ಏಕದಿನ ರ್ಯಾಂಕಿಂಗ್ : ಹರ್ಮನ್ಪ್ರೀತ್ ಕೌರ್ , ಸ್ಮತಿ ಮಂಧಾನಗೆ ಹಿಂಭಡ್ತಿ
ಟ್ವೆಂಟಿ-20 ಆಲ್ರೌಂಡರ್ ಪಟ್ಟಿ: 3ನೇ ಸ್ಥಾನ ಉಳಿಸಿಕೊಂಡ ದೀಪ್ತಿ

ಹರ್ಮನ್ಪ್ರೀತ್ ಕೌರ್ ಹಾಗೂ ಉಪ ನಾಯಕಿ ಸ್ಮತಿ
ದುಬೈ: ಭಾರತದ ಮಹಿಳಾ ತಂಡದ ನಾಯಕಿ ಹರ್ಮನ್ಪ್ರೀತ್ ಕೌರ್ ಹಾಗೂ ಉಪ ನಾಯಕಿ ಸ್ಮತಿ ಮಂಧಾನ ಮಂಗಳವಾರ ಇಲ್ಲಿ ಬಿಡುಗಡೆಯಾದ ಐಸಿಸಿ ಏಕದಿನ ರ್ಯಾಂಕಿಂಗ್ನಲ್ಲಿ ಕ್ರಮವಾಗಿ 6ನೇ ಹಾಗೂ 7ನೇ ಸ್ಥಾನಕ್ಕೆ ಕುಸಿದಿದ್ದಾರೆ. ಆಕ್ರಮಣಕಾರಿಶೈಲಿಯ ಬ್ಯಾಟರ್ ಹರ್ಮನ್ಪ್ರೀತ್ 716 ಪಾಯಿಂಟ್ಸ್ ಗಳಿಸಿದರೆ, ಮಂಧಾನ 714 ಪಾಯಿಂಟ್ಸ್ ಗಳಿಸಿದ್ದಾರೆ. ಶ್ರೀಲಂಕಾದ ನಾಯಕಿ ಚಾಮರಿ ಅಥಪಟ್ಟು 758 ಅಂಕ ಗಳಿಸಿ ರ್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಅಗ್ರ ರ್ಯಾಂಕ್ ಪಡೆದ ದ್ವೀಪರಾಷ್ಟ್ರದ ಮೊದಲ ಆಟಗಾರ್ತಿಯಾಗಿದ್ದಾರೆ.
ಬೌಲಿಂಗ್ ನಲ್ಲಿ ಎಡಗೈ ಸ್ಪಿನ್ನರ್ ರಾಜೇಶ್ವರಿ ಗಾಯಕ್ವಾಡ್(617 ಪಾಯಿಂಟ್ಸ್)ಹಾಗೂ ಹಿರಿಯ ಆಲ್ರೌಂಡರ್ ದೀಪ್ತಿ ಶರ್ಮಾ ಪಟ್ಟಿಯಲ್ಲಿ ಕ್ರಮವಾಗಿ 8ನೇ ಹಾಗೂ 10ನೇ ಸ್ಥಾನದಲ್ಲಿದ್ದಾರೆ. ಇಂಗ್ಲೆಂಡ್ ನ ಸೋಫಿ ಎಕ್ಸೆಲ್ಸ್ಟೋನ್(751 ಪಾಯಿಂಟ್ಸ್) ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
ಆಲ್ರೌಂಡರ್ ಗಳ ಪಟ್ಟಿಯಲ್ಲಿ ಭಾರತದ ದೀಪ್ತಿ ಶರ್ಮಾ 322 ಪಾಯಿಂಟ್ಸ್ ಗಳಿಸಿ ಆರನೇ ಸ್ಥಾನದಲ್ಲಿದ್ದಾರೆ.
ಟ್ವೆಂಟಿ-20 ರ್ಯಾಂಕಿಂಗ್: ಮೂರನೇ ಸ್ಥಾನದಲ್ಲಿ ಮಂಧಾನ
ಮಹಿಳೆಯರ ಟ್ವೆಂಟಿ-20 ರ್ಯಾಂಕಿಂಗ್ ನಲ್ಲಿ ಸ್ಮತಿ ಮಂಧಾನ 722 ಪಾಯಿಂಟ್ಸ್ ನೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. ಬೌಲಿಂಗ್ ರ್ಯಾಂಕಿಂಗ್ನಲ್ಲಿ ದೀಪ್ತಿ ಶರ್ಮಾ 729 ಪಾಯಿಂಟ್ಸ್ ನೊಂದಿಗೆ ನಾಲ್ಕನೇ ಸ್ಥಾನಕ್ಕೇರಿದ್ದಾರೆ. ಬರೋಬ್ಬರಿ 700 ಅಂಕ ಗಳಿಸಿರುವ ರೇಣುಕಾ ಸಿಂಗ್ 9ನೇ ಸ್ಥಾನದಲ್ಲಿದ್ದಾರೆ.
ದೀಪ್ತಿ 393 ಅಂಕದೊಂದಿಗೆ ಆಲ್ರೌಂಡರ್ ಗಳ ಪಟ್ಟಿಯಲ್ಲಿ ಮೂರನೇ ಸ್ಥಾನ ಉಳಿಸಿಕೊಂಡಿದ್ದಾರೆ.
ಐಸಿಸಿ ಮಹಿಳೆಯರ ಚಾಂಪಿಯನ್ಶಿಪ್ ನಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ 2-1 ಅಂತರದಿಂದ ಗೆಲುವು ಸಾಧಿಸಲು ನೆರವಾಗಿದ್ದ ಚಾಮರಿ ಅಟಪಟ್ಟು ಮಹಿಳೆಯರ ಏಕದಿನ ಆಟಗಾರ್ತಿಯರ ರ್ಯಾಂಕಿಂಗ್ನಲ್ಲಿ ಅಗ್ರಸ್ಥಾನ ಪಡೆದ ಶ್ರೀಲಂಕಾದ ಏಕೈಕ ಆಟಗಾರ್ತಿಯಾಗಿದ್ದಾರೆ. ಎಡಗೈ ಆರಂಭಿಕ ಆಟಗಾರ್ತಿ ಚಾಮರಿ ಅವರು ಸನತ್ ಜಯಸೂರ್ಯ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಜಯಸೂರ್ಯ ಸೆಪ್ಟಂಬರ್ 2002 ಹಾಗೂ ಮೇ 2003ರ ತನಕ 181 ದಿನಗಳ ಕಾಲ ಏಕದಿನ ರ್ಯಾಂಕಿಂಗ್ನಲ್ಲಿ ಅಗ್ರ ರ್ಯಾಂಕ್ ನ ಆಟಗಾರನಾಗಿದ್ದರು.
3 ಪಂದ್ಯಗಳಲ್ಲಿ 2 ಶತಕಗಳನ್ನು ಗಳಿಸಿದ್ದ ಚಾಮರಿ ಅಟಪಟ್ಟು ಆರು ಸ್ಥಾನ ಮೇಲಕ್ಕೇರಿದ್ದಾರೆ. ಹರ್ಮನ್ಪ್ರೀತ್, ಮೆಗ್ ಲ್ಯಾನಿಂಗ್,
ಲೌರಾ ವಾಲ್ವಾರ್ಟ್ ಹಾಗೂ ಆಸ್ಟ್ರೇಲಿಯದ ಬೆತ್ ಮೂನಿ ಅವರನ್ನು ಹಿಂದಿಕ್ಕಿದ್ದಾರೆ. ಮೂನಿ ಮೇ 10ರ ತನಕ ಬ್ಯಾಟಿಂಗ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದರು.