“ನಾನು ವಿರಾಟ್ ಕೊಹ್ಲಿಗಾಗಿಯೇ ಕ್ರಿಕೆಟ್ ನೋಡಲು ಶುರು ಮಾಡಿದ್ದು”: ಟೆನಿಸ್ ದಿಗ್ಗಜ ನೊವಾಕ್ ಜೊಕೊವಿಕ್

ವಿರಾಟ್ ಕೊಹ್ಲಿ , ನೊವಾಕ್ ಜೊಕೊವಿಕ್ | Photo Credit : AP , PTI
ಮ್ಯಾಡ್ರಿಡ್: “ನಾನು ವಿರಾಟ್ ಕೊಹ್ಲಿಗಾಗಿಯೇ ಕ್ರಿಕೆಟ್ ನೋಡಲು ಶುರು ಮಾಡಿದ್ದು” ಎಂದು ಹೇಳುವ ಮೂಲಕ ಟೆನಿಸ್ ದಿಗ್ಗಜ ಹಾಗೂ 24 ಬಾರಿಯ ಗ್ರ್ಯಾಂಡ್ ಸ್ಲಾಮ್ ಸರದಾರ ನೊವಾಕ್ ಜೊಕೊವಿಕ್ ಕೋಟ್ಯಂತರ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಮನ ಗೆದ್ದಿದ್ದಾರೆ.
ಮ್ಯಾಡ್ರಿಡ್ ನಲ್ಲಿ ನಡೆದ ಪ್ರತಿಷ್ಠಿತ ಲಾರೆಸ್ ವಿಶ್ವ ಕ್ರೀಡಾ ಪ್ರಶಸ್ತಿ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನನಗೆ ಕ್ರಿಕೆಟ್ ಮೇಲೆ ಆಸಕ್ತಿ ಮೂಡಲು ವಿರಾಟ್ ಕೊಹ್ಲಿಯೇ ಕಾರಣ ಎಂದು ಪ್ರಶ್ನೆಯೊಂದಕ್ಕೆ ನೇರವಾಗಿ ಉತ್ತರಿಸಿದರು. “ವಿರಾಟ್ ಕೊಹ್ಲಿ ನನ್ನ ಉತ್ತಮ ಸ್ನೇಹಿತ. ಅವರ ಮೇಲಿರುವ ಗೌರವ ಮತ್ತು ಅಭಿಮಾನದಿಂದಲೇ ನಾನು ಕ್ರಿಕೆಟ್ ಅನ್ನು ಹೆಚ್ಚು ಫಾಲೊ ಮಾಡಲು ಶುರು ಮಾಡಿದ್ದು. ಅದಕ್ಕೂ ಮುನ್ನ ನನಗೆ ಕ್ರಿಕೆಟ್ ಬಗ್ಗೆ ಅಷ್ಟಾಗಿ ತಿಳಿದಿರಲಿಲ್ಲ. ನಾವು ಸದಾ ಸಂಪರ್ಕದಲ್ಲಿರುತ್ತೇವೆ” ಎಂದು ಸೆರ್ಬಿಯಾದಂತಹ ಕ್ರಿಕೆಟ್ ಅಷ್ಟೇನೂ ಜನಪ್ರಿಯವಲ್ಲದ ದೇಶದ ಟೆನಿಸ್ ಪಟುವಾದ ಜೊಕೊವಿಕ್ ಹೇಳಿದರು.
ಇದೇ ವೇಳೆ ಭಾರತೀಯ ಅಭಿಮಾನಿಗಳ ಬಗ್ಗೆ ಅಪಾರ ಗೌರವ ಹೊಂದಿರುವ ಜೊಕೊವಿಕ್, ಶೀಘ್ರದಲ್ಲೇ ಭಾರತಕ್ಕೆ ಭೇಟಿ ನೀಡುವ ಬಯಕೆಯನ್ನೂ ವ್ಯಕ್ತಪಡಿಸಿದರು.
“ಭಾರತದ ಕ್ರೀಡಾಭಿಮಾನಿಗಳು ನನಗೆ ನೀಡುತ್ತಿರುವ ಬೆಂಬಲಕ್ಕೆ ಧನ್ಯವಾದಗಳು. ಕಳೆದ ಕೆಲವು ವರ್ಷಗಳಿಂದ ಭಾರತಕ್ಕೆ ಬರಬೇಕು ಎಂಬ ಕೂಗು ಕೇಳಿ ಬರುತ್ತಿದೆ. ಮುಂದಿನ ದಿನಗಳಲ್ಲಿ ನಾನು ಭಾರತಕ್ಕೆ ಆಗಮಿಸಿದಾಗ, ವಿರಾಟ್ ಕೊಹ್ಲಿ ಜೊತೆ ಸೇರಿ ಸ್ವಲ್ಪ ಟೆನಿಸ್ ಮತ್ತು ಸ್ವಲ್ಪ ಕ್ರಿಕೆಟ್ ಆಡುವ ಆಸೆಯಿದೆ.” ಎಂದು ಹೇಳಿದ್ದಾರೆ.




