ಭಾರತ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸಿದ ಪಾಕಿಸ್ತಾನ: ಬಿಸಿಸಿಐ ಪ್ರತಿಕ್ರಿಯಿಸಿದ್ದು ಹೀಗೆ...

Photo Credit : PTI , BCCI
ಹೊಸದಿಲ್ಲಿ: ಟಿ-20 ಕ್ರಿಕೆಟ್ ವಿಶ್ವಕಪ್ನಲ್ಲಿ ಫೆಬ್ರವರಿ 15ರಂದು ನಿಗದಿಯಾಗಿರುವ ಭಾರತ ವಿರುದ್ಧದ ಗ್ರೂಪ್ ಹಂತದ ಪಂದ್ಯವನ್ನು ಬಹಿಷ್ಕರಿಸಲು ಪಾಕಿಸ್ತಾನ ತಂಡ ನಿರ್ಧರಿಸಿರುವುದಕ್ಕೆ ಪ್ರತಿಕ್ರಿಯಿಸಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ), ಕ್ರೀಡಾ ಮನೋಭಾವದ ಕುರಿತು ಅಂತರ್ರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ಐಸಿಸಿ) ನಿಲುವಿಗೆ ನಮ್ಮ ಸಂಪೂರ್ಣ ಸಮ್ಮತಿ ಇದೆ. ಐಸಿಸಿಯೊಂದಿಗೆ ಔಪಚಾರಿಕವಾಗಿ ಚರ್ಚೆ ನಡೆಸುವ ತನಕ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದೆ.
‘‘ಐಸಿಸಿ ಒಂದು ದೊಡ್ಡ ಹೇಳಿಕೆಯೊಂದನ್ನು ನೀಡಿದೆ. ಅದರಲ್ಲಿ ಕ್ರೀಡಾ ಮನೋಭಾವದ ಬಗ್ಗೆ ಮಾತನಾಡಿದೆ. ಐಸಿಸಿಯ ನಿಲುವನ್ನು ನಾವು ಸಂಪೂರ್ಣವಾಗಿ ಒಪ್ಪುತ್ತೇವೆ. ಐಸಿಸಿ ಜೊತೆ ಮಾತನಾಡುವ ತನಕ ಯಾವುದೇ ಪ್ರತಿಕ್ರಿಯೆಗಳನ್ನು ನೀಡುವುದಿಲ್ಲ’’ಎಂದು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಹೇಳಿದ್ದಾರೆ.
ಆಯ್ದ ಪಂದ್ಯಗಳಲ್ಲಿ ಭಾಗವಹಿಸುವುದು ಜಾಗತಿಕ ಕ್ರೀಡಾಕೂಟದ ಮೂಲಭೂತ ಪ್ರಮೇಯಕ್ಕೆ ವಿರುದ್ಧವಾಗಿದೆ. ಪಾಕಿಸ್ತಾನದ ಸರಕಾರದ ಹೇಳಿಕೆಯನ್ನು ಗಮನಿಸಿದ್ದೇವೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿಯಿಂದ(ಪಿಸಿಬಿ)ಅಧಿಕೃತ ಸಂವಹನಕ್ಕಾಗಿ ಕಾಯುತ್ತಿದ್ದೇವೆ. ಪ್ರಕಟಿತ ವೇಳಾಪಟ್ಟಿಯ ಪ್ರಕಾರವೇ ಎಲ್ಲ ಅರ್ಹ ತಂಡಗಳು ಸ್ಪರ್ಧಿಸುವ ನಿರೀಕ್ಷೆಯಿದೆ ಎಂದು ಐಸಿಸಿ ಪ್ರಕಟನೆಯೊಂದರಲ್ಲಿ ತಿಳಿಸಿದೆ.





