ಅಪರೂಪದ ಟೆಸ್ಟ್ ಬೌಲಿಂಗ್ ಕ್ಲಬ್ ಗೆ ರಾಬಿನ್ಸನ್ ಸೇರ್ಪಡೆ

Photo : AP/Kirsty Wigglesworth
ಎಜ್ಬಾಸ್ಟನ್, ಸೆ. 11: ಕನಿಷ್ಠ 20 ಪಂದ್ಯಗಳನ್ನಾಡಿದ ನಂತರ 19ಕ್ಕಿಂತ ಕಡಿಮೆ ಸರಾಸರಿಯಲ್ಲಿ ಬೌಲಿಂಗ್ ಮಾಡಿದ ಶತಮಾನದ ಮೊದಲ ಬೌಲರ್ ಎನಿಸಿಕೊಂಡಿರುವ ಓಲಿ ರಾಬಿನ್ಸನ್ ಟೆಸ್ಟ್ ಕ್ರಿಕೆಟ್ ನ ಅತ್ಯಂತ ವಿಶೇಷ ಬೌಲಿಂಗ್ ಕ್ಲಬ್ ಗೆ ಸೇರ್ಪಡೆಯಾದರು.
ಈಗ ನಡೆಯುತ್ತಿರುವ ಪಾಕಿಸ್ತಾನದ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ರಾಬಿನ್ಸನ್ ಎರಡು ವಿಕೆಟ್ಗಳನ್ನು ಪಡೆದಿದ್ದಾರೆ. ವೃತ್ತಿಜೀವನದಲ್ಲಿ 24 ಟೆಸ್ಟ್ ಪಂದ್ಯಗಳಲ್ಲಿ 104 ವಿಕೆಟ್ ಗಳನ್ನು ಪಡೆದಿದ್ದಾರೆ. ರಾಬಿನ್ಸನ್ ಅವರ ಸರಾಸರಿಯು 18.86ಕ್ಕೆ ಕುಸಿದಿದೆ.
ಇಂಗ್ಲೆಂಡ್ ನ ವೇಗದ ಬೌಲರ್ ಇದೀಗ 1914ರ ನಂತರ 20 ಟೆಸ್ಟ್ ಪಂದ್ಯಗಳನ್ನಾಡಿದ ನಂತರ 19ಕ್ಕಿಂತ ಕಡಿಮೆ ಸರಾಸರಿಯಲ್ಲಿ ಬೌಲಿಂಗ್ ಮಾಡಿದ ಮೊದಲ ಬೌಲರ್ ಆಗಿದ್ದಾರೆ. 1914ರಲ್ಲಿ ಸಿಡ್ನಿ ಬಾರ್ನೆಸ್ ಈ ಸಾಧನೆ ಮಾಡಿದ್ದರು.
ಬಾರ್ನೆಸ್ 27 ಪಂದ್ಯಗಳಲ್ಲಿ 16.43ರ ಸರಾಸರಿಯಲ್ಲಿ 189 ವಿಕೆಟ್ಗಳೊಂದಿಗೆ 1914ರಲ್ಲಿ ತಮ್ಮ ವೃತ್ತಿಜೀವನ ಕೊನೆಗೊಳಿಸಿದ್ದರು. ರಾಬಿನ್ಸನ್ 112 ವರ್ಷಗಳ ನಂತರ ಈ ಸಾಧನೆ ಮಾಡಿದ್ದಾರೆ.
ಕನಿಷ್ಠ 20 ಟೆಸ್ಟ್ ಪಂದ್ಯಗಳನ್ನಾಡಿದ ನಂತರ 20ಕ್ಕಿಂತ ಕಡಿಮೆ ಸರಾಸರಿಯಲ್ಲಿ ವಿಕೆಟ್ ಪಡೆದಿರುವ ಕೇವಲ ಆರು ಬೌಲರ್ಗಳಿದ್ದಾರೆ. ಇದರಲ್ಲಿ ನಾಲ್ವರು ಇಂಗ್ಲೆಂಡ್ನ ಆರಂಭಿಕ ಯುಗದಲ್ಲಿದ್ದರೆ, ರಾಬಿನ್ಸನ್ ಹಾಗೂ ಭಾರತದ ಜಸ್ಪ್ರೀತ್ ಬುಮ್ರಾ ಇತರ ಇಬ್ಬರು ಬೌಲರ್ಗಳಾಗಿದ್ದಾರೆ.






