ನಿಕಿ ಪೂಣಚ್ಚರಿಗೆ KSLTAಯಿಂದ 1 ಲಕ್ಷ ರೂ. ನಗದು ಪುರಸ್ಕಾರ

Niki Kaliyanda Poonacha (R) and Thailand’s Pruchya Isaro (L). (Image: Instagram/@niki_kpoonacha)
ಬೆಂಗಳೂರು, ನ. 30: ಆಸ್ಟ್ರೇಲಿಯನ್ ಓಪನ್ 2026ರ ಪುರುಷರ ಡಬಲ್ಸ್ ಪ್ರಧಾನ ಸುತ್ತಿನಲ್ಲಿ ಆಡುವ ಅರ್ಹತೆ ಪಡೆದುಕೊಂಡಿರುವ ನಿಕಿ ಪೂಣಚ್ಚ ಅವರಿಗೆ ಒಂದು ಲಕ್ಷ ರೂಪಾಯಿ ನಗದು ಪುರಸ್ಕಾರ ನೀಡುವುದಾಗಿ ಕರ್ನಾಟಕ ರಾಜ್ಯ ಲಾನ್ ಟೆನಿಸ್ ಅಸೋಸಿಯೇಶನ್ (KSLTA) ಶನಿವಾರ ಘೋಷಿಸಿದೆ.
ಚೀನಾದ ಚೆಂಗ್ಡು ನಗರದಲ್ಲಿ ಶುಕ್ರವಾರ ನಡೆದ ಏಶ್ಯ-ಪೆಸಿಫಿಕ್ ವೈಲ್ಡ್ಕಾರ್ಡ್ ಪ್ಲೇಆಫ್ ಫೈನಲ್ ಪಂದ್ಯವನ್ನು ನಿಕಿ ಮತ್ತು ಅವರ ಥಾಯ್ಲೆಂಡ್ ಜೊತೆಗಾರ ಪ್ರುಚ್ಯ ಇಸರೊ ಗೆದ್ದಿದ್ದಾರೆ. ಅವರು ಫೈನಲ್ ನಲ್ಲಿ ಜಪಾನ್ ನ ಸೀಯಿಟ ಕುಸುಹರ ಮತ್ತು ಕಟ್ಸುಕಿ ನಕಗವ ಜೋಡಿಯನ್ನು 6-4, 6-3 ಸೆಟ್ಗಳಿಂದ ಸೋಲಿಸಿದ್ದಾರೆ. ಆ ಮೂಲಕ ಆಸ್ಟ್ರೇಲಿಯನ್ ಓಪನ್ ಗೆ ವೈಲ್ಡ್ಕಾರ್ಡ್ ಪ್ರವೇಶ ಪಡೆದುಕೊಂಡಿದ್ದಾರೆ.
ಇದು ನಿಕಿ ಅವರ ಪ್ರಥಮ ಗ್ರ್ಯಾನ್ ಸ್ಲಾಮ್ ಪ್ರಧಾನ ಸುತ್ತಿನ ಸ್ಪರ್ಧೆಯಾಗಿದೆ.
‘‘ಚೆಂಗ್ಡುನಲ್ಲಿ ನಿಕಿ ಪೂಣಚ್ಚ ಅವರ ಸಾಧನೆಯನ್ನು ಕಂಡು ನಮಗೆ ಸಂತೋಷವಾಗಿದೆ. ಅವರು ರೋಹನ್ ಬೋಪಣ್ಣರ ಪರಂಪರೆಯನ್ನು ಮುಂದುವರಿಸುತ್ತಾರೆ ಎಂಬ ಭರವಸೆ ನಮಗಿದೆ. ಅವರಿಗೆ ನಾವು ಹಾರ್ದಿಕ ಶುಭಾಶಯಗಳನ್ನು ಸಲ್ಲಿಸುತ್ತೇವೆ. ಅವರು ನಮ್ಮ ರಾಜ್ಯ ಮತ್ತು ದೇಶ ಹೆಮ್ಮೆ ಪಡುವಂತೆ ಮಾಡುತ್ತಾರೆ ಎಂದು ನಾವು ಭಾವಿಸುತ್ತೇವೆ’’ ಎಂದು KSLTA ಕಾರ್ಯದರ್ಶಿ ಮಹೇಶ್ವರ ರಾವ್ ಹೇಳಿದ್ದಾರೆ.
‘‘ಈ ಸಾಧನೆಗಾಗಿ ಪೂಣಚ್ಚ ಅವರಿಗೆ ಒಂದು ಲಕ್ಷ ರೂಪಾಯಿ ಪುರಸ್ಕಾರವನ್ನು ಘೋಷಿಸಲು ನಾವು ಸಂತೋಷಪಡುತ್ತೇವೆ’’ ಎಂದು ಅವರು ಹೇಳಿದ್ದಾರೆ.







