FIFA World Cup ಪಂದ್ಯ ಆಡಿದ ಭಾರತ ಮೂಲದ ಮೊದಲ ಆಟಗಾರ ಸರ್ಪ್ರೀತ್ ಸಿಂಗ್

Photo Credit : instagram
ಹ್ಯೂಸ್ಟನ್, ಜೂ.16: ಫಿಫಾ ವಿಶ್ವಕಪ್ ಪಂದ್ಯವನ್ನಾಡಿದ ಭಾರತೀಯ ಮೂಲದ ಮೊದಲ ಆಟಗಾರ ಎನಿಸಿಕೊಂಡಿರುವ ನ್ಯೂಝಿಲ್ಯಾಂಡ್ ತಂಡದ ಮಿಡ್ಫೀಲ್ಡರ್ ಸರ್ಪ್ರೀತ್ ಸಿಂಗ್ ಇತಿಹಾಸ ನಿರ್ಮಿಸಿದರು.
ಕೋಚ್ ಡರೆನ್ ಬಾಝೆಲಿ, ಸರ್ಪ್ರೀತ್ ಮೇಲೆ ನಂಬಿಕೆ ಇಟ್ಟು ಆಡುವ ಅವಕಾಶ ಕಲ್ಪಿಸಿದರು.
ಯಾರು ಈ ಸರ್ಪ್ರೀತ್ ಸಿಂಗ್: ಆಕ್ಲೆಂಡ್ನಲ್ಲಿ ಪಂಜಾಬಿ ದಂಪತಿಗಳಿಗೆ ಜನಿಸಿದ್ದ 27ರ ವಯಸ್ಸಿನ ಸರ್ಪ್ರೀತ್ ಲಾಸ್ ಏಂಜಲೀಸ್ನಲ್ಲಿ ಇರಾನ್ ವಿರುದ್ಧ ನಡೆದ ‘ ಜಿ’ ಗುಂಪಿನ ಪಂದ್ಯದಲ್ಲಿ ನ್ಯೂಝಿಲ್ಯಾಂಡ್ನ ಆಡುವ 11ರ ಬಳಗಕ್ಕೆ ಸೇರ್ಪಡೆಯಾದರು. 10ನೇ ಸಂಖ್ಯೆಯ ಜೆರ್ಸಿ ಧರಿಸಿದ ಸರ್ಪ್ರೀತ್ ಪೂರ್ತಿ ಪಂದ್ಯವನ್ನು ಆಡಿದರು. 2-2ರಿಂದ ಡ್ರಾಗೊಂಡ ಪಂದ್ಯದಲ್ಲಿ ಮೂರು ಬಾರಿ ಗೋಲು ಗಳಿಸಲು ಪ್ರಯತ್ನಿಸಿದರು.
ಸಿಂಗ್ 2018ರಲ್ಲಿ ಇಂಟರ್ಕಾಂಟಿನೆಂಟಲ್ ಕಪ್ನ ವೇಳೆ ಭಾರತದಲ್ಲಿ ಆಡಿದ್ದರು. ಸುನೀಲ್ ಚೆಟ್ರಿ ವಿರುದ್ಧ ಆಡಿದ್ದ ಅವರು ಕೀನ್ಯದ ವಿರುದ್ಧ ಗೋಲು ಗಳಿಸಿದ್ದರು. ಭಾರತ ವಿರುದ್ಧ ಗೆಲ್ಲಲು ನ್ಯೂಝಿಲ್ಯಾಂಡ್ಗೆ ಎರಡು ಬಾರಿ ಅಸಿಸ್ಟ್ ಮಾಡಿದ್ದರು.
2019ರಲ್ಲಿ ಬೇಯರ್ನ್ ಮ್ಯೂನಿಕ್ ಪರ ಚೊಚ್ಚಲ ಪಂದ್ಯವನ್ನಾಡಿದ ಸರ್ಪ್ರೀತ್ ಜರ್ಮನಿಯ ಟಾಪ್ ಡಿವಿಜನ್ನಲ್ಲಿ ಆಡಿದ ಭಾರತೀಯ ಮೂಲದ ಮೊದಲ ಆಟಗಾರ ಎನಿಸಿಕೊಂಡಿದ್ದರು.
ಪೋರ್ಚುಗಲ್ ಹಾಗೂ ಸರ್ಬಿಯದಲ್ಲಿ ಆಡಿದ್ದ ಸರ್ಪ್ರೀತ್ ಈ ವರ್ಷ ನ್ಯೂಝಿಲ್ಯಾಂಡ್ಗೆ ಮರಳಿದ್ದರು. ಗಾಯದಿಂದ ಚೇತರಿಸಿಕೊಂಡು 26 ಸದಸ್ಯರ ಕಿವೀಸ್ನ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿದ್ದರು.
ಈ ಟೂರ್ನಿಗಿಂತ ಮೊದಲು ಫ್ರಾನ್ಸ್ನ ಮಿಡ್ ಫೀಲ್ಡರ್ ವಿಕಾಸ್ ಧೋರಾಸೂ ವಿಶ್ವಕಪ್ನಲ್ಲಿ ಆಡಿದ ಭಾರತ ಮೂಲದ ಆಟಗಾರನಾಗಿದ್ದರು. ವಿಕಾಸ್ 2006ರಲ್ಲಿ ಬದಲಿ ಆಟಗಾರನಾಗಿ ಆಡಿದ್ದರು.
ಸರ್ಪ್ರೀತ್ಗಿಂತ ಮೊದಲು ಆಸ್ಟ್ರೇಲಿಯದ ನಿಶಾನ್ ವೆಲುಪಿಳ್ಳೈ ಕೂಡ ಇತ್ತೀಚೆಗೆ ತುರ್ಕಿಯಾ ವಿರುದ್ಧ ತನ್ನ ಚೊಚ್ಚಲ ವಿಶ್ವಕಪ್ ಪಂದ್ಯ ಆಡಿದ್ದರು.
ಈ ವರ್ಷ ವಿವಿಧ ವಿಶ್ವಕಪ್ ತಂಡಗಳಲ್ಲಿ ಸರ್ಪ್ರೀತ್, ನಿಶಾನ್ ಮಾತ್ರವಲ್ಲ, ಡಿಆರ್ ಕಾಂಗೋ ತಂಡದಲ್ಲಿ ಸ್ಯಾಮುಯೆಲ್ ಮುತ್ತೈಸಾಮಿ ಹಾಗೂ ಖತರ್ ವಿಶ್ವಕಪ್ ತಂಡದಲ್ಲಿ ಪರ ತಹ್ಸೀನ್ ಮುಹಮ್ಮದ್ ಜಮ್ಶೀದ್ ಸ್ಥಾನ ಪಡೆದಿದ್ದಾರೆ.
ನಿಶಾನ್ ಆಸ್ಟ್ರೇಲಿಯ ತಂಡವು ತುರ್ಕಿಯಾ ವಿರುದ್ಧ 2-1ರಿಂದ ಗೆದ್ದಿರುವ ಪಂದ್ಯದಲ್ಲಿ ಬದಲಿ ಆಟಗಾರನಾಗಿ ಕಾಣಿಸಿಕೊಂಡಿದ್ದರು. ತಹ್ಸೀನ್ ಅವರು ಸ್ವಿಟ್ಸರ್ಲ್ಯಾಂಡ್ ವಿರುದ್ಧ ಖತರ್ 1-1ರಿಂದ ಡ್ರಾಗೊಳಿಸಿದ ಪಂದ್ಯದಲ್ಲಿ ಆಡಿರಲಿಲ್ಲ. ಸ್ಯಾಮುಯೆಲ್ ಪೋರ್ಚುಗಲ್ ವಿರುದ್ಧ ಆಡುವ ವಿಶ್ವಾಸದಲ್ಲಿದ್ದಾರೆ.
ಫಿಫಾ ನಿಯಮಗಳ ಪ್ರಕಾರ, ಆಟಗಾರನು ಒಂದು ದೇಶವನ್ನು ಪ್ರತಿನಿಧಿಸಬೇಕಾದರೆ ಆತನ ಪೋಷಕರು ಅಥವಾ ಅಜ್ಜ-ಅಜ್ಜಿ ಆ ದೇಶದಲ್ಲಿ ಜನಿಸಿರಬೇಕು, ಆಟಗಾರನು ಆ ದೇಶದ ಪಾಸ್ಪೋರ್ಟ್ ಹೊಂದಿರಬೇಕಾಗುತ್ತದೆ.






