‘ಕ್ಯಾಚ್ ಆಫ್ ದಿ ಸೆಂಚುರಿ!’: ಸಿಕ್ಸರ್ ಆಗಿದ್ದ ಚೆಂಡನ್ನು ಬೈಕ್ ಚಲಿಸುತ್ತಿದ್ದಾಗಲೇ ಒಂದೇ ಕೈಯಲ್ಲಿ ಹಿಡಿದ ಹಿಂಬದಿ ಸವಾರ!
ಮೈದಾನದ ಪಕ್ಕದ ರಸ್ತೆಯಲ್ಲಿನ ಮ್ಯಾಜಿಕಲ್ ಕ್ಯಾಚ್ ಈಗ ವೈರಲ್

Screengrab: X.com
ಸ್ವಾಟ್ (ಪಾಕಿಸ್ತಾನ): ಬ್ಯಾಟರ್ ಒಬ್ಬರು ಮೈದಾನದ ಹೊರಗೆ ಸಿಕ್ಸರ್ ಗೆ ಅಟ್ಟಿದ ಬಾಲನ್ನು ಚಲಿಸುತ್ತಿದ್ದ ಬೈಕ್ ನ ಹಿಂಬದಿ ಸವಾರನೊಬ್ಬ ಒಂದೇ ಕೈಯಲ್ಲಿ ಕ್ಯಾಚ್ ಹಿಡಿದಿರುವ ಘಟನೆ ಪಾಕಿಸ್ತಾನದ ಸ್ವಾಟ್ ಪ್ರಾಂತ್ಯದಲ್ಲಿ ನಡೆದಿದೆ. ಈ ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಸ್ವಾಟ್ ನ ಮಿಂಗೋರಾದ ಗ್ರಾಸಿ ಗ್ರೌಂಡ್ ನಲ್ಲಿ ನಡೆಯುತ್ತಿರುವ ಸ್ವಾಟ್ ಪ್ರೀಮಿಯರ್ ಲೀಗ್ ನ ಎಂಟನೆ ಆವೃತ್ತಿಯಲ್ಲಿ ಸ್ವಾಟ್ ಸ್ಟ್ರೈಕರ್ಸ್ ಹಾಗೂ ಜಿಕೆಆರ್ ಡೈರ್ ನಡುವೆ ಪಂದ್ಯ ನಡೆಯುತ್ತಿತ್ತು. ಈ ವೇಳೆ, ಬೌಲರ್ ಎಸೆದ ಬಾಲನ್ನು ಬ್ಯಾಟರ್ ಒಬ್ಬರು ಮೈದಾನದ ಹೊರಗೆ ಸಿಕ್ಸರ್ ಗೆ ಅಟ್ಟಿದರು. ಆ ಚೆಂಡು ಸ್ಟಾಂಡ್ಸ್ ಮೇಲೆ ಬಿದ್ದಿದ್ದರೆ, ಅಥವಾ ಪ್ರೇಕ್ಷಕರ ನಡುವೆ ಕಣ್ಮರೆಯಾಗಿದ್ದರೆ, ಈ ಘಟನೆ ಅಷ್ಟು ಗಮನ ಸೆಳೆಯುತ್ತಿರಲಿಲ್ಲವೇನೊ. ಆದರೆ, ಮೈದಾನದ ಹೊರಗೆ ಹಾರಿ ಬಂದ ಬಾಲನ್ನು ಚಲಿಸುತ್ತಿದ್ದ ಬೈಕ್ ನ ಹಿಂಬದಿ ಸವಾರನೊಬ್ಬ ಒಂದೇ ಕೈಯಲ್ಲಿ ಕ್ಯಾಚ್ ಹಿಡಿದಿರುವುದು ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಹಲವರು ಈ ಕ್ಯಾಚನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಸಾಕ್ಷಿಯಾದ ಅದ್ಭುತ ಕ್ಯಾಚ್ ಗಳಿಗೆ ಹೋಲಿಕೆ ಮಾಡಿದ್ದಾರೆ. ಬೈಕ್ ನ ಹಿಂಬದಿ ಸವಾರ ಕ್ರಿಕೆಟ್ ನಲ್ಲಿ ಅತ್ಯುತ್ತಮ ಫೀಲ್ಡರ್ ಎಂಬ ಪ್ರಶಸ್ತಿಗೆ ಅರ್ಹನಾಗಿದ್ದಾನೆ ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಕ್ರಿಯಿಸಿರುವ ಓರ್ವ, “ಇದು ಶತಮಾನದ ಕ್ಯಾಚ್” ಎಂದು ಬಣ್ಣಿಸಿದ್ದಾರೆ.






