ಪಾರ್ಥಿವ್ ಪಟೇಲ್ ಅಲ್ಲ, ಮುಖ್ಯ ಆಯ್ಕೆಗಾರನಾಗಿ 24 ಟೆಸ್ಟ್ ಪಂದ್ಯಗಳ ಅನುಭವಿ ಆಟಗಾರ?
ಪಶ್ಚಿಮ ವಲಯದ ಹುದ್ದೆಗೆ ಅರ್ಜಿ ಸಲ್ಲಿಸಲು ಬುಧವಾರವೇ ಕೊನೆಯ ದಿನ; ರಮೇಶ್ ಪವಾರ್, ಸಮೀರ್ ದಿಘೆ ಹೆಸರು ಚರ್ಚೆಯಲ್ಲಿ

ಪಾರ್ಥಿವ್ ಪಟೇಲ್ |Photo Credit : PTI
ಹೊಸದಿಲ್ಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (BCCI) ಹಿರಿಯ ಪುರುಷರ ಆಯ್ಕೆ ಸಮಿತಿಯ ಪೂರ್ಣಾವಧಿ ಅಧ್ಯಕ್ಷರಾಗಿ ಪ್ರಜ್ಞಾನ್ ಓಜಾ ಮುಂದುವರಿಯುವ ಸಾಧ್ಯತೆ ಹೆಚ್ಚಿದೆ. ಪಶ್ಚಿಮ ವಲಯದ ಆಯ್ಕೆಗಾರರ ಹುದ್ದೆಗೆ ಭಾರತದ ಮಾಜಿ ವಿಕೆಟ್ ಕೀಪರ್ ಪಾರ್ಥಿವ್ ಪಟೇಲ್ ಅರ್ಜಿ ಸಲ್ಲಿಸದಿರುವುದು ಇದಕ್ಕೆ ಕಾರಣ ಎಂದು PTI ವರದಿ ಮಾಡಿದೆ.
ಹಿರಿಯರ ಆಯ್ಕೆ ಸಮಿತಿಯಲ್ಲಿ ಪಶ್ಚಿಮ ವಲಯದ ಪ್ರತಿನಿಧಿಯಾಗಿದ್ದ ಅಜಿತ್ ಅಗರ್ಕರ್ ಅವರ ಸ್ಥಾನಕ್ಕೆ ಪಾರ್ಥಿವ್ ನೇಮಕವಾಗಬಹುದು ಎಂಬ ನಿರೀಕ್ಷೆ ಇತ್ತು. ಆದರೆ, ಬುಧವಾರ (ಅಕ್ಟೋಬರ್ 14) ಅರ್ಜಿ ಸಲ್ಲಿಸುವ ಗಡುವು ಮುಕ್ತಾಯಗೊಂಡರೂ ಅವರು ಅರ್ಜಿ ಸಲ್ಲಿಸಿಲ್ಲ. ಹೀಗಾಗಿ, ಸಮಿತಿಯ ಹಂಗಾಮಿ ಅಧ್ಯಕ್ಷರಾಗಿರುವ ದಕ್ಷಿಣ ವಲಯದ ಪ್ರತಿನಿಧಿ ಪ್ರಜ್ಞಾನ್ ಓಜಾ ಅವರು ಪೂರ್ಣಾವಧಿಗೆ ಮುಂದುವರಿಯುವ ಸಾಧ್ಯತೆ ಇದೆ.
‘ಅಕ್ಟೋಬರ್ 14ರ ಸಂಜೆ 5 ಗಂಟೆಯವರೆಗೆ ಪಾರ್ಥಿವ್ ಅರ್ಜಿ ಸಲ್ಲಿಸಿರಲಿಲ್ಲ. BCCI ಗಡುವನ್ನು ವಿಸ್ತರಿಸುತ್ತದೆಯೇ ಎಂಬುದು ತಿಳಿದಿಲ್ಲ. ಗಡುವು ವಿಸ್ತರಿಸಿದರೆ ಅಥವಾ ಪಾರ್ಥಿವ್ ತಮ್ಮ ನಿರ್ಧಾರ ಬದಲಿಸಿದರೆ ಪರಿಸ್ಥಿತಿ ಬದಲಾಗಬಹುದು’ ಎಂದು BCCI ಮೂಲವೊಂದು PTIಗೆ ತಿಳಿಸಿದೆ.
ಓಜಾ ಭಾರತ ಪರ 24 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಹಾಲಿ ಆಯ್ಕೆಗಾರರ ಪೈಕಿ ಟೆಸ್ಟ್ ಕ್ರಿಕೆಟ್ನಲ್ಲಿ ಹೆಚ್ಚಿನ ಅನುಭವ ಹೊಂದಿರುವುದು ಅವರ ಪರವಾಗಿರುವ ಅಂಶವಾಗಿದೆ.
►ಪಶ್ಚಿಮ ವಲಯದ ಹುದ್ದೆಗೆ ಪವಾರ್ ಪೈಪೋಟಿ
ಕಿರಿಯರ ಆಯ್ಕೆ ಸಮಿತಿಯ ಅಧ್ಯಕ್ಷರಾಗಲಿದ್ದಾರೆ ಎಂದು ನಿರೀಕ್ಷಿಸಲಾಗಿದ್ದ ರಮೇಶ್ ಪವಾರ್ ಅವರು ಈಗ ಹಿರಿಯರ ಆಯ್ಕೆ ಸಮಿತಿಯ ಪಶ್ಚಿಮ ವಲಯದ ಪ್ರತಿನಿಧಿ ಹುದ್ದೆಗೆ ಪ್ರಬಲ ಸ್ಪರ್ಧಿಯಾಗಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಭಾರತದ ಮಾಜಿ ವಿಕೆಟ್ ಕೀಪರ್ ಸಮೀರ್ ದಿಘೆ ಅವರ ಹೆಸರೂ ಚರ್ಚೆಯಲ್ಲಿದೆ. ಈ ಹಿಂದೆ ಆಯ್ಕೆಗಾರರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದಾಗ ಪವಾರ್ ಮತ್ತು ದಿಘೆ ಇಬ್ಬರೂ ಅರ್ಜಿ ಸಲ್ಲಿಸಿದ್ದರು.
BCCI ಅರ್ಜಿ ಸಲ್ಲಿಸುವ ಗಡುವನ್ನು ವಿಸ್ತರಿಸಿ ಪಾರ್ಥಿವ್ ಅವರಿಗೆ ಮತ್ತೊಂದು ಅವಕಾಶ ನೀಡದಿದ್ದರೆ, ಪಶ್ಚಿಮ ವಲಯದ ಹುದ್ದೆಗೆ ಪ್ರಮುಖ ಅಭ್ಯರ್ಥಿಗಳ ಆಯ್ಕೆ ಸೀಮಿತವಾಗಬಹುದು.
ಪ್ರಸ್ತುತ ಪರಿಸ್ಥಿತಿಯಲ್ಲಿ, ಹಿರಿಯರ ಆಯ್ಕೆ ಸಮಿತಿಯಲ್ಲಿ ಜವಾಬ್ದಾರಿ ವಹಿಸಿಕೊಳ್ಳುವುದಕ್ಕಿಂತ ಗುಜರಾತ್ ಟೈಟಾನ್ಸ್ ತಂಡದ ಕೋಚಿಂಗ್ ಸಿಬ್ಬಂದಿಯೊಂದಿಗೆ ಹಾಗೂ ಪ್ರಸಾರ ಕಾರ್ಯಗಳಲ್ಲಿ ಪಾರ್ಥಿವ್ ಮುಂದುವರಿಯುವ ಸಾಧ್ಯತೆಯೇ ಹೆಚ್ಚಿದೆ ಎನ್ನಲಾಗಿದೆ.






