ರೆಡ್ ಕಾರ್ಡ್ ಪಡೆದಿದ್ದ ಅಮೆರಿಕದ ಸ್ಟಾರ್ ಆಟಗಾರ ಬಾಲೋಗನ್ಗೆ ಆಡುವ ಅವಕಾಶ ; ಫಿಫಾದ ನಿರ್ಧಾರ ಟೀಕಿಸಿದ ಯುಇಎಫ್ಎ

ಫೋಲಾರಿನ್ ಬಾಲೋಗನ್ | Photo Credit : AP, PTI
ಡಲ್ಲಾಸ್, ಜು.6: ಹಿಂದಿನ ಪಂದ್ಯದಲ್ಲಿ ರೆಡ್ ಕಾರ್ಡ್ ಪಡೆದ ಹೊರತಾಗಿಯೂ ಬೆಲ್ಜಿಯಮ್ ವಿರುದ್ಧದ ಫಿಫಾ ವಿಶ್ವಕಪ್ ಟೂರ್ನಿಯ 16ರ ಸುತ್ತಿನ ಪಂದ್ಯದಲ್ಲಿ ಆಡಲು ಅಮೆರಿಕದ ಸ್ಟಾರ್ ಆಟಗಾರ ಫೋಲಾರಿನ್ ಬಾಲೋಗನ್ಗೆ ಅವಕಾಶ ನೀಡಿರುವ ಫಿಫಾದ ನಿರ್ಧಾರವನ್ನು ಯುರೋಪಿಯನ್ ಫುಟ್ಬಾಲ್ ಆಡಳಿತ ಮಂಡಳಿ ಯುಇಎಫ್ಎ ಸೋಮವಾರ ಟೀಕಿಸಿದೆ.
‘ಫಿಫಾದ ನಡೆ ಗ್ರಹಿಸಲಾಗದ ಹಾಗೂ ಅಸಮರ್ಥನೀಯ ನಿರ್ಧಾರ. ವಿಶ್ವ ಫುಟ್ಬಾಲ್ ಆಡಳಿತ ಮಂಡಳಿಯು ಕೆಂಪುಗೆರೆಯನ್ನು ದಾಟಿದೆ. ಕೆಲವೊಮ್ಮೆ ನಿಯಮಗಳು ವ್ಯಾಖ್ಯಾನಕ್ಕೆ ಮುಕ್ತವಾಗಿರುತ್ತವೆ. ಈ ಸಂದರ್ಭದಲ್ಲಿಲ್ಲ. ಆಟದ ಸಮಗ್ರತೆಯು ಅಪಾಯದಲ್ಲಿದೆ. ಸ್ಪರ್ಧೆಯ ವಿಶ್ವಾಸಾರ್ಹತೆಯನ್ನು ದುರ್ಬಲಗೊಳಿಸಲಾಗಿದೆ’ ಎಂದು ಯುಇಎಫ್ಎ ತಿಳಿಸಿದೆ.
ಬಾಲೋಗನ್ ಮೇಲಿನ ಒಂದು ಪಂದ್ಯದ ನಿಷೇಧವನ್ನು ಫಿಫಾ ರವಿವಾರ ಅಚ್ಚರಿಯ ರೀತಿಯಲ್ಲಿ ರದ್ದುಗೊಳಿಸಿತು. ಇದರಿಂದಾಗಿ ಅಮೆರಿಕದ ಆಟಗಾರ ಬೆಲ್ಜಿಯಮ್ ವಿರುದ್ಧದ ಪ್ರಿ-ಕ್ವಾರ್ಟರ್ ಫೈನಲ್ನಲ್ಲಿ ಅವಕಾಶ ಪಡೆದಿದ್ದಾರೆ. ಈ ನಿರ್ಧಾರವನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶ್ಲಾಘಿಸಿದ್ದರು. ಇದು ಬೆಲ್ಜಿಯಮ್ ತಂಡದ ಆಕ್ರೋಶಕ್ಕೆ ಕಾರಣವಾಗಿದೆ.
ಬಾಲೋಗನ್ ಮೇಲಿನ ನಿಷೇಧ ಹಿಂಪಡೆಯಲು ಅಮೆರಿಕದ ಅಧ್ಯಕ್ಷ ಟ್ರಂಪ್ ವೈಯಕ್ತಿಕವಾಗಿ ಮಧ್ಯಪ್ರವೇಶಿಸಿದ್ದಾರೆ ಎಂದು ‘ಅಸೋಸಿಯೇಟೆಡ್ ಪ್ರೆಸ್’ ವರದಿ ಮಾಡಿದೆ.
ಬಾಲೋಗನ್ ಪ್ರಸಕ್ತ ಟೂರ್ನಿಯಲ್ಲಿ ಅಮೆರಿಕ ತಂಡದ ಪರವಾಗಿ ಮೂರು ಗೋಲುಗಳನ್ನು ಗಳಿಸಿದ್ದಾರೆ. ಬೋಸ್ನಿಯಾ ವಿರುದ್ಧ 2-0 ಅಂತರದಿಂದ ಗೆದ್ದ 32ರ ಸುತ್ತಿನ ಪಂದ್ಯದ ವೇಳೆ ರೆಡ್ ಕಾರ್ಡ್ ಪಡೆದಿದ್ದರು.






