ಭಾರತ ತಂಡಕ್ಕೆ ಸೂರ್ಯವಂಶಿ ಸೇರ್ಪಡೆಗೆ ವಿಳಂಬ ಬೇಡ : ಇಂಗ್ಲೆಂಡ್ ಮಾಜಿ ನಾಯಕ ಕಿವಿಮಾತು

ವೈಭವ್ ಸೂರ್ಯವಂಶಿ | Photo Credit : PTI
ಐಪಿಎಲ್ನಲ್ಲಿ ಹಲವು ದಾಖಲೆಗಳನ್ನು ಛಿದ್ರಗೊಳಿಸಿ ವಿಶ್ವಾದ್ಯಂತ ಸುದ್ದಿ ಮಾಡುತ್ತಿರುವ ಹದಿಹರೆಯದ ಬ್ಯಾಟಿಂಗ್ ಸೆನ್ಸೇಷನ್ ವೈಭವ್ ಸೂರ್ಯವಂಶಿಯವರನ್ನು ಭಾರತ ಕ್ರಿಕೆಟ್ ತಂಡಕ್ಕೆ ಸೇರಿಸಿಕೊಳ್ಳುವಲ್ಲಿ ವಿಳಂಬ ಮಾಡಬಾರದು ಎಂದು ಇಂಗ್ಲೆಂಡ್ ತಂಡದ ಮಾಜಿ ನಾಯಕ ನಾಸಿರ್ ಹುಸೇನ್ ಅಭಿಪ್ರಾಯಟ್ಟಿದ್ದಾರೆ.
ರಾಜಸ್ಥಾನ ರಾಯಲ್ಸ್ ತಂಡದ ಆರಂಭಿಕ ಆಟಗಾರ ಈಗಾಗಲೇ ಸಾಕಷ್ಟು ಸಾಧನೆ ಮಾಡಿ ತೋರಿಸಿದ್ದಾರೆ ಎಂದು ಯುವ ಕ್ರಿಕೆಟಿಗನನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ಐಸಿಸಿ ರಿವ್ಯೂನಲ್ಲಿ ಮಾತನಾಡಿದ ಹುಸೇನ್, "ವೈಭವ್ ಸೂರ್ಯವಂಶಿ ಭಾರತದ ರಾಷ್ಟ್ರೀಯ ತಂಡಕ್ಕೆ ಆಡಬೇಕೇ ಎಂಬ ಪ್ರಶ್ನೆಗೆ ಸುಲಭದ ಉತ್ತರವೆಂದರೆ ಅವರು ಆಡಲೇಬೇಕು. ಪ್ರಾಮಾಣಿಕವಾಗಿ ಹೇಳಬೇಕೆಂದರೆ ನಾನು ಐಪಿಎಲ್ ಅಷ್ಟೊಂದು ವೀಕ್ಷಿಸುವುದಿಲ್ಲ. ಆದರೆ ಸೂರ್ಯವಂಶಿಯವರ ಬ್ಯಾಟಿಂಗ್ ದೃಶ್ಯಾವಳಿಗಳನ್ನು ವೀಕ್ಷಿಸಿದ್ದೇನೆ. ಎಂಥ ನಂಬಲಸಾಧ್ಯ ಪ್ರತಿಭೆ" ಎಂದು ಬಣ್ಣಿಸಿದ್ದಾರೆ.
ಪ್ರಸಕ್ತ ಐಪಿಎಲ್ನಲ್ಲಿ ಸೂರ್ಯವಂಶಿಯವರ ಅಂಕಿ ಸಂಖ್ಯೆಗಳು ಅದ್ಭುತ. ಎಡಗೈ ಆರಂಭಿಕ ಆಟಗಾರ, 237.30 ಸ್ಟ್ರೈಕ್ರೇಟ್ನೊಂದಿಗೆ 16 ಪಂದ್ಯಗಳಲ್ಲಿ 776 ರನ್ ಕಲೆ ಹಾಕಿದ್ದಾರೆ. 72 ಸಿಕ್ಸರ್ ಸಿಡಿಸುವ ಮೂಲಕ ಒಂದೇ ಸೀಸನ್ನಲ್ಲಿ ಗರಿಷ್ಠ ಸಿಕ್ಸರ್ ಬಾರಿಸಿದ ದಾಖಲೆಗೂ ಪಾತ್ರರಾಗಿದ್ದಾರೆ. ಗರಿಷ್ಠ ರನ್ ಗಳಿಸಿದ ಆಟಗಾರರಿಗೆ ನೀಡುವ ಆರೆಂಜ್ ಕ್ಯಾಪ್ ಜತೆಗೆ ಮೋಸ್ಟ್ ವ್ಯಾಲ್ಯೂಯೇಬಲ್ ಪ್ಲೇಯರ್ ಪ್ರಶಸ್ತಿಯೂ ಅವರಿಗೆ ಸಂದಿದೆ. ಭಾರತ ತಂಡದ ಮಾಜಿ ಮುಖ್ಯಕೋಚ್ ರವಿಶಾಸ್ತ್ರಿ, ಬ್ಯಾಟಿಂಗ್ ದಂತಕಥೆ ಸಚಿನ್ ತೆಂಡೂಲ್ಕರ್ ಸೇರಿದಂತೆ ಕ್ರಿಕೆಟ್ ಜಗತ್ತಿನ ದಿಗ್ಗಜರು ಈ ಪೋರನ ಸಾಧನೆಯನ್ನು ಕೊಂಡಾಡಿದ್ದಾರೆ.
ಸೂರ್ಯವಂಶಿ ಸಾಧನೆಯನ್ನು ಶ್ಲಾಘಿಸುವ ವೇಳೆ ನಾಸಿರ್ ಹುಸೇನ್, ನೆಹರೂ ಕಪ್ ಪಂದ್ಯಾವಳಿಯ ವೇಳೆ ತೆಂಡೂಲ್ಕರ್ ಅವರನ್ನು ಮೊದಲ ಬಾರಿಗೆ ಎದುರಿಸಿದಾಗಿನ ನೆನಪನ್ನು ಮೆಲುಕು ಹಾಕಿದರು.
"ಸೂರ್ಯವಂಶಿ ಬ್ಯಾಟ್ ಝಳಪಿಸುವ ಬಗೆಗೆ ಸಚಿನ್ ಟ್ವೀಟ್ ಮಾಡಿದ್ದನ್ನು ನಾನು ಗಮನಿಸಿದ್ದೇನೆ. ಸಚಿನ್ ಮತ್ತು ಕೊಹ್ಲಿ ಮೇಲೆ ನೀವು ಪ್ರಭಾವ ಬೀರಲು ಯಶಸ್ವಿಯಾದರೆ ಯಾರ ಮೇಲೂ ಪ್ರಭಾವ ಬೀರಬಹುದು. ಎಂಥ ಅದ್ಭುತ ಪ್ರತಿಭೆ" ಎಂದು ಉದ್ಗರಿಸಿದ್ದಾರೆ. ಭಾರತದಲ್ಲಿ ಸಾಲು ಸಾಲು ಪ್ರತಿಭಾನ್ವಿತ ಆಟಗಾರರಿದ್ದರೂ, ಸೂರ್ಯವಂಶಿ ಆಯ್ಕೆ ಅನಿವಾರ್ಯವಾಗಲಿದೆ ಎಂದು ಹುಸೇನ್ ವಿಶ್ಲೇಷಿಸಿದ್ದಾರೆ.






