ಮೊದಲ ಟೆಸ್ಟ್ | ನಿಕೊಲ್ಸ್ ಶತಕ, ಫಿಲಿಪ್ಸ್ ಔಟಾಗದೆ 94: ಭಾರತ ವಿರುದ್ಧ ಪುಟಿದೆದ್ದ ನ್ಯೂಝಿಲ್ಯಾಂಡ್

Credit: X/@BlackCaps
ವೆಲ್ಲಿಂಗ್ಟನ್: ವೇಗದ ಬೌಲರ್ ಜಸ್ಪ್ರಿತ್ ಬುಮ್ರಾರ ಅತ್ಯುತ್ತಮ ಬೌಲಿಂಗ್(3-52) ನಡುವೆಯೂ ಹೆನ್ರಿ ನಿಕೊಲ್ಸ್ ಹಾಗೂ ಗ್ಲೆನ್ ಫಿಲಿಪ್ಸ್ ಆರನೇ ವಿಕೆಟ್ಗೆ ಮುರಿಯದ ಜೊತೆಯಾಟದಲ್ಲಿ 173 ರನ್ ಸೇರಿಸಿ ಭಾರತ ತಂಡದ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ನ್ಯೂಝಿಲ್ಯಾಂಡ್ ಕ್ರಿಕೆಟ್ ತಂಡವನ್ನು ಆರಂಭಿಕ ಕುಸಿತದಿಂದ ಕಾಪಾಡಿದರು.
ನಿಕೊಲ್ಸ್ ಔಟಾಗದೆ 113 ರನ್(221 ಎಸೆತ, 14 ಬೌಂಡರಿ) ಹಾಗೂ ಫಿಲಿಪ್ಸ್ ಔಟಾಗದೆ 94(182 ಎಸೆತ, 13 ಬೌಂಡರಿ) ನೆರವಿನಿಂದ ನ್ಯೂಝಿಲ್ಯಾಂಡ್ ತಂಡವು ಬಾಸಿನ್ ರಿಸರ್ವ್ನಲ್ಲಿ ಗುರುವಾರ ಮೊದಲ ದಿನದಾಟದಂತ್ಯಕ್ಕೆ 82 ಓವರ್ಗಳಲ್ಲಿ ಐದು ವಿಕೆಟ್ಗಳ ನಷ್ಟಕ್ಕೆ 243 ರನ್ ಗಳಿಸಿದೆ.
ನಿಕೊಲ್ಸ್ ಅವರು 102 ರನ್ ಗಳಿಸಿದ್ದಾಗ ಪ್ರಸಿದ್ಧ ಕೃಷ್ಣ ಬೌಲಿಂಗ್ನಲ್ಲಿ ದೇವದತ್ತ ಪಡಿಕ್ಕಲ್ ಹಾಗೂ ರಿಷಭ್ ಪಂತ್ ನಡುವಿನ ಸಂವಹನದ ಕೊರತೆಯಿಂದಾಗಿ ಜೀವದಾನ ಪಡೆದರು.
ಬೆಳಗ್ಗಿನ ಅವಧಿಯಲ್ಲಿ 70 ರನ್ಗೆ ಐದು ವಿಕೆಟ್ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿದ್ದ ಆತಿಥೇಯ ನ್ಯೂಝಿಲ್ಯಾಂಡ್ ತಂಡವು ಮೊದಲ ದಿನದಾಟದಂತ್ಯಕ್ಕೆ ಚೇತರಿಸಿಕೊಂಡಿತು.
ಮೃದುವಾದ ಚೆಂಡು ಹಾಗೂ ಶುಭ್ರ ವಾತಾವರಣವು ಬ್ಯಾಟಿಂಗ್ಗೆ ಪೂರಕವಾಗಿದ್ದು, ನಿಕೊಲ್ಸ್ ಹಾಗೂ ಫಿಲಿಪ್ಸ್ ಅವರು ರನ್ ಗಳಿಸುವ ಎಲ್ಲ ಅವಕಾಶಗಳನ್ನು ಚೆನ್ನಾಗಿ ಬಳಸಿಕೊಂಡರು.
ಈ ಇಬ್ಬರ ನಡುವಿನ ಜೊತೆಯಾಟದಿಂದ ನ್ಯೂಝಿಲ್ಯಾಂಡ್ ಆರಂಭಿಕ ಕುಸಿತದಿಂದ ಪಾರಾಗಿದ್ದು, ಭೋಜನ ವಿರಾಮದ ನಂತರ ಭಾರತದ ನಾಲ್ವರು ವೇಗಿಗಳು ಪರಿಣಾಮಕಾರಿ ಪ್ರದರ್ಶನ ನೀಡಲಿಲ್ಲ.
ಟಾಸ್ ಜಯಿಸಿದ ಭಾರತ ತಂಡದ ನಾಯಕ ಶುಭಮನ್ ಗಿಲ್ ಅವರು ಮೊದಲು ಬೌಲಿಂಗ್ ಆಯ್ದುಕೊಂಡ ನಿರ್ಧಾರವು ಆರಂಭದಲ್ಲಿ ಫಲ ನೀಡಿತು. ಹಿರಿಯ ವೇಗದ ಬೌಲರ್ ಜಸ್ಪ್ರಿತ್ ಬುಮ್ರಾ ಮೊದಲ ಓವರ್ನಲ್ಲಿ ತನ್ನ ಕರಾಮತ್ತು ತೋರಿದರು.
ನಾಯಕ ಟಾಮ್ ಲ್ಯಾಥಮ್(0)ಇನಿಂಗ್ಸ್ನ ಮೊದಲ ಓವರ್ನ ಮೂರನೇ ಎಸೆತದಲ್ಲಿ ಬುಮ್ರಾ ಬೌಲಿಂಗ್ನಲ್ಲಿ ಕ್ಲೀನ್ಬೌಲ್ಡಾದರು. ಭೋಜನ ವಿರಾಮಕ್ಕೆ ಮೊದಲು ಮತ್ತೆ ಬೌಲಿಂಗ್ ಮಾಡಿದ ಬುಮ್ರಾ ಅವರು ಡ್ಯಾರಿಲ್ ಮಿಚೆಲ್(1 ರನ್)ವಿಕೆಟನ್ನು ಪಡೆದರು.
ಮುಹಮ್ಮದ್ ಸಿರಾಜ್ರನ್ನು ಹಿಂದಿಕ್ಕಿ ಆಡುವ 11ರ ಬಳಗದಲ್ಲಿ ಸ್ಥಾನ ಪಡೆದ ಅನ್ಶುಲ್ ಕಾಂಬೋಜ್ ಹಾಗೂ ಆಕಾಶ ದೀಪ್ ಸಿಂಗ್ ಉತ್ತಮ ಸ್ಪೆಲ್ಗಳಿಂದ ಕಿವೀಸ್ ಪಡೆಗೆ ಒತ್ತಡ ಹೇರಿದರು. ಕಾಂಬೋಜ್ ಅವರು ಆರಂಭಿಕ ಆಟಗಾರ ಡೆವೊನ್ ಕಾನ್ವೆ(4 ರನ್) ವಿಕೆಟನ್ನು ನಾಲ್ಕನೇ ಓವರ್ನಲ್ಲಿ ಉರುಳಿಸಿದರು.
ರಚಿನ್ ರವೀಂದ್ರ(15 ರನ್) ಆಕಾಶ್ ದೀಪ್ ಬೌಲಿಂಗ್ನಲ್ಲಿ ವಿಕೆಟ್ಕೀಪರ್ ರಿಷಭ್ ಪಂತ್ಗೆ ಕ್ಯಾಚ್ ನೀಡಿದರು.
ಭೋಜನ ವಿರಾಮದ ನಂತರ ಬುಮ್ರಾ ಅವರು ಟಾಮ್ ಬ್ಲಂಡೆಲ್ ವಿಕೆಟನ್ನು ಉರುಳಿಸಿದಾಗ ಭಾರತ ತಂಡವು ತನ್ನ ಪ್ರಾಬಲ್ಯವನ್ನು ಮುಂದುವರಿಸುವ ಭೀತಿ ಹುಟ್ಟಿಸಿತ್ತು.
ಬುಮ್ರಾ ಬೌಲಿಂಗ್ನಲ್ಲಿ ವಿವಾದಾತ್ಮಕ ಡಿಆರ್ಎಸ್ ಪುನರ್ವಿಮರ್ಶೆಯಿಂದ ಪಾರಾದ ಫಿಲಿಪ್ಸ್ ಅವರು ನಿಕೊಲ್ಸ್ ಅವರೊಂದಿಗೆ ಸೇರಿಕೊಂಡು ಇನಿಂಗ್ಸ್ ರಿಪೇರಿ ಮಾಡಿದರು. ಭಾರತ ತಂಡದ ವಿರುದ್ಧ ತನ್ನ ಚೊಚ್ಚಲ ಅರ್ಧಶತಕ ಪೂರೈಸಿದ ನಿಕೊಲ್ಸ್ ದಿಟ್ಟ ಪ್ರದರ್ಶನ ನೀಡಿದರು.
ನಿಕೊಲ್ಸ್ ಟೆಸ್ಟ್ ಕ್ರಿಕೆಟ್ನಲ್ಲಿ 12ನೇ ಶತಕ ಗಳಿಸಿ ಜಾನ್ ರೈಟ್ ಹಾಗೂ ಬ್ರೆಂಡನ್ ಮೆಕಲಮ್ ದಾಖಲೆಯನ್ನು ಸರಿಗಟ್ಟಿದರು. ಭಾರತ ತಂಡದ ವಿರುದ್ಧ ಆಡಿರುವ ಆರು ಟೆಸ್ಟ್ ಪಂದ್ಯಗಳಲ್ಲಿ ಕೇವಲ 13.55 ಸರಾಸರಿ ಹೊಂದಿದ್ದ ನಿಕೊಲ್ಸ್ 44 ರನ್ ಗರಿಷ್ಠ ಸ್ಕೋರಾಗಿತ್ತು. ವೇಗದ ಬೌಲರ್ಗಳಿಗೆ ಒಪ್ಪುವ ಪಿಚ್ನಲ್ಲಿ ಕೇನ್ ವಿಲಿಯಮ್ಸ್ರಿಂದ ತೆರವಾದ ಮೂರನೇ ಕ್ರಮಾಂಕದ ಬ್ಯಾಟಿಂಗ್ಗೆ ನಿಕೊಲ್ಸ್ ಮೇಲೆ ಕಿವೀಸ್ ನಂಬಿಕೆ ಇರಿಸಿತು.
ಭಾರತ ತಂಡಕ್ಕೆ ದಿನದಾಟದಂತ್ಯಕ್ಕೆ ಅವಕಾಶವೊಂದು ಒದಗಿಬಂದಿತ್ತು. ಆದರೆ, ಪಡಿಕ್ಕಲ್ ಕ್ಯಾಚ್ ಕೈಬಿಟ್ಟಿರುವುದು ದುಬಾರಿಯಾಯಿತು. ಇದರ ಲಾಭ ಪಡೆದ ನಿಕೊಲ್ಸ್ ಹಾಗೂ ಫಿಲಿಪ್ಸ್ ಪ್ರವಾಸಿ ತಂಡವು ಉತ್ತಮ ಆರಂಭದ ಲಾಭ ಪಡೆಯದಂತೆ ನೋಡಿಕೊಂಡರು.
ಸಿರಾಜ್, ಜಡೇಜರನ್ನು ಹೊರಗಿಟ್ಟ ಭಾರತ
ಪ್ರಸಕ್ತ ನ್ಯೂಝಿಲ್ಯಾಂಡ್ ಕ್ರಿಕೆಟ್ ಪ್ರವಾಸದಲ್ಲಿ 9ನೇ ಬಾರಿ ಟಾಸ್ ಜಯಿಸಿದ ಭಾರತ ತಂಡವು ಹಸಿರು ಪಿಚ್ನಲ್ಲಿ ಬಿಸಿಲಿನ ವಾತಾವರಣದಲ್ಲಿ ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು.
ಕಳೆದ ಇಂಗ್ಲೆಂಡ್ ಪ್ರವಾಸದಲ್ಲಿ ಹೆಚ್ಚುವರಿ ಬ್ಯಾಟರ್ಗಳನ್ನು ಆಯ್ಕೆ ಮಾಡಿ ಟೀಕೆಗೆ ಗುರಿಯಾಗಿದ್ದ ಭಾರತ ತಂಡವು ಈ ಬಾರಿ ನಾಲ್ವರು ಸ್ಪೆಷಲಿಸ್ಟ್ ಬೌಲರ್ಗಳಾದ ಜಸ್ಪ್ರಿತ್ ಬುಮ್ರಾ, ಪ್ರಸಿದ್ಧ ಕೃಷ್ಣ, ಅನ್ಶುಲ್ ಕಾಂಬೋಜ್ ಹಾಗೂ ಆಕಾಶ ದೀಪ್ರನ್ನು ಆಯ್ಕೆ ಮಾಡಿತು.
ಮುಹಮ್ಮದ್ ಸಿರಾಜ್ ಹಾಗೂ ರವೀಂದ್ರ ಜಡೇಜರನ್ನು ಆಡುವ 11ರ ಬಳಗದಿಂದ ಹೊರಗಿಟ್ಟಿರುವುದು ಹೆಚ್ಚು ಚರ್ಚೆಗೆ ಗ್ರಾಸವಾಗಿದೆ.
ಗಾಯದಿಂದ ಚೇತರಿಸಿಕೊಂಡ ನಂತರ ಯಾವುದೇ ಅಭ್ಯಾಸ ಪಂದ್ಯ ಇಲ್ಲವೇ ಪ್ರಥಮ ದರ್ಜೆ ಪಂದ್ಯಗಳನ್ನು ಆಡದ ರಿಷಭ್ ಪಂತ್ ಟೆಸ್ಟ್ ಕ್ರಿಕೆಟಿಗೆ ವಾಪಸಾಗಿದ್ದಾರೆ.
ನ್ಯೂಝಿಲ್ಯಾಂಡ್ ತಂಡವು ಗಾಯಾಳು ಮಿಚೆಲ್ ಸ್ಯಾಂಟ್ನರ್ ಇಲ್ಲದೇ ಮೊದಲ ಟೆಸ್ಟ್ ಪಂದ್ಯವನ್ನಾಡಿದೆ. ಮ್ಯಾಟ್ ಹೆನ್ರಿ, ಕೈಲ್ ಜಮೀಸನ್ ಹಾಗೂ ಬೌಲಿಂಗ್ ಆಲ್ರೌಂಡರ್ ನಾಥನ್ ಸ್ಮಿತ್ ಅವರೊಂದಿಗೆ ನಾಲ್ಕನೇ ವೇಗದ ಬೌಲರ್ ಆಗಿ ಜೇಕಬ್ ಡಫಿ ಕಾಣಿಸಿಕೊಂಡಿದ್ದಾರೆ.






