ಚೀನಾ ಓಪನ್ | ಜೊಕೊವಿಕ್ ಸೆಮಿ ಫೈನಲ್ಗೆ

Photo Credit : X@DjokerNole
ಹೊಸದಿಲ್ಲಿ: ಅಗ್ರ ಶ್ರೇಯಾಂಕದ ಅಲೆಕ್ಸಾಂಡರ್ ಝ್ವೆರೆವ್ರನ್ನು ಮಣಿಸಿದ ನೊವಾಕ್ ಜೊಕೊವಿಕ್ ಚೀನಾ ಓಪನ್ ಟೆನಿಸ್ ಟೂರ್ನಿಯಲ್ಲಿ ಸೆಮಿ ಫೈನಲ್ಗೆ ತಲುಪಿದ್ದಾರೆ.
ರವಿವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಕ್ವಾರ್ಟರ್ ಫೈನಲ್ನಲ್ಲಿ ಜೊಕೊವಿಕ್ ಅವರು ಜರ್ಮನಿ ಆಟಗಾರನನ್ನು 4-6, 6-4, 6-4 ಸೆಟ್ಗಳ ಅಂತರದಿಂದ ಮಣಿಸಿದರು. ದಶಕಗಳ ನಂತರ ಬೀಜಿಂಗ್ ಟೂರ್ನಮೆಂಟ್ಗೆ ವಾಪಸಾಗಿರುವ ಜೊಕೊವಿಕ್ ತನ್ನ ಅಜೇಯ ದಾಖಲೆ ಕಾಯ್ದುಕೊಂಡಿದ್ದಾರೆ.
2015ರ ನಂತರ ಮೊದಲ ಬಾರಿ ಎಟಿಪಿ 500 ಟೂರ್ನಿಯನ್ನು ಆಡಿದ ಆರು ಬಾರಿಯ ಚಾಂಪಿಯನ್ ಜೊಕೊವಿಕ್ ಹಾಲಿ ಫ್ರೆಂಚ್ ಓಪನ್ ಹಾಗೂ ಯುಎಸ್ ಓಪನ್ ಚಾಂಪಿಯನ್ ಝ್ವೆರೆವ್ಗೆ ಸೋಲಿನ ರುಚಿ ಉಣಿಸಿದರು.
ಮೊದಲ ಸೆಟ್ಟನ್ನು 4-6ರಿಂದ ಸೋತಿದ್ದ ಜೊಕೊವಿಕ್ ಇನ್ನೆರಡು ಸೆಟ್ಗಳನ್ನು ಸುಲಭವಾಗಿ ಗೆದ್ದುಕೊಂಡರು. ದಾಖಲೆಯ ಏಳನೇ ಚೀನಾ ಓಪನ್ ಪ್ರಶಸ್ತಿಯತ್ತ ಹೆಜ್ಜೆ ಇರಿಸಿದರು.
2025ರ ಫ್ರೆಂಚ್ ಓಪನ್ ನಂತರ ಉಭಯ ಆಟಗಾರರು ಮುಖಾಮುಖಿಯಾಗಿರಲಿಲ್ಲ. ಆಗ ಜೊಕೊವಿಕ್ ನಾಲ್ಕು ಸೆಟ್ಗಳಿಂದ ಜಯಶಾಲಿಯಾಗಿದ್ದರು.
ಈ ಋತುವಿನಲ್ಲಿ ಪದೇ ಪದೇ ಗಾಯದ ಸಮಸ್ಯೆಗೆ ಒಳಗಾಗಿದ್ದರೂ 24 ಬಾರಿಯ ಗ್ರ್ಯಾನ್ಸ್ಲಾಮ್ ಚಾಂಪಿಯನ್ ಜೊಕೊವಿಕ್ ನಿರ್ಣಾಯಕ ಕ್ಷಣದಲ್ಲಿ ತನ್ನ ಶ್ರೇಷ್ಠ ಟೆನಿಸ್ ಆಡುವ ಸಾಮರ್ಥ್ಯವಿದೆ ಎಂದು ಮತ್ತೊಮ್ಮೆ ಸಾಬೀತುಪಡಿಸಿದರು.
ಸಬಲೆಂಕಾಗೆ ಸೋಲು: ಇದಕ್ಕೂ ಮೊದಲು ಮಹಿಳೆಯರ ಸಿಂಗಲ್ಸ್ ಪಂದ್ಯದಲ್ಲಿ ಆರ್ಯನಾ ಸಬಲೆಂಕಾ ಮತ್ತೊಂದು ಹಿನ್ನಡೆ ಅನುಭವಿಸಿದರು. ವಿಶ್ವದ ನಂ.2ನೇ ಆಟಗಾರ್ತಿ ಝೆಕ್ನ ಯುವ ಆಟಗಾರ್ತಿ ನಿಕೊಲಾ ಬಾರ್ಟುಂಕೋವಾ ವಿರುದ್ಧ ಒಂದು ಗಂಟೆ, 35 ನಿಮಿಷಗಳ ಕಾಲ ನಡೆದ ಮೂರನೇ ಸುತ್ತಿನ ಪಂದ್ಯದಲ್ಲಿ 4-6, 3-6 ಸೆಟ್ಗಳ ಅಂತರದಿಂದ ಸೋತಿದ್ದಾರೆ.






