ಪಾಕಿಸ್ತಾನ ವಿರುದ್ಧ ಫೆ.15ರ ಪಂದ್ಯಕ್ಕಾಗಿ ನಮ್ಮ ವಿಮಾನದ ಟಿಕೆಟ್ ಬುಕ್ ಆಗಿದೆ: ಸೂರ್ಯಕುಮಾರ್

File Photo | AP
ಹೊಸದಿಲ್ಲಿ, ಫೆ.5: ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ಕ್ರಿಕೆಟ್ ತಂಡಗಳ ನಡುವಿನ ವಿಶ್ವಕಪ್ ಪಂದ್ಯದ ಕುರಿತು ಆವರಿಸಿರುವ ಅನಿಶ್ಚಿತತೆ ಕುರಿತು ಭಾರತದ ಟಿ-20 ತಂಡದ ನಾಯಕ ಸೂರ್ಯಕುಮಾರ್ ಪ್ರತಿಕ್ರಿಯಿಸಿದ್ದಾರೆ.
ಭಾರತ ತಂಡವು ಯೋಜನೆಯಂತೆ ಮುಂದುವರಿಯಲಿದ್ದು, ಪಾಕಿಸ್ತಾನ ತಂಡದ ವಿರುದ್ಧದ ಫೆ.15ರಂದು ನಿಗದಿಯಾಗಿರುವ ಟಿ-20 ವಿಶ್ವಕಪ್ ಟೂರ್ನಿಯ ಗ್ರೂಪ್ ಹಂತದ ಪಂದ್ಯಕ್ಕಾಗಿ ಕೊಲಂಬೊಕ್ಕೆ ತೆರಳಲು ನಮ್ಮ ತಂಡದ ವಿಮಾನದ ಟಿಕೆಟ್ ಅನ್ನು ಈಗಾಗಲೇ ಕಾಯ್ದಿರಿಸಲಾಗಿದೆ ಎಂದು ಸೂರ್ಯಕುಮಾರ ಯಾದವ್ ಗುರುವಾರ ಹೇಳಿದ್ದಾರೆ.
‘‘ನಮ್ಮಲ್ಲಿ ಯಾವುದೇ ಗೊಂದಲವಿಲ್ಲ. ಆಡಬೇಡಿ ಎಂದು ನಮಗೆ ಯಾರೂ ಹೇಳಿಲ್ಲ. ಪಾಕಿಸ್ತಾನ ತಂಡ ಆಡುವುದಿಲ್ಲ ಎಂದು ಹೇಳಿದೆ. ಐಸಿಸಿ ವೇಳಾಪಟ್ಟಿಯನ್ನು ಪ್ರಕಟಿಸಿದೆ. ನಮ್ಮ ವಿಮಾನದ ಟಿಕೆಟ್ ಬುಕ್ ಆಗಿದೆ. ನಾವು ಕೊಲಂಬೊಕ್ಕೆ ತೆರಳಲಿದ್ದೇವೆ. ಏನಾಗಲಿದೆ ಎಂದು ನೋಡಲಿದ್ದೇವೆ’’ಎಂದು ಪಂದ್ಯಾವಳಿಗಿಂತ ಮೊದಲು ಗುರುವಾರ ನಡೆದ ನಾಯಕರುಗಳ ಪತ್ರಿಕಾಗೋಷ್ಠಿಯಲ್ಲಿ ಸೂರ್ಯಕುಮಾರ್ ಹೇಳಿದ್ದಾರೆ.
ವಿಶ್ವಕಪ್ ಪಂದ್ಯವನ್ನು ಬಹಿಷ್ಕರಿಸುವ ಪಾಕಿಸ್ತಾನದ ನಿರ್ಧಾರ ಕ್ರಿಕೆಟ್ಗೆ ಒಳಿತಾಗಲಿದೆಯೇ ಎಂದು ಕೇಳಿದಾಗ, ‘‘ಆ ನಿರ್ಧಾರ ನಮ್ಮ ಹಿಡಿತದಲ್ಲಿಲ್ಲ. ಫೆ.15ರಂದು ಪಂದ್ಯವನ್ನು ಆಡುವಂತೆ ನಮಗೆ ತಿಳಿಸಲಾಗಿದೆ. ನಾವು ಏಶ್ಯ ಕಪ್ನಲ್ಲಿ ತಟಸ್ಥ ತಾಣದಲ್ಲಿ ಮೂರು ಬಾರಿ ಪಾಕಿಸ್ತಾನದ ವಿರುದ್ಧ ಆಡಿದ್ದೇವೆ. ಕೊಲಂಬೊದಲ್ಲಿ ಮತ್ತೊಮ್ಮೆ ಅವಕಾಶ ಲಭಿಸಿದರೆ, ನಾವು ಆಡಲಿದ್ದೇವೆ’’ ಎಂದರು.
ಫೆ.15ರಂದು ಭಾರತ ತಂಡದ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ನಮ್ಮ ಪುರುಷರ ತಂಡವು ಆಡುವುದಿಲ್ಲ ಎಂದು ಕಳೆದ ವಾರ ಪಾಕಿಸ್ತಾನದ ಸರಕಾರ ಘೋಷಿಸಿತ್ತು. ಆದರೆ ಈ ಬಗ್ಗೆ ಅಧಿಕೃತ ಕಾರಣವನ್ನು ನೀಡಿಲ್ಲ.
ಟಿ-20 ವಿಶ್ವಕಪ್ ಟೂರ್ನಿಯಲ್ಲಿ ತನ್ನ ಪಂದ್ಯಗಳನ್ನು ಭಾರತ ನೆಲದಲ್ಲಿ ಆಡಲು ನಿರಾಕರಿಸಿದ ಬಾಂಗ್ಲಾದೇಶ ತಂಡವನ್ನು ಪಂದ್ಯಾವಳಿಯಿಂದ ಹೊರದಬ್ಬಲ್ಪಟ್ಟ ನಂತರ ಪ್ರತಿಭಟನಾರ್ಥವಾಗಿ ಪಾಕಿಸ್ತಾನ ಸರಕಾರವು ಕಳೆದ ವಾರ ಈ ಹೆಜ್ಜೆ ಇಟ್ಟಿದೆ ಎನ್ನಲಾಗಿದೆ.
‘ಆಯ್ದ ಭಾಗವಹಿಸುವಿಕೆಯು ಸ್ಪರ್ಧೆಗಳ ಉತ್ಸಾಹ ಹಾಗೂ ಪವಿತ್ರತೆಯನ್ನು ಹಾಳು ಮಾಡುತ್ತದೆ’ಎಂದು ಪಾಕಿಸ್ತಾನದ ನಿರ್ಧಾರದ ಕುರಿತು ಅಂತರ್ರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ)ಪ್ರತಿಕ್ರಿಯಿಸಿತ್ತು.
ಪಾಕಿಸ್ತಾನ ತಂಡ ಭಾರತ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸಿದರೆ ಎರಡು ಅಂಕ ಕಳೆದುಕೊಳ್ಳಲಿದೆ. ಪಿಸಿಬಿ ದಂಡ ಇಲ್ಲವೇ ನಿಷೇಧವನ್ನು ಎದುರಿಸಲಿದೆಯೇ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ.






