ಶ್ರೀಲಂಕಾ ಕ್ರಿಕೆಟ್ ಮಂಡಳಿ ವಿರುದ್ಧ ಪ್ರಕರಣ ಹಿಂಪಡೆದ ನುವಾನ್ ತುಷಾರ

ನುವಾನ್ ತುಷಾರ | Photo Credit : PTI
ಹೊಸದಿಲ್ಲಿ: ಶ್ರೀಲಂಕಾದ ವೇಗದ ಬೌಲರ್ ನುವಾನ್ ತುಷಾರ ಶ್ರೀಲಂಕಾ ಕ್ರಿಕೆಟ್ ಮಂಡಳಿಯ(ಎಸ್ಎಲ್ಸಿ)ವಿರುದ್ಧ ತಾನು ದಾಖಲಿಸಿದ್ದ ಕಾನೂನು ಪ್ರಕರಣವನ್ನು ಹಿಂಪಡೆದಿದ್ದಾರೆ. 2026ರ ಐಪಿಎಲ್ ಟೂರ್ನಿಯಲ್ಲಿ ಭಾಗವಹಿಸುವ ಕುರಿತಂತೆ ಇದ್ದ ವಿವಾದಗಳಿಗೆ ಅಂತ್ಯ ಹಾಡಿದ್ದಾರೆ.
ಐಪಿಎಲ್ನಂತಹ ವಿದೇಶಿ ಕ್ರಿಕೆಟ್ ಲೀಗ್ಗಳಲ್ಲಿ ಪಾಲ್ಗೊಳ್ಳಲು ಕಡ್ಡಾಯವಾಗಿ ಅಗತ್ಯವಿರುವ ನಿರಾಕ್ಷೇಪಣಾ ಪ್ರಮಾಣ ಪತ್ರ(ಎನ್ಒಸಿ)ನೀಡಲು ಶ್ರೀಲಂಕಾ ಕ್ರಿಕೆಟ್ ಮಂಡಳಿಯು ನಿರಾಕರಿಸಿದ ನಂತರ ತುಷಾರ ಅವರು ಕೊಲಂಬೊ ಜಿಲ್ಲಾ ನ್ಯಾಯಾಲಯದ ಮೊರೆ ಹೋಗಿದ್ದರು. ಹೊಸದಾಗಿ ಪರಿಚಯಿಸಿರುವ ಫಿಟ್ನೆಸ್ ಮಾನದಂಡಗಳನ್ನು ಪೂರೈಸಲು ವಿಫಲವಾಗಿರುವುದನ್ನು ಉಲ್ಲೇಖಿಸಿ ಮಂಡಳಿಯು ಅನುಮತಿ ನೀಡಲು ನಿರಾಕರಿಸಿತ್ತು.
2 ಕಿ.ಮೀ. ಓಟದ ಪರೀಕ್ಷೆಯಲ್ಲಿ ನಿಗದಿತ ಸ್ಕೋರನ್ನು ಗಳಿಸದೆ ಮಂಡಳಿಯ ಕಡ್ಡಾಯ ಫಿಟ್ನೆಸ್ ಮಾನದಂಡವನ್ನು ಪೂರೈಸುವಲ್ಲಿ ವಿಫಲವಾದ ಕಾರಣ ಶ್ರೀಲಂಕಾ ಕ್ರಿಕೆಟ್ ಮಂಡಳಿಯು 2026ರ ಐಪಿಎಲ್ಗಾಗಿ ತುಷಾರಗೆ ಎನ್ಒಸಿ ನೀಡಲು ನಿರಾಕರಿಸಿತ್ತು.
2022ರಲ್ಲಿ ತನ್ನ ಚೊಚ್ಚಲ ಪಂದ್ಯವನ್ನಾಡಿದ ನಂತರ ವೇಗದ ಬೌಲರ್ ತುಷಾರ ಸುಮಾರು 30 ಟಿ-20 ಪಂದ್ಯಗಳಲ್ಲಿ ಶ್ರೀಲಂಕಾ ತಂಡವನ್ನು ಪ್ರತಿನಿಧಿಸಿದ್ದರು.
ಶ್ರೀಲಂಕಾ ಕ್ರಿಕೆಟ್ ಮಂಡಳಿಯ ನಿರ್ಧಾರವನ್ನು ಪ್ರಶ್ನಿಸಿದ ತುಷಾರ, ಎನ್ಒಸಿ ನಿರಾಕರಣೆಯು ಅನ್ಯಾಯವಾಗಿದ್ದು, ಇದು ನನ್ನ ವೈಯಕ್ತಿಕ ಅವಕಾಶಗಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ವಾದಿಸಿದ್ದರು.
2026ರ ಐಪಿಎಲ್ ಟೂರ್ನಿಯಲ್ಲಿ ತುಷಾರ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸಲು ಸಜ್ಜಾಗಿದ್ದರು. ಈ ಹಿಂದೆ 2024 ಹಾಗೂ 2025ರ ಆವೃತ್ತಿಯ ಐಪಿಎಲ್ ಟೂರ್ನಿಗಳಲ್ಲಿ ಆಡಿದ್ದರು.
ಆದರೆ ಇತ್ತೀಚೆಗಿನ ವಿಚಾರಣೆಯ ವೇಳೆ ತುಷಾರ ಅವರ ಕಾನೂನು ತಂಡವು ತುಷಾರ ಅವರು ತನ್ನ ಅರ್ಜಿಯನ್ನು ಹಿಂಪಡೆಯಲು ಬಯಸಿದ್ದಾರೆ ಎಂದು ನ್ಯಾಯಾಲಯಕ್ಕೆ ಮಾಹಿತಿ ನೀಡಿದೆ. ಈ ವರ್ಷದ ಐಪಿಎಲ್ ಟೂರ್ನಿಯು ಬಹುತೇಕ ಮುಗಿದಿದೆ. ಹೀಗಾಗಿ ಕಾನೂನು ಹೋರಾಟದಲ್ಲಿ ಅರ್ಥವಿಲ್ಲವಾಗಿದೆ. ತುಷಾರ ಕೋರಿಕೆಯ ಮೇರೆಗೆ ನ್ಯಾಯಾಲಯವು ಪ್ರಕರಣವನ್ನು ವಜಾಗೊಳಿಸಿತು.
2026ರ ಆವೃತ್ತಿಯ ಐಪಿಎಲ್ ಆರಂಭಕ್ಕೆ ಮೊದಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ನುವಾನ್ ತುಷಾರರನ್ನು 1.60 ಕೋಟಿ ರೂ.ಗೆ ತನ್ನಲ್ಲೇ ಉಳಿಸಿಕೊಂಡಿತ್ತು. ಈ ಮೊದಲು ತುಷಾರ ಅವರು ಮುಂಬೈ ಇಂಡಿಯನ್ಸ್ ತಂಡದಲ್ಲಿ ಆಡಿದ್ದರು. ಆ ತಂಡದೊಂದಿಗೆ 4.80 ಕೋ.ರೂ.ಗೆ ಸಹಿ ಹಾಕಿದ್ದರು. ಎಂಟು ವಿಕೆಟ್ಗಳನ್ನು ಪಡೆಯುವ ಮೂಲಕ ತನ್ನ ಚೊಚ್ಚಲ ಐಪಿಎಲ್ ಟೂರ್ನಿಯಲ್ಲಿ ಮಿಂಚಿದ್ದರು.
ತುಷಾರ 2025ರ ಮೆಗಾ ಹರಾಜಿನಲ್ಲಿ 1.60 ಕೋಟಿ ರೂ.ಗೆ ಆರ್ಸಿಬಿ ತೆಕ್ಕೆಗೆ ಸೇರಿದ್ದರು. ಆದರೆ ಅವರು ಕೇವಲ ಒಂದು ಪಂದ್ಯವನ್ನಾಡಿದ್ದು, 26ಕ್ಕೆ 1 ವಿಕೆಟ್ ಪಡೆದಿದ್ದರು.






