ಬೆಂಗಳೂರಿನಲ್ಲಿ ವಿಜಯೋತ್ಸವವಿಲ್ಲ: RCB ನಿರ್ಧಾರ

Photo Credit : PTI
ಹೊಸದಿಲ್ಲಿ, ಜೂ. 1: ಕಳೆದ ವರ್ಷದ ಕಾಲ್ತುಳಿತದ ಘಟನೆಗೆ ಕಾರಣವಾಗಿದ್ದ ಜನದಟ್ಟಣೆಯನ್ನು ತಪ್ಪಿಸಲು ನಗರದಲ್ಲಿ ವಿಜಯೋತ್ಸವ ಆಚರಿಸದಿರಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ನಿರ್ಧರಿಸಿದೆ.
ಗುಜರಾತ್ ತಂಡವನ್ನು ರವಿವಾರ ಐದು ವಿಕೆಟ್ ಗಳ ಅಂತರದಿಂದ ಮಣಿಸಿರುವ RCB ಸತತ ಎರಡನೇ ಬಾರಿ IPL ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು.
ಕರ್ನಾಟಕದ ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಪ್ರಮಾಣವಚನ ಸಮಾರಂಭವನ್ನು ಗಮನದಲ್ಲಿಟ್ಟುಕೊಂಡು RCB ಇಂತಹ ನಿರ್ಧಾರ ತೆಗೆದುಕೊಂಡಿದೆ.
ಪ್ರಮಾಣವಚನ ಕಾರ್ಯಕ್ರಮವು ಜೂ. 3ರಂದು ಸಂಜೆ 4.10ರ ಸುಮಾರಿಗೆ ಲೋಕಭವನದಲ್ಲಿ ನಡೆಯಲಿದೆ. ರಾಜ್ಯಪಾಲರ ನಿವಾಸವು ಎಂ. ಚಿನ್ನಸ್ವಾಮಿ ಸ್ಟೇಡಿಯಂ ಸಮೀಪವೇ ಇದೆ. ರಾಜಕೀಯ ಕಾರ್ಯಕ್ರಮವು ರಾಜ್ಯದಾದ್ಯಂತ ಜನರನ್ನು ಆಕರ್ಷಿಸುವ ನಿರೀಕ್ಷೆ ಇದೆ.
ಸಮಾರಂಭದಲ್ಲಿ ಹಲವು ಗಣ್ಯರು ಭಾಗವಹಿಸಲಿದ್ದು, ಪೊಲೀಸ್ ಸಿಬ್ಬಂದಿಯನ್ನು ಗಣನೀಯ ಪ್ರಮಾಣದಲ್ಲಿ ನಿಯೋಜಿಸುವ ಅಗತ್ಯವಿದೆ. ಮತ್ತೊಂದು ಪ್ರಮುಖ ಕಾರ್ಯಕ್ರಮದಲ್ಲಿ ಜನರನ್ನು ನಿಯಂತ್ರಿಸುವುದು ರಾಜ್ಯ ಪೊಲೀಸ್ ಇಲಾಖೆಗೆ ಕಠಿಣ ಕೆಲಸವಾಗಿದೆ.
ಹೀಗಾಗಿ RCB ಆಡಳಿತವು ಪೊಲೀಸರ ಅಧಿಸೂಚನೆಯನ್ನು ಗೌರವಿಸಿ, ನಗರದ ರಸ್ತೆಗಳಲ್ಲಿ ಸಾರ್ವಜನಿಕ ಸಂಭ್ರಮೋತ್ಸವ ನಡೆಸದಿರಲು ನಿರ್ಧರಿಸಿದೆ.
2025ರ ಜೂ. 4ರಂದು ಎಂ. ಚಿನ್ನಸ್ವಾಮಿ ಸ್ಟೇಡಿಯಂ ಸಮೀಪ ನಡೆದ ಕಾಲ್ತುಳಿತದಲ್ಲಿ 11 ಕ್ರೀಡಾಭಿಮಾನಿಗಳು ಮೃತಪಟ್ಟಿದ್ದರು. ತನ್ನ ಚೊಚ್ಚಲ ಪ್ರಶಸ್ತಿ ಗೆದ್ದ ಸಂಭ್ರಮದಲ್ಲಿ RCB ವಿಜಯೋತ್ಸವದ ಮೆರವಣಿಗೆ ನಡೆಸಿತ್ತು.
‘‘ಬೆಂಗಳೂರಿನಲ್ಲಿ ಯಾವುದೇ ಕಾರ್ಯಕ್ರಮಗಳನ್ನು ನಡೆಸುವ ಸಾಧ್ಯತೆಯೇ ಇಲ್ಲ. ಕೆಲವೊಂದು ನಿರ್ದಿಷ್ಟ ಮಾರ್ಗಸೂಚಿಗಳಿವೆ. ನಾವು ಅದಕ್ಕೆ ಬದ್ಧವಾಗಿದ್ದೇವೆ’’ ಎಂದು RCB ಮೂಲಗಳು ತಿಳಿಸಿವೆ.
‘‘ನಾವು ಯಾವುದೇ ಸಾರ್ವಜನಿಕ ಸಮಾರಂಭಗಳಿಗೆ ಅವಕಾಶ ನೀಡುವುದಿಲ್ಲ. ಯಾರಾದರೂ ಕಾರ್ಯಕ್ರಮ ಆಯೋಜಿಸಲು ಬಯಸಿದರೆ ಅದನ್ನು ಒಳಾಂಗಣದಲ್ಲಿ ಮಾಡಲಿ’’ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ ಕುಮಾರ್ ಸಿಂಗ್ ಹೇಳಿದ್ದಾರೆ.






