ಐಸಿಸಿ ಏಕದಿನ ವಿಶ್ವಕಪ್ ಉದ್ಘಾಟನಾ ಪಂದ್ಯಕ್ಕೆ ನಿತಿನ್ ಮೆನನ್, ಕುಮಾರ ಧರ್ಮಸೇನ ಅಂಪೈರ್

Photo: twitter/toisports
ಹೊಸದಿಲ್ಲಿ : ಇಂಗ್ಲೆಂಡ್ ಹಾಗೂ ನ್ಯೂಝಿಲ್ಯಾಂಡ್ ನಡುವೆ ಅಕ್ಟೋಬರ್ 5ರಂದು ನಡೆಯುವ ಐಸಿಸಿ ಏಕದಿನ ವಿಶ್ವಕಪ್ನ ಆರಂಭಿಕ ಪಂದ್ಯಕ್ಕೆ ಐಸಿಸಿ ಶುಕ್ರವಾರ ಮ್ಯಾಚ್ ಅಧಿಕಾರಿಗಳನ್ನು ಪ್ರಕಟಿಸಿದೆ.
ಭಾರತದ ನಿತಿನ್ ಮೆನನ್ ಹಾಗೂ ಶ್ರೀಲಂಕಾದ ಕುಮಾರ ಧರ್ಮಸೇನ ಆನ್ ಫೀಲ್ಡ್ ಅಂಪೈರ್ಗಳಾಗಿ ಕಾರ್ಯನಿರ್ವಹಿಸಲಿದ್ದಾರೆ. ಮಾಜಿ ವೇಗದ ಬೌಲರ್ ಜಾವಗಲ್ ಶ್ರೀನಾಥ್ ಮ್ಯಾಚ್ ರೆಫರಿ ಪಾತ್ರ ನಿಭಾಯಿಸಲಿದ್ದಾರೆ.
ಟೂರ್ನಮೆಂಟ್ನ ಮೊದಲ ಪಂದ್ಯದಲ್ಲಿ ಪೌಲ್ ವಿಲ್ಸನ್ ಟಿವಿ ಅಂಪೈರ್ ಆಗಿಯೂ, ಸೈಕತ್ ನಾಲ್ಕನೇ ಅಂಪೈರ್ ಆಗಿಯೂ ಕಾರ್ಯನಿರ್ವಹಿಸಲಿದ್ದಾರೆ. ಮೊದಲ ಪಂದ್ಯವು ಅಹಮದಾಬಾದ್ನಲ್ಲಿ ನಡೆಯಲಿದೆ.
13ನೇ ಆವೃತ್ತಿಯ ಟೂರ್ನಮೆಂಟ್ಗೆ ಒಟ್ಟು 16 ಅಂಪೈರ್ಗಳು ಆಯ್ಕೆಯಾಗಿದ್ದಾರೆ. ಅನುಭವಿಗಳ ಗುಂಪಿನಲ್ಲಿ 2019ರಲ್ಲಿ ಲಾರ್ಡ್ಸ್ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಕಾರ್ಯನಿರ್ವಹಿಸಿದ್ದ ಧರ್ಮಸೇನ, ಮರೈಸ್ ಎರಾಸ್ಮಸ್ ಹಾಗೂ ರಾಡ್ ಟಕರ್ ಅವರಿದ್ದಾರೆ. ಈ ವರ್ಷದ ಮಾರ್ಚ್ನಲ್ಲಿ ಎಲೈಟ್ ಪ್ಯಾನಲ್ ತ್ಯಜಿಸಿರುವ ಅಲೀಮ್ ದರ್ ಪಟ್ಟಿಯಲ್ಲಿಲ್ಲ.
ಮಾಜಿ ಅಂತರ್ರಾಷ್ಟ್ರೀಯ ಕ್ರಿಕೆಟಿಗರಾದ ಜೆಫ್ ಕ್ರೋವ್, ಆ್ಯಂಡಿ ಪೈಕ್ರಾಫ್ಟ್, ರಿಚಿ ರಿಚರ್ಡ್ಸನ್ ಹಾಗೂ ಶ್ರೀನಾಥ್ ಮ್ಯಾಚ್ ರೆಫರಿಗಳಾಗಿ ಕೆಲಸ ಮಾಡಲಿದ್ದಾರೆ.







