ಎರಡನೇ ಏಕದಿನ ಪಂದ್ಯ | ರನೌಟ್ ತೀರ್ಪಿಗೆ ಅತೃಪ್ತಿ: ಪಾಕ್ನ ಸಲ್ಮಾನ್ಗೆ ಛೀಮಾರಿ, ಡೀಮೆರಿಟ್ ಅಂಕ

Photo Credit : @BCBtigers
ಢಾಕಾ, ಮಾ. 14: ಢಾಕಾದ ಶೇರೆ ಬಾಂಗ್ಲಾ ನ್ಯಾಶನಲ್ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಬಾಂಗ್ಲಾದೇಶ ಮತ್ತು ಪಾಕಿಸ್ತಾನ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಪಾಕಿಸ್ತಾನದ ಬ್ಯಾಟರ್ ಸಲ್ಮಾನ್ ಅಲಿ ಅಘ ರನೌಟ್ ಆದ ವಿಧಾನವು ವಿವಾದಕ್ಕೆ ಕಾರಣವಾಗಿದೆ. ಅದೇ ವೇಳೆ, ರನೌಟ್ ತೀರ್ಪಿಗೆ ಅತೃಪ್ತಿ ವ್ಯಕ್ತಪಡಿಸಿರುವುದಕ್ಕಾಗಿ ಸಲ್ಮಾನ್ ಅಲಿಗೆ ಪಂದ್ಯ ರೆಫರಿ ನೀಯಮುರ್ ರಶೀದ್ ಛೀಮಾರಿ ಹಾಕಿದ್ದಾರೆ ಮತ್ತು ಒಂದು ಡೀಮೆರಿಟ್ ಅಂಕವನ್ನು ನೀಡಿದ್ದಾರೆ.
ಘಟನೆಯು 39ನೇ ಓವರ್ನಲ್ಲಿ ನಡೆದಿದೆ. ಬಾಂಗ್ಲಾದೇಶ ನಾಯಕ ಮೆಹಿದಿ ಹಸನ್ ಮೀರಝ್ ಎಸೆದ ಆ ಓವರ್ನ ನಾಲ್ಕನೇ ಎಸೆತವನ್ನು ಪಾಕಿಸ್ತಾನಿ ಬ್ಯಾಟರ್ ರಿಝ್ವಾನ್ ಸಾವಧಾನವಾಗಿ ದೂರಕ್ಕೆ ತಳ್ಳಿದರು. ಚೆಂಡು ನಾನ್-ಸ್ಟ್ರೈಕರ್ ತುದಿಯಲ್ಲಿದ್ದ ಸಲ್ಮಾನ್ರತ್ತ ಹೊರಳಿಕೊಂಡು ಹೋಯಿತು. 64 ರನ್ ಗಳಿಸಿದ್ದ ಸಲ್ಮಾನ್ ಹಿಂದಕ್ಕೆ ಓಡಿದ್ದರು ಹಾಗೂ ಕ್ರೀಸ್ನಿಂದ ಹೊರಗಿದ್ದರು. ಚೆಂಡು ಅವರ ಪ್ಯಾಡ್ಗೆ ತಾಗಿತು. ಅವರು ಚೆಂಡನ್ನು ಎತ್ತಿಕೊಳ್ಳಲು ಬಗ್ಗಿದರು. ಆದರೆ ಅದಕ್ಕಿಂತ ಮುನ್ನವೇ, ಮೀರಝ್ ಚೆಂಡನ್ನು ಎತ್ತಿಕೊಂಡು ಸ್ಟಂಪ್ಸ್ ಉರುಳಿಸಿ ರನೌಟ್ಗೆ ಮನವಿ ಮಾಡಿದರು. ಮೈದಾನದ ಅಂಪೈರ್ ನಿರ್ಧಾರವನ್ನು ತೃತೀಯ ಅಂಪೈರ್ಗೆ ಒಪ್ಪಿಸಿದರು. ತೃತೀಯ ಅಂಪೈರ್, ರನೌಟ್ ಮನವಿಯನ್ನು ಪುರಸ್ಕರಿಸಿದರು.
ಈ ನಿರ್ಧಾರದಿಂದ ಸಲ್ಮಾನ್ ನಿರಾಶರಾಗಿ ತನ್ನ ಅತೃಪ್ತಿಯನ್ನು ವ್ಯಕ್ತಪಡಿಸಿದರು. ಅವರು ತನ್ನ ಗ್ಲವ್ಸ್ನ್ನು ಎತ್ತಿ ಬಿಸಾಡಿದರು. ಇದಕ್ಕಾಗಿ ಪಂದ್ಯ ರೆಫರಿ ಸಲ್ಮಾನ್ಗೆ ಛೀಮಾರಿ ಹಾಕಿದ್ದಾರೆ ಮತ್ತು ಒಂದು ಡೀಮೆರಿಟ್ ಅಂಕ ನೀಡಿದ್ದಾರೆ.





