ನೈಟ್ ಕ್ಲಬ್ ಘಟನೆ ಹಿನ್ನೆಲೆ: ಟೆಸ್ಟ್ ಕ್ರಿಕೆಟ್ ಗೆ ಬೆನ್ ಸ್ಟೋಕ್ಸ್ ವಿದಾಯ ನಿರೀಕ್ಷೆ

ಬೆನ್ ಸ್ಟೋಕ್ಸ್ Photo: x.com/arshdeep
ಲಂಡನ್ : ಇಂಗ್ಲೆಂಡ್ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ಬೆನ್ ಸ್ಟೋಕ್ಸ್ ಹಾಗೂ ಸಹ ಆಟಗಾರ ಗುಸ್ ಅಟ್ಕಿನ್ಸನ್ ಅವರನ್ನೊಳಗೊಂಡ ನೈಟ್ ಕ್ಲಬ್ ವಿವಾದದ ಹಿನ್ನೆಲೆಯಲ್ಲಿ ಸ್ಟೋಕ್ಸ್ ತಮ್ಮ ನಾಯಕತ್ವವನ್ನು ತ್ಯಜಿಸುವ ಜತೆಗೆ ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳುವ ಸಾಧ್ಯತೆಗಳು ನಿಚ್ಚಳವಾಗಿವೆ ಎಂದು ಟಾಕ್ಸ್ಪೋರ್ಟ್ಸ್ ವರದಿ ಮಾಡಿದೆ.
ಲಾರ್ಡ್ಸ್ನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಪ್ರಥಮ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ 115 ರನ್ಗಳ ಜಯ ಸಾಧಿಸಿದ ಬಳಿಕ ನೈಟ್ ಕ್ಲಬ್ ವಿವಾದದ ಬಗ್ಗೆ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ತನಿಖೆ ಆರಂಭಿಸಿದೆ. ಘಟನೆ ಹಿನ್ನೆಲೆಯಲ್ಲಿ ಸ್ಟೋಕ್ಸ್ ಅವರು ಶಿಸ್ತುಕ್ರಮ ಎದುರಿಸುವ ಬದಲು ಸ್ವ ಇಚ್ಛೆಯಿಂದ ನಾಯಕತ್ವ ತ್ಯಜಿಸುವಂತೆ ಸಲಹೆ ಮಾಡಲಾಗಿದೆ ಎಂದು ಜಾರ್ಜ್ ಡೊಬೆಲ್ ಹೇಳಿದ್ದಾರೆ. ಸ್ಟೋಕ್ಸ್ ಅವರೇ ಮೊದಲು ನಿರ್ಧಾರ ಕೈಗೊಳ್ಳುತ್ತಾರೆ ಎನ್ನುವ ಭಾವನೆ ನನ್ನದು. ಅವರು ನಾಯಕತ್ವ ತ್ಯಜಿಸುವ ಜತೆಗೆ ಕ್ರಿಕೆಟ್ನಿಂದಲೇ ನಿವೃತ್ತರಾಗಲಿದ್ದಾರೆ ಎಂಬ ಭೀತಿ ಇದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಸ್ಟೋಕ್ಸ್ ಪ್ರಸ್ತುತ ಇಂಗ್ಲೆಂಡ್ ಕ್ರಿಕೆಟ್ ತಂಡದ ನಾಯಕರಾಗಿದ್ದು, ತಂಡದ ಪ್ರಮುಖ ಆಟಗಾರರು. ಪ್ರಸ್ತುತ ಅವರು ಕೇವಲ ಟೆಸ್ಟ್ ಕ್ರಿಕೆಟ್ ಮಾತ್ರ ಆಡುತ್ತಿದ್ದರೂ, 15 ವರ್ಷಗಳ ಸುದೀರ್ಘ ವೃತ್ತಿ ಜೀವನದಿಂದ ನಿವೃತ್ತರಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಆ್ಯಷಸ್ ಸರಣಿಯ ಬಳಿಕ ಸ್ಟೋಕ್ಸ್ ಅವರು ಇಂಗ್ಲೆಂಡ್ ತಂಡದ ಮುಖ್ಯ ಕೋಚ್ ಬ್ರೆಂಡನ್ ಮೆಕ್ಮಿಲನ್ ಜತೆ ವೈಮನಸ್ಯ ಹೊಂದಿದ್ದಾರೆ ಎಂಬ ವರದಿಗಳು ಕೆಲ ವಾರಗಳಿಂದ ಹರಿದಾಡುತ್ತಿದ್ದು, ಇತ್ತೀಚಿನ ವಿವಾದ, ಜವಾಬ್ದಾರಿಯಿಂದ ಕಳಚಿಕೊಳ್ಳಲು ತಕ್ಷಣದ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ. ಗೆಲುವಿನ ಸಂಭ್ರಮಾಚರಣೆ ವೇಳೆ ನೈಟ್ ಕ್ಲಬ್ನಲ್ಲಿ ಸ್ಟೋಕ್ಸ್ ಮತ್ತು ಸಹ ಆಟಗಾರ ಅಟ್ಕಿನ್ಸನ್ ಶಿಷ್ಟಾಚಾರ ಮೀರಿ ವರ್ತಿಸಿದ್ದಾರೆ ಎಂಬ ಬಗ್ಗೆ ಕ್ರಿಕೆಟ್ ಮಂಡಳಿ ತನಿಖೆ ನಡೆಸುತ್ತಿದೆ. ಜೂನ್ 17ರಿಂದ ಸರಣಿಯ ಎರಡನೇ ಪಂದ್ಯ ಓವಲ್ನಲ್ಲಿ ನಡೆಯಲಿದೆ.






