ʼಒಂದು ಧರ್ಮಕ್ಕೆ ಸೇರಿದ್ದಲ್ಲʼ: ವಿಶ್ವಕಪ್ ಟ್ರೋಫಿ ದೇವಾಲಯಕ್ಕೆ ಒಯ್ದ ಬಗ್ಗೆ ಮಾಜಿ ಆಟಗಾರ ಅಸಮಾಧಾನ

PC: screengrab/ x.com/TyrantOppressor
ಹೊಸದಿಲ್ಲಿ: ಭಾರತ ಟಿ20 ಕ್ರಿಕೆಟ್ ತಂಡದ ನಾಯಕ ಸೂರ್ಯಕುಮಾರ್ ಯಾದವ್, ಕೋಚ್ ಗೌತಮ್ ಗಂಭೀರ್ ಮತ್ತು ಐಸಿಸಿ ಅಧ್ಯಕ್ಷ ಜಯ್ ಶಾ ಅವರು ರವಿವಾರ ಗೆದ್ದ ವಿಶ್ವಕಪ್ ಟಿ20 ಟ್ರೋಫಿಯನ್ನು ಅಹ್ಮದಾಬಾದ್ ನ ಹಿಂದೂ ದೇವಾಲಯಕ್ಕೆ ಒಯ್ದ ಕ್ರಮವನ್ನು ತೃಣಮೂಲ ಕಾಂಗ್ರೆಸ್ ಸಂಸದ ಹಾಗೂ ಮಾಜಿ ಕ್ರಿಕೆಟಿಗ ಕೀರ್ತಿ ಆಜಾದ್ ಪ್ರಶ್ನಿಸಿದ್ದಾರೆ.
"ಏಕೆ ಮಸೀದಿಗೆ ಒಯ್ದಿಲ್ಲ? ಏಕೆ ಚರ್ಚ್ ಗೆ ಒಯ್ದಿಲ್ಲ? ಏಕೆ ಗುರುದ್ವಾರಕ್ಕೆ ಒಯ್ದಿಲ್ಲ? ಈ ಟ್ರೋಫಿ ಎಲ್ಲ ಧರ್ಮಗಳ 140 ಕೋಟಿ ಮಂದಿಗೆ ಸೇರಿದ್ದು. ಇದು ಒಂದು ಧರ್ಮದ ವಿಜಯದ ಸಂಕೇತವಲ್ಲ!" ಎಂದು ಎಕ್ಸ್ ಪೋಸ್ಟ್ ನಲ್ಲಿ ಆಜಾದ್ ಹೇಳಿದ್ದಾರೆ. ಕೀರ್ತಿ ಆಜಾದ್ 1983ರ ಏಕದಿನ ವಿಶ್ವಕಪ್ ಗೆದ್ದ ತಂಡದ ಸದಸ್ಯರು.
ಒಂದು ಧರ್ಮಕ್ಕೆ ಇದನ್ನು ಸೀಮಿತಗೊಳಿಸುವುದು ನಾಚಿಕೆಗೇಡು ಎಂದು ಅವರು ಟೀಕಿಸಿದ್ದಾರೆ. "1983ರಲ್ಲಿ ಕಪಿಲ್ ದೇವ್ ನೇತೃತ್ವದಲ್ಲಿ ತಂಡ ವಿಶ್ವಕಪ್ ಗೆದ್ದಾಗ, ತಂಡದಲ್ಲಿ ಹಿಂದೂ, ಮುಸ್ಲಿಂ, ಸಿಕ್ಖ್ ಹಾಗೂ ಕ್ರಿಶ್ಚಿಯನ್ನರು ಕೂಡಾ ತಂಡದಲ್ಲಿದ್ದರು. ನಾವು ನಮ್ಮ ಧಾರ್ಮಿಕ ತವರು ಎನಿಸಿದ ಇಂಡಿಯಾ, ಭಾರತ, ಹಿಂದೂಸ್ತಾನಕ್ಕೆ ಅದನ್ನು ಒಯ್ದೆವು" ಎಂದು ಬಣ್ಣಿಸಿದ್ದಾರೆ.
"ಈ ತಂಡ ಭಾರತವನ್ನು ಪ್ರತಿನಿಧಿಸುತ್ತದೆ. ಸೂರ್ಯಕುಮಾರ್ ಯಾದವ್ ಅಥವಾ ಜಯ್ ಶಾ ಕುಟುಂಬವನ್ನು ಪ್ರತಿನಿಧಿಸುವುದಿಲ್ಲ ಎಂದು ಹೇಳಿದ್ದಾರೆ. ಜತೆಗೆ ಹಿಂದೂಯೇತರ ಕ್ರಿಕೆಟಿಗರನ್ನೂ ಉಲ್ಲೇಖಿಸಿದ್ದಾರೆ. ಮೊಹ್ಮದ್ ಸಿರಾಜ್ ಎಂದೂ ಅದನ್ನು ಮಸೀದಿಗೆ ಒಯ್ದಿಲ್ಲ. ಸಂಜು ಸ್ಯಾಮ್ಸನ್ ಚರ್ಚ್ ಗೆ ಒಯ್ದಿಲ್ಲ..ಸಂಜು ಕೊಡುಗೆ ದೊಡ್ಡದು ಹಾಗೂ ಆತ ಸರಣಿಶ್ರೇಷ್ಠ" ಎಂದು ವಿಶ್ಲೇಷಿಸಿದ್ದಾರೆ.







