ಶ್ರೀಲಂಕಾ ಕ್ರಿಕೆಟ್ ಮಂಡಳಿ ವಿರುದ್ಧ ಕೋರ್ಟ್ ಮೊರೆ ಹೋದ ನುವಾನ್ ತುಷಾರ; ಕಾರಣವೇನು?

File Photo: PTI
ಕೊಲಂಬೊ: ತನಗೆ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಆಡಲು ನಿರಾಕ್ಷೇಪಣೆ ಪ್ರಮಾಣಪತ್ರ (ಎನ್ಒಸಿ) ನೀಡಲು ನಿರಾಕರಿಸಿರುವ ಶ್ರೀಲಂಕಾ ಕ್ರಿಕೆಟ್ ಮಂಡಳಿ(ಎಸ್ಎಲ್ಸಿ) ವಿರುದ್ಧ ಶ್ರೀಲಂಕಾ ಕ್ರಿಕೆಟ್ ತಂಡದ ವೇಗದ ಬೌಲರ್ ನುವಾನ್ ತುಷಾರ ಕೊಲಂಬೊ ಜಿಲ್ಲಾ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದ್ದಾರೆ.
ತನ್ನ ನೂತನ ಹಾಗೂ ಕಠಿಣ ದೈಹಿಕ ಕ್ಷಮತೆ ನಿಯಮಗಳ ಅಡಿಯಲ್ಲಿ ತುಷಾರಗೆ ನಿರಾಕ್ಷೇಪಣೆ ಪ್ರಮಾಣಪತ್ರವನ್ನು ನೀಡಲು ಶ್ರೀಲಂಕಾ ಕ್ರಿಕೆಟ್ ನಿರಾಕರಿಸಿತ್ತು.
ಶ್ರೀಲಂಕಾ ಕ್ರಿಕೆಟ್ನೊಂದಿಗಿನ ತನ್ನ ಗುತ್ತಿಗೆಯು 2026 ಮಾರ್ಚ್ 31ರಂದು ಮುಕ್ತಾಯಗೊಳ್ಳಲಿದ್ದು, ಆ ಬಳಿಕ ಅಂತರ್ರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಹೊಂದಲು ತಾನು ಉದ್ದೇಶಿಸಿದ್ದೆ ಎಂದು ತುಷಾರ ತನ್ನ ಅರ್ಜಿಯಲ್ಲಿ ವಾದಿಸಿದ್ದಾರೆ. ಹಾಗಾಗಿ, ಎಸ್ಎಲ್ಸಿಯು ನೂತನ ದೈಹಿಕ ಕ್ಷಮತೆ ನಿಯಮಗಳನ್ನು ತನಗೆ ಅನ್ವಯಿಸಿರುವುದು ಸರಿಯಲ್ಲ ಹಾಗೂ ಅದು ತನ್ನ ಜೀವನೋಪಾಯಕ್ಕೆ ನೀಡಿದ ಹೊಡೆತವಾಗಿದೆ ಎಂದು ಅವರು ಆರೋಪಿಸಿದ್ದಾರೆ.
ತುಷಾರ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸದಸ್ಯರಾಗಿದ್ದಾರೆ. ಐಪಿಎಲ್ ನಿಂದ ಹೊರಬಿದ್ದಿರುವುದರಿಂದ ತನ್ನ ಆದಾಯ ನಷ್ಟವಾಗಿದೆ ಎಂದು ಅವರು ಹೇಳಿದ್ದಾರೆ.
ಮೊಕದ್ದಮೆಯಲ್ಲಿ, ಎಸ್ಎಲ್ಸಿ ಅಧ್ಯಕ್ಷ ಶಮ್ಮಿ ಸಿಲ್ವ, ಕಾರ್ಯದರ್ಶಿ ಬಂಡುಲಾ ದಿಸ್ಸನಾಯಕೆ, ಖಜಾಂಚಿ ಸುಜೀವ ಗೋದಲಿಯಡ್ಡ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆ್ಯಶ್ಲೇ ಡಿ ಸಿಲ್ವರನ್ನು ಪ್ರತಿವಾದಿಗಳಾಗಿ ಮಾಡಲಾಗಿದೆ. ತುಷಾರ ಅವರ ಮೊಕದ್ದಮೆಯ ವಿಚಾರಣೆಯು ಎಪ್ರಿಲ್ 9ರಂದು ನಡೆಯಲಿದೆ. ಅದಕ್ಕಿಂತ ಮೊದಲು ಈಸ್ಟರ್ ವಾರಾಂತ್ಯದಲ್ಲಿ ನ್ಯಾಯಾಲಯಗಳು ಮುಚ್ಚಿರುತ್ತವೆ. ಅದೂ ಅಲ್ಲದೆ, ಅರ್ಜಿಯು ಒಂದೇ ವಿಚಾರಣೆಯಲ್ಲಿ ಇತ್ಯರ್ಥಗೊಳ್ಳುವ ಸಾಧ್ಯತೆ ಅತ್ಯಲ್ಪ. ಹಾಗಾಗಿ, ಈ ಬಾರಿಯ ಐಪಿಎಲ್ನಲ್ಲಿ ತುಷಾರ ಆಡುವ ಸಾಧ್ಯತೆಯೂ ಅತ್ಯಲ್ಪ.







