ನಮ್ಮ ತಾಯಿ ಚೆನ್ನಾಗಿದ್ದಾರೆ: ಸುಳ್ಳು ವದಂತಿಗೆ ತೆರೆ ಎಳೆದ ವಿರಾಟ್ ಕೊಹ್ಲಿ ಸಹೋದರ ವಿಕಾಸ್

ವಿರಾಟ್ ಕೊಹ್ಲಿ , ವಿಕಾಸ್ | Photo: timesofindia.indiatimes.com
ಹೊಸದಿಲ್ಲಿ: ತಮ್ಮ ತಾಯಿ ಸರೋಜ್ ಕೊಹ್ಲಿ ಆರೋಗ್ಯದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸುಳ್ಳು ವದಂತಿಯ ಕುರಿತು ಭಾರತದ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಸಹೋದರ ವಿಕಾಸ್ ಸ್ಪಷ್ಟನೆ ನೀಡಿದ್ದಾರೆ.
ನಮ್ಮ ತಾಯಿಯ ಆರೋಗ್ಯ ಚೆನ್ನಾಗಿದೆ ಎಂದು ತನ್ನ ಅಧಿಕೃತ ಇನ್ಸ್ಟಾಗ್ರಾಮ್ ನಲ್ಲಿ ಸ್ಪಷ್ಟಪಡಿಸಿರುವ ವಿಕಾಸ್ ಕೊಹ್ಲಿ, ಸುಳ್ಳು ಸುದ್ದಿಗಳನ್ನು ಹರಡುವುದರಿಂದ ದೂರವಿರಿ ಎಂದು ಎಲ್ಲರಲ್ಲೂ ವಿನಂತಿಸಿದ್ದಾರೆ.
ಎಲ್ಲರಿಗೂ ನಮಸ್ಕಾರ, ನಮ್ಮ ಅಮ್ಮನ ಆರೋಗ್ಯದ ಕುರಿತು ಸುಳ್ಳು ಸುದ್ದಿ ಹರಿದಾಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ನಮ್ಮ ತಾಯಿ ಸಂಪೂರ್ಣವಾಗಿ ಫಿಟ್ ಹಾಗೂ ಕ್ಷೇಮವಾಗಿದ್ದಾರೆ ಎಂದು ಸ್ಪಷ್ಟಪಡಿಸುತ್ತೇನೆ. ಸರಿಯಾದ ಮಾಹಿತಿ ಇಲ್ಲದೆ ಇಂತಹ ಸುದ್ದಿಗಳನ್ನು ಹರಡದಂತೆ ಎಲ್ಲರಿಗೂ ಹಾಗೂ ಮಾಧ್ಯಮದವರಿಗೂ ವಿನಂತಿಸುತ್ತೇನೆ ಎಂದು ಇನ್ಸ್ಟಾಗ್ರಾಮ್ ನಲ್ಲಿ ವಿಕಾಸ್ ಬರೆದುಕೊಂಡಿದ್ದಾರೆ.
ತನ್ನ ತಾಯಿಯ ಅನಾರೋಗ್ಯದ ಕಾರಣಕ್ಕೆ ಭಾರತದ ಮಾಜಿ ನಾಯಕ ಕೊಹ್ಲಿ ಇಂಗ್ಲೆಂಡ್ ವಿರುದ್ಧ ಈಗ ನಡೆಯುತ್ತಿರುವ 5 ಪಂದ್ಯಗಳ ಟೆಸ್ಟ್ ಸರಣಿಯ ಮೊದಲೆರಡು ಪಂದ್ಯಗಳಿಂದ ವಿಶ್ರಾಂತಿ ಪಡೆದಿದ್ದಾರೆ ಎಂಬ ವದಂತಿಗಳು ಇತ್ತೀಚೆಗೆ ಹರಿದಾಡಿದ್ದವು.
ವೈಯಕ್ತಿ ಕಾರಣಗಳಿಗಾಗಿ ಕೊಹ್ಲಿ ಇಂಗ್ಲೆಂಡ್ ವಿರುದ್ಧದ ಮೊದಲೆರಡು ಟೆಸ್ಟ್ ಪಂದ್ಯಗಳಿಂದ ಹಿಂದೆ ಸರಿದಿದ್ದಾರೆ ಎಂದು ಬಿಸಿಸಿಐ ಅಧಿಕೃತವಾಗಿ ಪ್ರಕಟಿಸಿತ್ತು.
ಇಂತಹ ಸವಾಲಿನ ಸಮಯದಲ್ಲಿ ಕೊಹ್ಲಿ ಅವರ ವೈಯಕ್ತಿಕ ವಿಚಾರಕ್ಕೆ ಗೌರವ ನೀಡಿ ಎಂದು ಮಾಧ್ಯಮಗಳು ಹಾಗೂ ಕ್ರಿಕೆಟ್ ಅಭಿಮಾನಿಗಳಿಗೆ ವಿನಂತಿಸುವೆ ಎಂದು ಬಿಸಿಸಿಐ ತಿಳಿಸಿತ್ತು.







