India vs New Zealand, 2nd Test | ಆಕಾಶ್ ದೀಪ್ ವೇಗದ ದಾಳಿಗೆ ನ್ಯೂಝಿಲೆಂಡ್ ತತ್ತರ; ಐದು ವಿಕೆಟ್ ಕಬಳಿಸಿದ ಭಾರತದ ವೇಗಿ
► ಬ್ಲಂಡೆಲ್ ಹೋರಾಟದ ನಡುವೆಯೂ 356ಕ್ಕೆ ಕುಸಿದ ನ್ಯೂಝಿಲೆಂಡ್ ► 116 ರನ್ಗಳಿಗೆ ಆರು ವಿಕೆಟ್ ಕಳೆದುಕೊಂಡ ಭಾರತ; 240 ರನ್ಗಳ ಹಿನ್ನಡೆ

ಆಕಾಶ್ ದೀಪ್ (Photo: PTI)
ಕ್ರೈಸ್ಟ್ ಚರ್ಚ್: ಭಾರತದ ವೇಗಿ ಆಕಾಶ್ ದೀಪ್ ಅವರ ಪರಿಣಾಮಕಾರಿ ಬೌಲಿಂಗ್ ದಾಳಿಗೆ ನ್ಯೂಝಿಲೆಂಡ್ ತಂಡ ತತ್ತರಿಸಿದೆ. ಎರಡನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ನ್ಯೂಝಿಲೆಂಡ್ 356 ರನ್ಗಳಿಗೆ ಆಲೌಟ್ ಆಗಿದ್ದು, ಆಕಾಶ್ ದೀಪ್ ಐದು ವಿಕೆಟ್ಗಳ ಗೊಂಚಲು ಪಡೆದು ಭಾರತದ ಪರ ಮಿಂಚಿದರು.
ಎರಡನೇ ದಿನದ ಆಟದಲ್ಲಿ ನಿಖರ ಬೌಲಿಂಗ್ ಮೂಲಕ ನ್ಯೂಝಿಲೆಂಡ್ ಬ್ಯಾಟರ್ ಗಳ ಮೇಲೆ ಒತ್ತಡ ಹೇರಿದ ಆಕಾಶ್ ದೀಪ್, 31.3 ಓವರ್ಗಳಲ್ಲಿ 99 ರನ್ ನೀಡಿ ಐದು ವಿಕೆಟ್ ಕಬಳಿಸಿದರು. ಎಂಟು ಮೇಡನ್ ಓವರ್ ಗಳನ್ನು ಎಸೆದ ಅವರು ಎದುರಾಳಿ ತಂಡದ ಬ್ಯಾಟಿಂಗ್ ಕ್ರಮಾಂಕಕ್ಕೆ ದೊಡ್ಡ ಹೊಡೆತ ನೀಡಿದರು.
ಅಂಶುಲ್ ಕಂಬೋಜ್ ಮತ್ತು ಗುರ್ನೂರ್ ಬ್ರಾರ್ ತಲಾ ಎರಡು ವಿಕೆಟ್ ಪಡೆದು ಉತ್ತಮ ಸಾಥ್ ನೀಡಿದರು. ಕಂಬೋಜ್ 79 ರನ್ ನೀಡಿದರೆ, ಬ್ರಾರ್ 78 ರನ್ ಬಿಟ್ಟುಕೊಟ್ಟರು. ಜಸ್ಪ್ರೀತ್ ಬುಮ್ರಾ 26 ಓವರ್ಗಳಲ್ಲಿ 49 ರನ್ ನೀಡಿದರು.
ನ್ಯೂಝಿಲೆಂಡ್ ಪರ ಟಾಮ್ ಬ್ಲಂಡೆಲ್ 211 ಎಸೆತಗಳಲ್ಲಿ 10 ಬೌಂಡರಿಗಳ ಸಹಿತ 89 ರನ್ ಗಳಿಸಿ ಭಾರತದ ಬೌಲರ್ಗಳಿಗೆ ಪ್ರಬಲ ಪ್ರತಿರೋಧ ಒಡ್ಡಿದರು. ನಾಯಕ ಟಾಮ್ ಲ್ಯಾಥಮ್ 59 ರನ್ ಗಳಿಸಿದರು. ಗ್ಲೆನ್ ಫಿಲಿಪ್ಸ್ 36, ಡೆವೊನ್ ಕಾನ್ವೇ ಮತ್ತು ಡ್ಯಾರಿಲ್ ಮಿಚೆಲ್ ತಲಾ 31 ರನ್ ಗಳಿಸಿದರು. ನಾಥನ್ ಸ್ಮಿತ್ 26 ರನ್ ಗಳಿಸಿದರು.
ಒಂದು ಹಂತದಲ್ಲಿ 110 ರನ್ ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡಿದ್ದ ನ್ಯೂಝಿಲೆಂಡ್ ತಂಡಕ್ಕೆ ಬ್ಲಂಡೆಲ್ ಆಸರೆಯಾದರು. ಅವರ ಹೋರಾಟದಿಂದ ತಂಡದ ಮೊತ್ತ 356ಕ್ಕೆ ತಲುಪಿತು. ಆದರೆ, ಭಾರತೀಯ ಬೌಲರ್ ಗಳ ಸಂಘಟಿತ ದಾಳಿಗೆ ಅಂತಿಮವಾಗಿ ನ್ಯೂಝಿಲೆಂಡ್ ಇನಿಂಗ್ಸ್ ಅಂತ್ಯಗೊಂಡಿತು.
ಭಾರತದ ಬ್ಯಾಟಿಂಗ್ ಸಂಕಷ್ಟ:
ನ್ಯೂಝಿಲೆಂಡ್ ನ 356 ರನ್ಗಳಿಗೆ ಉತ್ತರವಾಗಿ ಮೊದಲ ಇನಿಂಗ್ಸ್ ಆರಂಭಿಸಿದ ಭಾರತ ಎರಡನೇ ದಿನದ ಅಂತ್ಯಕ್ಕೆ 46 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 116 ರನ್ ಗಳಿಸಿದೆ. ಇದರೊಂದಿಗೆ 240 ರನ್ಗಳ ಹಿನ್ನಡೆಯಲ್ಲಿದೆ.
ಯಶಸ್ವಿ ಜೈಸ್ವಾಲ್ ಶೂನ್ಯಕ್ಕೆ ಔಟಾದರೆ, ಕೆ.ಎಲ್. ರಾಹುಲ್ 25, ದೇವದತ್ತ ಪಡಿಕ್ಕಲ್ 21, ಶುಭಮನ್ ಗಿಲ್ 17 ಮತ್ತು ರಿಷಭ್ ಪಂತ್ 23 ರನ್ ಗಳಿಸಿದರು. ವಾಷಿಂಗ್ಟನ್ ಸುಂದರ್ 10 ರನ್ ಗಳಿಸಿ ದಿನದ ಕೊನೆಯ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು. ಧ್ರುವ್ ಜುರೆಲ್ 7 ರನ್ ಗಳಿಸಿ ಅಜೇಯರಾಗುಳಿದಿದ್ದಾರೆ.
ನ್ಯೂಝಿಲೆಂಡ್ ಪರ ಕೈಲ್ ಜೇಮಿಸನ್ ಮತ್ತು ಜೇಕಬ್ ಡಫಿ ತಲಾ ಎರಡು ವಿಕೆಟ್ ಪಡೆದರೆ, ಮ್ಯಾಟ್ ಹೆನ್ರಿ ಮತ್ತು ನಾಥನ್ ಸ್ಮಿತ್ ತಲಾ ಒಂದು ವಿಕೆಟ್ ಕಬಳಿಸಿದರು.






