ಮೊದಲ ಟೆಸ್ಟ್: ದಕ್ಷಿಣ ಆಫ್ರಿಕಾ ವಿರುದ್ಧ ನ್ಯೂಝಿಲ್ಯಾಂಡ್ ಗೆ ಭರ್ಜರಿ ಜಯ
ರಚಿನ್ ರವೀಂದ್ರ ಪಂದ್ಯಶ್ರೇಷ್ಠ

Photo :twitter
ಮೌಂಟ್ ಮೌಂಗನುಯ್: ಮೊದಲ ಟೆಸ್ಟ್ನ ನಾಲ್ಕನೇ ದಿನದಾಟವಾದ ಬುಧವಾರ ನ್ಯೂಝಿಲ್ಯಾಂಡ್ ಕ್ರಿಕೆಟ್ ತಂಡ ಅನನುಭವಿ ದಕ್ಷಿಣ ಆಫ್ರಿಕಾ ತಂಡವನ್ನು 281 ರನ್ ಅಂತರದಿಂದ ಹೀನಾಯವಾಗಿ ಸೋಲಿಸಿದೆ. ಈ ಮೂಲಕ 2 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಕಿವೀಸ್ ತನ್ನ ಎರಡನೇ ಇನಿಂಗ್ಸನ್ನು 4 ವಿಕೆಟ್ಗಳ ನಷ್ಟಕ್ಕೆ 179 ರನ್ಗೆ ಡಿಕ್ಲೇರ್ ಮಾಡಿತು. ದಕ್ಷಿಣ ಆಫ್ರಿಕಾದ ಗೆಲುವಿಗೆ 529 ರನ್ ಕಠಿಣ ಗುರಿ ನೀಡಿತು.
ಮೊದಲ 20 ನಿಮಿಷಗಳಲ್ಲಿ ಆತಿಥೇಯ ತಂಡದ ವೇಗಿಗಳು ದಕ್ಷಿಣ ಆಫ್ರಿಕಾದ ಆರಂಭಿಕ ಆಟಗಾರರಾದ ನೈಲ್ ಬ್ರ್ಯಾಂಡ್(3 ರನ್) ಹಾಗೂ ಎಡ್ವರ್ಡ್ ಮೂರೆ (0)ವಿಕೆಟ್ಗಳನ್ನು ಉರುಳಿಸಿದರು, ಹಂಝಾ(36 ರನ್) ಅವರು ರೆನಾರ್ಡ್ ವ್ಯಾನ್ ಟೊಂಡರ್(31 ರನ್)ಅವರೊಂದಿಗೆ ಮೂರನೇ ವಿಕೆಟ್ಗೆ 63 ರನ್ ಜೊತೆಯಾಟ ನಡೆಸಿ ಇನಿಂಗ್ಸ್ಗೆ ಜೀವ ತುಂಬಿದರು.
ಭೋಜನ ವಿರಾಮದ ನಂತರ ಕೈಲ್ ಜಮೀಸನ್(4-58) ಸ್ವಿಂಗ್ ಬೌಲಿಂಗ್ ಮೂಲಕ ಹಂಝಾ ಹಾಗೂ ರೆನಾರ್ಡ್ ವಿಕೆಟನ್ನು ಉರುಳಿಸಿದರು. ಮೂರನೇ ಟೆಸ್ಟ್ ಪಂದ್ಯವನ್ನಾಡುತ್ತಿರುವ 29ರ ಹರೆಯದ ಡೇವಿಡ್ ಬೆಡಿಂಗ್ಹ್ಯಾಮ್ ಕೊನೆಗೂ ತನ್ನ ಪ್ರಥಮ ದರ್ಜೆ ಕ್ರಿಕೆಟ್ ಫಾರ್ಮ್ನ್ನು ಪುನರಾವರ್ತಿಸಿದರು. 87 ರನ್ ಸಿಡಿಸಿ ತಂಡದ ಮೊತ್ತವನ್ನು 173ಕ್ಕೆ ತಲುಪಿಸಿದರು.
ಮೊದಲ ಶತಕ ಗಳಿಸುವ ಅವಕಾಶದಿಂದ ವಂಚಿತರಾದ ಬೆಡಿಂಗ್ಹ್ಯಾಮ್ ಅವರು ಜಮೀಸನ್ಗೆ ವಿಕೆಟ್ ಒಪ್ಪಿಸಿದರು.
ಪಾರ್ಟ್ಟೈಂ ಬೌಲರ್ ಗ್ಲೆನ್ ಫಿಲಿಪ್ಸ್(1-30) ಕ್ಲೈಡ್ ಫೋರ್ಟುನ್(11ರನ್)ವಿಕೆಟನ್ನು ಉರುಳಿಸಿದರು.
ದಕ್ಷಿಣ ಆಫ್ರಿಕಾದ ಸ್ಕೋರ್ 200ರ ಗಡಿ ದಾಟಿದ ನಂತರ ಸ್ಪೆಷಲಿಸ್ಟ್ ಸ್ಪಿನ್ನರ್ ಮಿಚೆಲ್ ಸ್ಯಾಂಟ್ನರ್(3-59) ಮೂರು ವಿಕೆಟ್ಗಳನ್ನು ಉರುಳಿಸಿ ಎದುರಾಳಿ ತಂಡವನ್ನು 247 ರನ್ಗೆ ಆಲೌಟ್ ಮಾಡಲು ನೆರವಾದರು.
ಎರಡನೇ ಹಾಗೂ ಫೈನಲ್ ಟೆಸ್ಟ್ ಪಂದ್ಯವು ಹ್ಯಾಮಿಲ್ಟನ್ನಲ್ಲಿ ಫೆಬ್ರವರಿ 13ರಿಂದ ಆರಂಭವಾಗಲಿದೆ. ನ್ಯೂಝಿಲ್ಯಾಂಡ್ ಸುಮಾರು 100 ವರ್ಷಗಳ ನಂತರ ಮೊದಲ ಬಾರಿ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿಯನ್ನು ಗೆಲ್ಲುವ ಭರವಸೆಯಲ್ಲಿದೆ.
ಮೊದಲ ಇನಿಂಗ್ಸ್ನಲ್ಲಿ ದ್ವಿಶತಕ ಸಿಡಿಸಿದ್ದ ರಚಿನ್ ರವೀಂದ್ರ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.







