ಮತ್ತೆ ಜೊಕೊವಿಕ್ ಕೈತಪ್ಪಿದ 25 ನೇ ಗ್ರ್ಯಾನ್ಸ್ಲಾಮ್ ಕಿರೀಟ

ಜೊಕೊವಿಕ್ - PHOTO: AP
ಮೆಲ್ಬರ್ನ್, ಫೆ.1: ಆಸ್ಟ್ರೇಲಿಯನ್ ಓಪನ್ ಫೈನಲ್ನಲ್ಲಿ ರವಿವಾರ ಕಾರ್ಲೊಸ್ ಅಲ್ಕರಾಝ್ ವಿರುದ್ಧ ಸೋಲುಂಡಿರುವ ನೊವಾಕ್ ಜೊಕೊವಿಕ್ ತಮ್ಮ ದಾಖಲೆಯ 25ನೇ ಗ್ರ್ಯಾನ್ಸ್ಲಾಮ್ ಪ್ರಶಸ್ತಿಗಾಗಿ ಇನ್ನಷ್ಟು ದಿನಗಳು ಕಾಯಬೇಕಾಗಿದೆ.
ಜೊಕೊವಿಕ್ ಅವರು ಸದ್ಯ 24ನೇ ಗ್ರ್ಯಾನ್ಸ್ಲಾಮ್ ಪ್ರಶಸ್ತಿಯೊಂದಿಗೆ ಸಾರ್ವಕಾಲಿಕ ಶ್ರೇಷ್ಠ ಪಟ್ಟಿಯಲ್ಲಿ ಮಾರ್ಗರೆಟ್ ಕೋರ್ಟ್ ಅವರೊಂದಿಗೆ ಸ್ಥಾನ ಹಂಚಿಕೊಂಡಿದ್ದಾರೆ.
2023ರಲ್ಲಿ ಅಮೆರಿಕನ್ ಓಪನ್ ನಲ್ಲಿ ತನ್ನ 24ನೇ ಗ್ರ್ಯಾನ್ಸ್ಲಾಮ್ ಪ್ರಶಸ್ತಿ ಗೆದ್ದ ನಂತರ ಸರ್ಬಿಯಾದ ಆಟಗಾರನಿಗೆ ದಾಖಲೆಯ 25ನೇ ಟ್ರೋಫಿ ಜಯಿಸಲು ಸಾಧ್ಯವಾಗಿಲ್ಲ.
► 24ನೇ ಪ್ರಶಸ್ತಿಯ ನಂತರ ಜೊಕೊವಿಕ್ ಅವರ ದಾಖಲೆಯತ್ತ ಒಂದು ನೋಟ...
2024
ಆಸ್ಟ್ರೇಲಿಯನ್ ಓಪನ್: ಸೆಮಿ ಫೈನಲ್ (ಜನ್ನಿಕ್ ಸಿನ್ನರ್ ವಿರುದ್ಧ ಸೋಲು)
ಫ್ರೆಂಚ್ ಓಪನ್: ಕ್ವಾರ್ಟರ್ ಫೈನಲ್ (ವಾಕ್ಓವರ್)
ವಿಂಬಲ್ಡನ್: ಫೈನಲ್ (ಅಲ್ಕರಾಝ್ ವಿರುದ್ಧ ಸೋಲು)
ಯು.ಎಸ್. ಓಪನ್: ಮೂರನೇ ಸುತ್ತು (ಅಲೆಕ್ಸಿ ಪೊಪಿರಿನ್ ವಿರುದ್ಧ ಸೋಲು)
2025
ಆಸ್ಟ್ರೇಲಿಯನ್ ಓಪನ್: ಸೆಮಿ ಫೈನಲ್ (ಝ್ವೆರೆವ್ ವಿರುದ್ಧ ಗಾಯಗೊಂಡು ನಿವೃತ್ತಿ)
ಫ್ರೆಂಚ್ ಓಪನ್: ಸೆಮಿ ಫೈನಲ್ (ಸಿನ್ನರ್ ವಿರುದ್ಧ ಸೋಲು)
ವಿಂಬಲ್ಡನ್: ಸೆಮಿ ಫೈನಲ್ (ಸಿನ್ನರ್ ವಿರುದ್ಧ ಸೋಲು)
ಯು.ಎಸ್. ಓಪನ್: ಸೆಮಿ ಫೈನಲ್ (ಅಲ್ಕರಾಝ್ ವಿರುದ್ಧ ಸೋಲು)
2026
ಆಸ್ಟ್ರೇಲಿಯನ್ ಓಪನ್: ಫೈನಲ್ (ಅಲ್ಕರಾಝ್ ವಿರುದ್ಧ ಸೋಲು)
► ಅಲ್ಕರಾಝ್ ಐತಿಹಾಸಿಕ ಸಾಧನೆ
22 ವರ್ಷ 272ನೇ ದಿನಗಳಲ್ಲಿ ಎಲ್ಲ ನಾಲ್ಕು ಗ್ರ್ಯಾನ್ಸ್ಲಾಮ್ ಟ್ರೋಫಿಗಳನ್ನು ಗೆದ್ದ ಅಲ್ಕರಾಝ್ ಇತಿಹಾಸ ನಿರ್ಮಿಸಿದರು.
1938ರ ಫ್ರೆಂಚ್ ಚಾಂಪಿಯನ್ಶಿಪ್ನಲ್ಲಿ 22 ವರ್ಷ 363 ದಿನಗಳಲ್ಲಿ ಎಲ್ಲ ನಾಲ್ಕು ಗ್ರ್ಯಾನ್ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದ ಡಾನ್ ಬಡ್ಜ್ ಅವರ ದಾಖಲೆಯನ್ನು ಮುರಿದರು.
1968ರಲ್ಲಿ ಆರಂಭವಾದ ಟೆನಿಸ್ ಮುಕ್ತ ಯುಗದಲ್ಲಿ ಕೇವಲ ಐವರು ಆಟಗಾರರು ಎಲ್ಲ ನಾಲ್ಕು ಗ್ರ್ಯಾನ್ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ರಾಡ್ ಲೇವರ್ ಮೊದಲ ಬಾರಿ ಈ ಸಾಧನೆ ಮಾಡಿದ್ದರು. 2009 ಹಾಗೂ 2016ರ ನಡುವೆ ರೋಜರ್ ಫೆಡರರ್, ರಫೆಲ್ ನಡಾಲ್ ಹಾಗೂ ಜೊಕೊವಿಕ್ ಈ ಕ್ಲಬ್ ಸೇರಿದ್ದಾರೆ.







