ಭಾರತ ವಿರುದ್ಧದ ಏಕದಿನ ಸರಣಿಗೆ ನ್ಯೂಝಿಲ್ಯಾಂಡ್ ತಂಡ ಪ್ರಕಟ; ರಚಿನ್ ರವೀಂದ್ರ ಸೇರ್ಪಡೆ

ರಚಿನ್ ರವೀಂದ್ರ | PTI
ವೆಲ್ಲಿಂಗ್ಟನ್, ಅ. 11: ನ್ಯೂಝಿಲ್ಯಾಂಡ್ ಕ್ರಿಕೆಟ್ ತಂಡವು ಟೀಮ್ ಇಂಡಿಯಾ ವಿರುದ್ಧದ ಮುಂಬರುವ ಐದು ಪಂದ್ಯಗಳ ಏಕದಿನ ಸರಣಿಗಾಗಿ ತನ್ನ ತಂಡವನ್ನು ರವಿವಾರ ಪ್ರಕಟಿಸಿದೆ. ಮಿಚೆಲ್ ಸ್ಯಾಂಟ್ನರ್ ಅವರನ್ನು ನಾಯಕನಾಗಿ ನೇಮಿಸಲಾಗಿದೆ.
ನವೆಂಬರ್ 4ರಿಂದ ಆಕ್ಲೆಂಡ್ ನ ಈಡನ್ ಪಾರ್ಕ್ನಲ್ಲಿ ಆರಂಭವಾಗಲಿರುವ ಏಕದಿನ ಸರಣಿಗೆ ಫಿನ್ ಅಲೆನ್, ಲಾಕಿ ಫರ್ಗ್ಯುಸನ್, ರಚಿನ್ ರವೀಂದ್ರ ಹಾಗೂ ಟಿಮ್ ಸೀಫರ್ಟ್ ಕಿವೀಸ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.
ಏಕದಿನ ಸರಣಿಗೂ ಮೊದಲು ಅಕ್ಟೋಬರ್ 22ರಿಂದ ನವೆಂಬರ್ 1ರವರೆಗೆ ಐದು ಪಂದ್ಯಗಳ ಟಿ-20 ಸರಣಿ ನಿಗದಿಯಾಗಿದೆ.
ಜನವರಿಯಲ್ಲಿ ಭಾರತ ತಂಡದ ವಿರುದ್ಧ ಏಕದಿನ ಸರಣಿಯನ್ನು 2-1 ಅಂತರದಿಂದ ಜಯಿಸಿದ್ದ ಕಿವೀಸ್ ಪಡೆ ಅದೇ ಪ್ರದರ್ಶನವನ್ನು ಮುಂದುವರಿಸುವ ಗುರಿ ಹೊಂದಿದೆ. ಜನವರಿಯಲ್ಲಿ ಪಡೆದ ಗೆಲುವು ಐತಿಹಾಸಿಕವಾಗಿದ್ದು, ನ್ಯೂಝಿಲ್ಯಾಂಡ್ ತಂಡವು ಭಾರತೀಯ ನೆಲದಲ್ಲಿ ಭಾರತ ತಂಡದ ವಿರುದ್ಧ ಮೊದಲ ಬಾರಿಗೆ ಏಕದಿನ ಸರಣಿಯನ್ನು ಜಯಿಸಿತ್ತು.
ಏಕದಿನ ತಂಡಕ್ಕೆ ವಾಪಸಾದ ಪ್ರಮುಖ ಆಟಗಾರರು: ಅಲೆನ್ ಹಾಗೂ ಫರ್ಗ್ಯುಸನ್ 2023ರಲ್ಲಿ ಕೊನೆಯ ಬಾರಿ ಏಕದಿನ ಪಂದ್ಯವನ್ನಾಡಿದ ಬಳಿಕ ಇದೀಗ ತಂಡಕ್ಕೆ ಮರಳಿದ್ದಾರೆ. ಫರ್ಗ್ಯುಸನ್ ಮುಂಬೈನಲ್ಲಿ ಭಾರತ ತಂಡದ ವಿರುದ್ಧ ನಡೆದ ಪುರುಷರ ಕ್ರಿಕೆಟ್ ವಿಶ್ವಕಪ್ ಸೆಮಿಫೈನಲ್ನಲ್ಲಿ ಕೊನೆಯ ಬಾರಿ ಏಕದಿನ ಪಂದ್ಯದಲ್ಲಿ ಕಾಣಿಸಿಕೊಂಡಿದ್ದರು. ಸೀಫರ್ಟ್ 18 ತಿಂಗಳ ಅನುಪಸ್ಥಿತಿಯ ಬಳಿಕ ಮರಳಿದ್ದಾರೆ. ಸೀಫರ್ಟ್ ಪಾಕಿಸ್ತಾನದ ವಿರುದ್ಧ ಸ್ವದೇಶದಲ್ಲಿ ನಡೆದ ಸರಣಿಯಲ್ಲಿ ನ್ಯೂಝಿಲ್ಯಾಂಡ್ ಪರ ಕೊನೆಯ ಬಾರಿ ಏಕದಿನ ಪಂದ್ಯವನ್ನಾಡಿದ್ದರು.
ಭುಜದ ನೋವಿನಿಂದಾಗಿ ಟಿ-20 ತಂಡದಿಂದ ಹೊರಗುಳಿದಿದ್ದ ರವೀಂದ್ರ, ಭಾರತ ತಂಡದ ವಿರುದ್ಧದ ಮೊದಲ ಮೂರು ಏಕದಿನ ಪಂದ್ಯಗಳಿಗೆ ಮಾತ್ರ ಲಭ್ಯವಿರಲಿದ್ದಾರೆ.
ಕೊನೆಯ ಎರಡು ಪಂದ್ಯಗಳಿಗೆ ತಂಡದಲ್ಲಿ ಬದಲಾವಣೆ: ನ್ಯೂಝಿಲ್ಯಾಂಡ್ ತಂಡವು ಕೊನೆಯ ಎರಡು ಏಕದಿನ ಪಂದ್ಯಗಳಿಗೆ ತನ್ನ ತಂಡದಲ್ಲಿ ಬದಲಾವಣೆ ಮಾಡಿದೆ. ಏಳು ಹೆಚ್ಚುವರಿ ಆಟಗಾರರು ತಂಡವನ್ನು ಸೇರಿದ್ದಾರೆ. ಭಾರತ ತಂಡದ ವಿರುದ್ಧದ ಮೂರನೇ ಏಕದಿನ ಪಂದ್ಯದ ಬಳಿಕ ಮುಂಬರುವ ಟೆಸ್ಟ್ ಸರಣಿಗೆ ತಯಾರಿ ನಡೆಸಲು ಕೆಲವು ಆಟಗಾರರು ವೆಲ್ಲಿಂಗ್ಟನ್ಗೆ ಪ್ರಯಾಣಿಸಲಿದ್ದಾರೆ ಎಂದು ನ್ಯೂಝಿಲ್ಯಾಂಡ್ ಕ್ರಿಕೆಟ್ ವೆಬ್ಸೈಟ್ನಲ್ಲಿ ತಿಳಿಸಲಾಗಿದೆ.
ಭಾರತ ತಂಡದ ವಿರುದ್ಧ ನಡೆಯಲಿರುವ ಸರಣಿಗಾಗಿ ತನ್ನ 14 ಸದಸ್ಯರ ಟೆಸ್ಟ್ ತಂಡವನ್ನು ನ್ಯೂಝಿಲ್ಯಾಂಡ್ ನವೆಂಬರ್ ಆರಂಭದಲ್ಲಿ ಪ್ರಕಟಿಸುವ ನಿರೀಕ್ಷೆಯಿದೆ.
ಮೊದಲ ಮೂರು ಏಕದಿನ ಪಂದ್ಯಗಳಿಗೆ ನ್ಯೂಝಿಲ್ಯಾಂಡ್ ತಂಡ: ಮಿಚೆಲ್ ಸ್ಯಾಂಟ್ನರ್ (ನಾಯಕ), ಮೈಕಲ್ ಬ್ರೆಸ್ವೆಲ್, ಮಾರ್ಕ್ ಚಾಪ್ಮನ್, ಡೆವೊನ್ ಕಾನ್ವೆ, ಜೇಕಬ್ ಡಫಿ, ಮ್ಯಾಟ್ ಹೆನ್ರಿ, ಕೈಲ್ ಜಮೀಸನ್, ಟಾಮ್ ಲಾಥಮ್ (ವಿಕೆಟ್ಕೀಪರ್), ಡ್ಯಾರಿಲ್ ಮಿಚೆಲ್, ಗ್ಲೆನ್ ಫಿಲಿಪ್ಸ್, ರಚಿನ್ ರವೀಂದ್ರ, ನಾಥನ್ ಸ್ಮಿತ್, ವಿಲ್ ಯಂಗ್, ಬ್ಲೇರ್ ಟಿಕ್ನೆರ್.
ನಾಲ್ಕು ಮತ್ತು ಐದನೇ ಏಕದಿನ ಪಂದ್ಯಗಳಿಗೆ ನ್ಯೂಝಿಲ್ಯಾಂಡ್ ತಂಡ: ಮಿಚೆಲ್ ಸ್ಯಾಂಟ್ನರ್ (ನಾಯಕ), ಫಿನ್ ಅಲೆನ್, ಮೈಕಲ್ ಬ್ರೆಸ್ವೆಲ್, ಮಾರ್ಕ್ ಚಾಪ್ಮನ್, ಕ್ರಿಸ್ಟಿಯನ್ ಕ್ಲಾರ್ಕ್, ಜೇಕಬ್ ಡಫಿ, ಮ್ಯಾಟ್ ಫಿಶರ್, ಲಾಕಿ ಫರ್ಗ್ಯುಸನ್, ಮಿಚ್ ಹೇ (ವಿಕೆಟ್ಕೀಪರ್), ನಿಕ್ ಕೆಲ್ಲಿ, ಟಿಮ್ ಸೀಫರ್ಟ್ (ವಿಕೆಟ್ಕೀಪರ್), ಬ್ಲೇರ್ ಟಿಕ್ನೆರ್, ವಿಲ್ ಯಂಗ್.






