ಭಾರತ-ದ. ಆಫ್ರಿಕ ಮೊದಲ ಟೆಸ್ಟ್ ವೇಳೆ ಭಾರೀ ಮಳೆ?

Photo: PTI
ಸೆಂಚೂರಿಯನ್ (ದಕ್ಷಿಣ ಆಫ್ರಿಕ): ಪ್ರವಾಸಿ ಭಾರತ ಮತ್ತು ದಕ್ಷಿಣ ಆಫ್ರಿಕ ತಂಡಗಳ ನಡುವಿನ ಟೆಸ್ಟ್ ಸರಣಿಯ ಮೊದಲ ಪಂದ್ಯದ ವೇಳೆ ಭಾರೀ ಮಳೆ ಸುರಿಯುವ ಸೂಚನೆಗಳಿವೆ ಎಂದು ಸೆಂಚೂರಿಯನ್ನ ಸೂಪರ್ಸ್ಪೋರ್ಟ್ ಪಾರ್ಕ್ ಮೈದಾನದ ಕ್ಯುರೇಟರ್ ಬ್ರೇನ್ ಬ್ಲಾಯ್ ಶನಿವಾರ ಹೇಳಿದ್ದಾರೆ.
ಹಾಗಾಗಿ, ಈ ಮೈದಾನದ ಪಿಚ್ ವೇಗದ ಬೌಲರ್ಗಳಿಗೆ ನೆರವು ನೀಡಬಹುದು ಮತ್ತು ಬ್ಯಾಟರ್ಗಳು ಪರದಾಡಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯವು ಡಿಸೆಂಬರ್ 26ರಂದು ಆರಂಭಗೊಳ್ಳಲಿದೆ.
ಭಾರೀ ಮಳೆಯಿಂದಾಗಿ ಟೆಸ್ಟ್ನ ಆರಂಭಿಕ ದಿನ ಮತ್ತು ಎರಡನೇ ದಿನದ ಹೆಚ್ಚಿನ ಭಾಗ ಆಟ ನಡೆಯುವ ಸಾಧ್ಯತೆ ತುಂಬಾ ಕಡಿಮೆ ಎಂದು ಸೆಂಚೂರಿಯನ್ ಕ್ಯುರೇಟರ್ ಅಭಿಪ್ರಾಯಪಟ್ಟರು. ಉಷ್ಣತೆಯಲ್ಲಿ ಕುಸಿತವಾಗಲಿದೆ ಮತ್ತು ಸ್ಪಿನ್ನರ್ಗಳು ಹೆಚ್ಚಿನ ನೆರವನ್ನು ಪಡೆಯುವ ಸಾಧ್ಯತೆಯಿಲ್ಲ ಎಂದು ಅವರು ಹೇಳಿದರು.
‘‘ಉಷ್ಣತೆಯು ತುಂಬಾ ಕಡಿಮೆ ಇರುತ್ತದೆ, 20 ಡಿಗ್ರಿ ಸೆಲ್ಸಿಯಸ್ನಷ್ಟು. ಈಗ ಉಷ್ಣತೆ 34 ಡಿಗ್ರಿ ಸೆಲ್ಸಿಯಸ್ ಇದೆ. ಆಗ ಯಾವ ಪರಿಸ್ಥಿತಿ ಇರುತ್ತದೆ ಎನ್ನುವುದು ನನಗೆ ಗೊತ್ತಿಲ್ಲ. ಮೊದಲ ದಿನದಂದು ಆಟ ನಡೆಯುತ್ತದೆಯೇ ಎನ್ನುವುದೂ ಗೊತ್ತಿಲ್ಲ’’ ಎಂದರು.





