ವಿದ್ಯುತ್ ಶುಲ್ಕ ಬಾಕಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟಿ-20 ಕ್ರಿಕೆಟ್ ಪಂದ್ಯದ ಕ್ರೀಡಾಂಗಣಕ್ಕೆ ವಿದ್ಯುತ್ ಕಡಿತ

Photo credit: NDTV
ರಾಯಪುರ್: ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವಿನ ನಾಲ್ಕನೆ ಟಿ-20 ಕ್ರಿಕೆಟ್ ಪಂದ್ಯವಿಂದು ರಾಯಪುರ್ ನ ಶಹೀದ್ ವೀರ್ ನಾರಾಯಣ್ ಸಿಂಗ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಆದರೆ, ಈ ಮಹತ್ವದ ಪಂದ್ಯ ನಡೆಯಲು ಇನ್ನು ಕೆಲವೇ ಗಂಟೆಗಳು ಬಾಕಿಯಿದ್ದರೂ, ಕ್ರೀಡಾಂಗಣದ ಭಾಗಗಳಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದೆ. ಕಾರಣ: 2009ರಿಂದ ವಿದ್ಯುತ್ ಶುಲ್ಕ ಬಾಕಿಯನ್ನು ಪಾವತಿ ಮಾಡದೆ ಇರುವುದು ಎಂದು ndtv.com ವರದಿ ಮಾಡಿದೆ.
ಈ ಕ್ರೀಡಾಂಗಣವು ರೂ. 3.16 ಕೋಟಿ ವಿದ್ಯುತ್ ಶುಲ್ಕವನ್ನು ಬಾಕಿ ಉಳಿಸಿಕೊಂಡಿದ್ದು, ಐದು ವರ್ಷಗಳ ಹಿಂದೆಯೇ ಈ ಕ್ರೀಡಾಂಗಣಕ್ಕೆ ವಿದ್ಯುತ್ ಪೂರೈಕೆಯನ್ನು ಕಡಿತಗೊಳಿಸಲಾಗಿದೆ. ಛತ್ತೀಸ್ ಗಢ ರಾಜ್ಯ ಕ್ರಿಕೆಟ್ ಒಕ್ಕೂಟದ ಮನವಿಯ ಮೇರೆಗೆ ಈ ಕ್ರೀಡಾಂಗಣಕ್ಕೆ ತಾತ್ಕಾಲಿಕ ವಿದ್ಯುತ್ ಪೂರೈಕೆಯನ್ನು ಒದಗಿಸಲಾಗಿದ್ದರೂ, ಈ ವಿದ್ಯುತ್ ಪ್ರೇಕ್ಷಕರ ಗ್ಯಾಲರಿ ಹಾಗೂ ಬಾಕ್ಸ್ ಗಳಿಗೆ ಮಾತ್ರ ಸಾಕಾಗಲಿದೆ. ಇಂದು ನಡೆಯಲಿರುವ ಪಂದ್ಯದ ವೇಳೆ ಜನರೇಟರ್ ನೆರವಿನಿಂದ ಹೊನಲು ಬೆಳಕಿನ ವ್ಯವಸ್ಥೆ ಮಾಡಬೇಕಾಗುತ್ತದೆ.
ಈ ಕುರಿತು ಪ್ರತಿಕ್ರಿಯಿಸಿರುವ ರಾಯಪುರ್ ಗ್ರಾಮೀಣ ವೃತ್ತ ಉಸ್ತುವಾರಿ ಅಧಿಕಾರಿ ಅಶೋಕ್ ಖಂಡೇಲ್ ವಾಲ್, ಕ್ರಿಕೆಟ್ ಒಕ್ಕೂಟದ ಕಾರ್ಯದರ್ಶಿಯು ಕ್ರೀಡಾಂಗಣಕ್ಕೆ ಒದಗಿಸಿರು ತಾತ್ಕಾಲಿಕ ಸಂಪರ್ಕದ ಸಾಮರ್ಥ್ಯವನ್ನು ಹೆಚ್ಚಳ ಮಾಡುವಂತೆ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿಸಿದ್ದಾರೆ.
ಸದ್ಯ, ಈ ಕ್ರೀಡಾಂಗಣದ ತಾತ್ಕಾಲಿಕ ಸಂಪರ್ಕದ ಸಾಮರ್ಥ್ಯವು 200 ಕೆವಿ ಇದ್ದು, ಅದನ್ನು 1000 ಕೆವಿಗೆ ಏರಿಕೆ ಮಾಡಬೇಕು ಎಂದು ಸಲ್ಲಿಸಲಾಗಿರುವ ಅರ್ಜಿಗೆ ಅನುಮೋದನೆ ನೀಡಲಾಗಿದೆ. ಆದರೆ, ಅದಕ್ಕೆ ಪೂರಕವಾಗಿ ಇನ್ನೂ ಕೆಲಸ ಪ್ರಾರಂಭವಾಗಿಲ್ಲ.
2018ರಲ್ಲಿ ಮ್ಯಾರಥಾನ್ ನಲ್ಲಿ ಅಥ್ಲೀಟ್ ಗಳು ಭಾಗವಹಿಸಿದ್ದಾಗ, ಕ್ರೀಡಾಂಗಣದಲ್ಲಿ ವಿದ್ಯುತ್ ಪೂರೈಕೆ ಇಲ್ಲ ಎಂಬ ಸಂಗತಿ ಬೆಳಕಿಗೆ ಬಂದು ಭಾರಿ ಗದ್ದಲವಾಗಿತ್ತು. ಇದಾದ ನಂತರ, ವಿದ್ಯುತ್ ಶುಲ್ಕವನ್ನು 2009ರಿಂದ ಪಾವತಿಸಲಾಗಿಲ್ಲ ಎಂದು ಪ್ರಕಟಿಸಲಾಗಿತ್ತು. ಆ ವೇಳೆಗೆ ವಿದ್ಯುತ್ ಶುಲ್ಕ ಬಾಕಿ ಮೊತ್ತವು ರೂ. 3.16 ಕೋಟಿಗೂ ಅಧಿಕವಾಗಿತ್ತು.
2018ರಲ್ಲಿ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದಾಗಿನಿಂದ ಇಲ್ಲಿಯವರೆಗೆ ಈ ಕ್ರೀಡಾಂಗಣದಲ್ಲಿ ಮೂರು ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳು ನಡೆದಿವೆ.







