ಏಕದಿನ ಕ್ರಿಕೆಟ್ನಿಂದ ನ್ಯೂಝಿಲ್ಯಾಂಡ್ ನಾಯಕಿ ಸೋಫಿ ಡಿವೈನ್ ನಿವೃತ್ತಿ

ಸೋಫಿ ಡಿವೈನ್ | Photo Credit : PTI
ಹೊಸದಿಲ್ಲಿ, ಅ.26: ನ್ಯೂಝಿಲ್ಯಾಂಡ್ ನಾಯಕಿ ಸೋಫಿ ಡಿವೈನ್ ಅವರು ಪ್ರಸಕ್ತ ನಡೆಯುತ್ತಿರುವ ಮಹಿಳೆಯರ ವಿಶ್ವಕಪ್ ಟೂರ್ನಿಯಲ್ಲಿ ತನ್ನ ಕೊನೆಯ ಏಕದಿನ ಪಂದ್ಯವನ್ನಾಡಿದ ನಂತರ ಏಕದಿನ ಅಂತರ್ರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿಯಾಗಿದ್ದಾರೆ.
36ರ ವಯಸ್ಸಿನ ಡಿವೈನ್ ರವಿವಾರ ವಿಶಾಖಪಟ್ಟಣದ ಎಸಿಎ-ವಿಡಿಸಿಎ ಸ್ಟೇಡಿಯಂನಲ್ಲಿ ಇಂಗ್ಲೆಂಡ್ ವಿರುದ್ಧ ತನ್ನ 159ನೇ ಹಾಗೂ ಕೊನೆಯ ಪಂದ್ಯವನ್ನು ಆಡಿದ್ದು, 35 ಎಸೆತಗಳಲ್ಲಿ 23 ರನ್ ಗಳಿಸಿದ್ದಲ್ಲದೆ, ಒಂದು ವಿಕೆಟ್ ಉರುಳಿಸಿದ್ದರು.
ಇಂಗ್ಲೆಂಡ್ ತಂಡವು 8 ವಿಕೆಟ್ ಗಳಿಂದ ಜಯ ಸಾಧಿಸಿದ ನಂತರ ಸೋಫಿ ಡಿವೈನ್ ಗೆ ಇಂಗ್ಲೆಂಡ್ ಹಾಗೂ ನ್ಯೂಝಿಲ್ಯಾಂಡ್ ತಂಡದ ಆಟಗಾರ್ತಿಯರು ಗೌರವ ರಕ್ಷೆ ನೀಡಿದರು.
ಡಿವೈನ್ ಅವರು 2006ರ ಅಕ್ಟೋಬರ್ 22ರಂದು ಆಸ್ಟ್ರೇಲಿಯ ವಿರುದ್ಧ ತನ್ನ ಚೊಚ್ಚಲ ಏಕದಿನ ಪಂದ್ಯವನ್ನು ಆಡಿದ್ದು, ಆ ನಂತರ ಅವರು 4,279 ರನ್ ಗಳಿಸಿದ್ದರು.
ಏಕದಿನ ಕ್ರಿಕೆಟ್ ನಲ್ಲಿ ಒಟ್ಟು 9 ಶತಕಗಳನ್ನು ಗಳಿಸಿದ್ದರು. ತನ್ನ 9ನೇ ಶತಕವನ್ನು ಪ್ರಸಕ್ತ ವಿಶ್ವಕಪ್ನಲ್ಲಿ ಸಿಡಿಸಿದ್ದರು. 2013ರಲ್ಲಿ ಭಾರತದಲ್ಲಿ ನಡೆದಿದ್ದ ವಿಶ್ವಕಪ್ ವೇಳೆ ದಕ್ಷಿಣ ಆಫ್ರಿಕಾ ವಿರುದ್ಧ 145 ಎಸೆತಗಳಲ್ಲಿ 131 ರನ್ ಗಳಿಸಿದ್ದು, ಇದು ಅವರ ವೈಯಕ್ತಿಕ ಗರಿಷ್ಠ ಸ್ಕೋರಾಗಿದೆ.
ತನ್ನ ಅಂತಿಮ ಏಕದಿನ ಪಂದ್ಯವನ್ನಾಡುವ ಮೊದಲು ರಾಷ್ಟ್ರೀಯ ಗೀತೆ ಮೊಳಗುತ್ತಿದ್ದಾಗ ಕಿವೀಸ್ ನಾಯಕಿ ಡಿವೈನ್ ಭಾವುಕರಾದರು.
ವೃತ್ತಿಜೀವನದಲ್ಲಿ ಬೌಲಿಂಗ್ ನಲ್ಲೂ ಮಿಂಚಿದ್ದ ಡಿವೈನ್ ಒಟ್ಟು 111 ವಿಕೆಟ್ ಗಳನ್ನು ಪಡೆದಿದ್ದರು. 2018ರಲ್ಲಿ ವೆಸ್ಟ್ಇಂಡೀಸ್ ತಂಡ ನ್ಯೂಝಿಲ್ಯಾಂಡ್ ಪ್ರವಾಸ ಕೈಗೊಂಡಿದ್ದಾಗ 24 ರನ್ ಗೆ 3 ವಿಕೆಟ್ ಗಳನ್ನು ಕಬಳಿಸಿದ್ದರು. ಡಿವೈನ್ ಏಕದಿನ ಕ್ರಿಕೆಟ್ ನಲ್ಲಿ 4,000 ಪ್ಲಸ್ ರನ್ ಹಾಗೂ 100 ಪ್ಲಸ್ ವಿಕೆಟ್ ಗಳನ್ನು ಪಡೆದ ಕಿವೀಸ್ನ ಏಕೈಕ ಹಾಗೂ ವಿಶ್ವದ 3ನೇ ಆಟಗಾರ್ತಿಯಾಗಿದ್ದಾರೆ.
2020ರಿಂದ ನ್ಯೂಝಿಲ್ಯಾಂಡ್ ತಂಡದ ನಾಯಕಿಯಾಗಿರುವ ಡಿವೈನ್ ದುಬೈನಲ್ಲಿ ಕಳೆದ ವರ್ಷ ಕಿವೀಸ್ ಪಡೆ ಟಿ20 ವಿಶ್ವಕಪ್ ಜಯಿಸುವಲ್ಲಿ ನೇತೃತ್ವವಹಿಸಿದ್ದರು.
ಡಿವೈನ್ ಟಿ20 ಕ್ರಿಕೆಟ್ ನಲ್ಲಿ ಆಡುವುದನ್ನು ಮುಂದುವರಿಸಲಿದ್ದಾರೆ. ಕಳೆದ ವರ್ಷ ಮಾನಸಿಕ ಆರೋಗ್ಯದ ದೃಷ್ಟಿಯಿಂದ ಅಂತರ್ರಾಷ್ಟ್ರೀಯ ಕ್ರಿಕೆಟ್ನಿಂದ ವಿರಾಮ ಪಡೆದಿದ್ದರು.







