಾಲರ್ ಪರಿಹಾರ ನೀಡಬೇಕೆಂದು ಆದೇಶಿಸಿತ್ತು.
ಪಟನ್ ಹೈಕೋರ್ಟ್ ಕ್ರಿಕೆಟಿಗನ ಮೇಲ್ಮನವಿಯನ್ನು ಪರಿಗಣಿಸಿ ಅವರನ್ನು ದೋಷಮುಕ್ತಗೊಳಿಸಿದೆ ಎಂದು ಲಾಮಿಛಾನೆಯ ವಕೀಲರು ಹೇಳಿದ್ದಾರೆ.‘‘ಹೈಕೋರ್ಟ್ ಅವರನ್ನು ದೋಷಮುಕ್ತಗೊಳಿಸಿದೆ. ಅವರು ತಪ್ಪಿತಸ್ಥನಲ್ಲ’’ ಎಂದು ವಕೀಲೆ ಸಬಿತಾ ಭಡರಿ ಬರಲ್ ಹೇಳಿದರು.