ಒಂದು ಕೆಟ್ಟ ದಿನ ಎಲ್ಲವನ್ನೂ ಕೆಡಿಸಬಹುದು: ಟೀಂ ಇಂಡಿಯಾಗೆ ದ್ರಾವಿಡ್ ಕಿವಿಮಾತು

PC: x.com/ESPNcricinfo
ಮುಂಬೈ: ಫೆಬ್ರುವರಿ 7ರಿಂದ ಆರಂಭವಾಗಲಿರುವ ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತ ಪ್ರಶಸ್ತಿಯನ್ನು ಉಳಿಸಿಕೊಳ್ಳಲಿದೆ ಎಂಬ ವಿಶ್ವಾಸವನ್ನು ಟೀಂ ಇಂಡಿಯಾ ಮಾಜಿ ಕೋಚ್ ರಾಹುಲ್ ದ್ರಾವಿಡ್ ವ್ಯಕ್ತಪಡಿಸಿದ್ದಾರೆ. 2024ರ ಜೂನ್ 29ರಂದು ಭಾರತ ಟಿ20 ತಂಡದ ಕನಸನ್ನು ನನಸಾಗಿಸಿ 13 ವರ್ಷಗಳ ಐಸಿಸಿ ಪ್ರಶಸ್ತಿ ಬರವನ್ನು ನೀಗಿಸಿದ್ದ ದ್ರಾವಿಡ್, ಸೂರ್ಯಕುಮಾರ್ ಯಾದವ್ ನಾಯಕತ್ವ ಮತ್ತು ಕೋಚ್ ಗೌತಮ್ ಗಂಭೀರ್ ಮಾರ್ಗದರ್ಶನದ ತಂಡ ಅದ್ಭುತವಾಗಿದೆ ಎಂದು ಬಣ್ಣಿಸಿದ್ದಾರೆ.
ಕಳೆದ ಮೂರು ವರ್ಷಗಳಲ್ಲಿ ಟಿ20 ಸರಣಿಗಳಲ್ಲಿ ಭಾರತ ಅಜೇಯ ದಾಖಲೆಯನ್ನು ಹೊಂದಿದ್ದು, ತವರಿನಲ್ಲಿ ನಡೆಯಲಿರುವ ವಿಶ್ವಕಪ್ನಲ್ಲಿ ಫೇವರಿಟ್ ತಂಡವಾಗಿ ಹೊರಹೊಮ್ಮಿದೆ ಎಂದು ಅವರು ಹೇಳಿದ್ದಾರೆ.
ಆದಾಗ್ಯೂ, ಟೀಂ ಇಂಡಿಯಾಗೆ ಎಚ್ಚರಿಕೆಯ ಕಿವಿಮಾತು ಹೇಳಿರುವ ದ್ರಾವಿಡ್, ಒಂದು ಕೆಟ್ಟ ದಿನ ಎಲ್ಲವನ್ನೂ ನಾಶಪಡಿಸಬಲ್ಲದು ಎಂದು ಅಭಿಪ್ರಾಯಪಟ್ಟಿದ್ದಾರೆ. 2023ರ ನವೆಂಬರ್ 19ರ ಘಟನೆಯನ್ನು ಮೆಲುಕು ಹಾಕಿದ ಅವರು, “ಭಾರತ ತಂಡ ಎಷ್ಟು ಪ್ರಬಲವಾಗಿದೆ ಎಂಬ ಆತ್ಮಾವಲೋಕನ ಅಗತ್ಯ. ಏಕೆಂದರೆ ಒಂದು ಕೆಟ್ಟ ದಿನ ಪ್ರತಿಯೊಂದನ್ನೂ ನಾಶಪಡಿಸಬಲ್ಲದು,” ಎಂದು ವಿಶ್ಲೇಷಿಸಿದರು.
ಕಳೆದ ವಿಶ್ವಕಪ್ನಲ್ಲಿ 10 ಪಂದ್ಯಗಳನ್ನು ಸತತವಾಗಿ ಗೆದ್ದ ಬಳಿಕ ಕೋಚ್ ಸ್ಥಾನದಿಂದ ಕೆಳಗಿಳಿಯುವ ನಿರ್ಧಾರವನ್ನು ತಾವು ಪರಿಗಣಿಸಿದ್ದಾಗಿ ದ್ರಾವಿಡ್ ತಿಳಿಸಿದ್ದಾರೆ. ಆದರೆ ನಾಯಕ ರೋಹಿತ್ ಶರ್ಮಾ ಅವರು ಇನ್ನೂ ಆರು ತಿಂಗಳು ಮುಂದುವರಿಯುವಂತೆ ಮನವಿ ಮಾಡಿದ್ದರಿಂದ ಆ ನಿರ್ಧಾರಕ್ಕೆ ತಡೆಬಿದ್ದಿತು ಎಂದರು.
ಭಾರತದ ಪ್ರಾಬಲ್ಯವನ್ನು ಒತ್ತಿಹೇಳಿದ ದ್ರಾವಿಡ್, ಇತ್ತೀಚಿನ ವರ್ಷಗಳಲ್ಲಿ ಭಾರತ ಶೇಕಡಾ 80ರಷ್ಟು ಯಶಸ್ಸಿನ ದರ ಹೊಂದಿದೆ ಎಂದು ಹೇಳಿದರು. “ಸ್ಪಷ್ಟವಾಗಿ ಭಾರತ ಫೇವರಿಟ್ಗಳಾಗಿ ಟೂರ್ನಿಯನ್ನು ಆರಂಭಿಸಲಿದೆ. ಸರಾಗವಾಗಿ ಸೆಮಿಫೈನಲ್ಗೆ ಪ್ರವೇಶಿಸುವ ಸಾಧ್ಯತೆ ಇದೆ. ಆದರೆ ನಿರಾಸೆಯ ಅನುಭವಗಳಿಂದ ಪಾಠ ಕಲಿತ ನನ್ನ ಅಭಿಪ್ರಾಯವೆಂದರೆ, ಒಂದು ದಿನ ಇನ್ನೂ ಉತ್ತಮ ಪ್ರದರ್ಶನ ನೀಡುವ ತಂಡ ಫಲಿತಾಂಶವನ್ನು ಬುಡಮೇಲು ಮಾಡಬಹುದು,” ಎಂದು ಆರ್. ಕೌಶಿಕ್ ಬರೆದ ದಿ ರೈಸ್ ಆಫ್ ದ ಹಿಟ್ಮ್ಯಾನ್ ಕೃತಿಯ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಅವರು ಅಭಿಪ್ರಾಯಪಟ್ಟರು.







