ಅಂಡರ್-19 ಏಶ್ಯ ಕಪ್ | ಭಾರತದ ವಿರುದ್ಧ ಪಾಕಿಸ್ತಾನಕ್ಕೆ 3 ವಿಕೆಟ್ ಜಯ

ಅಲ್ ಅಮೆರಾತ್ (ಒಮಾನ್): ಅಂಡರ್-19 ಪುರುಷರ ಏಕದಿನ ಏಶ್ಯ ಕಪ್ ‘ಎ’ ಗುಂಪಿನ ಪಂದ್ಯವೊಂದರಲ್ಲಿ ರವಿವಾರ ಹಂಝ ಝಹೂರ್ರ ಅಜೇಯ ಶತಕದ ಬಲದಿಂದ ಪಾಕಿಸ್ತಾನ ತಂಡವು ಭಾರತವನ್ನು ಮೂರು ವಿಕೆಟ್ಗಳಿಂದ ಸೋಲಿಸಿದೆ.
ಒಮಾನ್ನ ಅಲ್ ಅಮೆರಾತ್ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ, ಪಾಕಿಸ್ತಾನದ ಗೆಲುವಿಗೆ ಕೊನೆಯ 12 ಎಸೆತಗಳಲ್ಲಿ ನಾಲ್ಕು ರನ್‌ಗಳ ಅಗತ್ಯವಿತ್ತು ಹಾಗೂ ಝಹೂರ್ ಶತಕಕ್ಕೂ ಅಷ್ಟೇ ರನ್‌ಗಳು ಬೇಕಾಗಿದ್ದವು. 7ನೇ ಕ್ರಮಾಂಕದ ಬ್ಯಾಟರ್ ಕವರ್ಸ್ ದಿಕ್ಕಿನಲ್ಲಿ ಬೌಂಡರಿ ಬಾರಿಸಿ, ಎರಡನ್ನೂ ಪೂರೈಸಿದರು. ಬಳಿಕ, ಅವರು ಮೈದಾನದ ಸುತ್ತಲೂ ಓಡಿ ಸಂಭ್ರಮಾಚರಿಸಿದರು. ತಂಡದ ಇತರ ಆಟಗಾರರೂ ಸಂಭ್ರಮದಲ್ಲಿ ಅವರ ಜೊತೆಗೂಡಿದರು.
ಗೆಲುವಿಗೆ 209 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಪಾಕಿಸ್ತಾನ, ಒಂದು ಹಂತದಲ್ಲಿ 15 ಓವರ್‌ಗಳೊಳಗೆ ಕೇವಲ 61 ರನ್ಗಳಿಸುವಷ್ಟರಲ್ಲಿ ಐದು ವಿಕೆಟ್ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆಗ ಮೈದಾನಕ್ಕೆ ಇಳಿದ ಝಹೂರ್ ತಂಡವನ್ನು ವಿಜಯದ ದಾರಿಯಲ್ಲಿ ಮುನ್ನಡೆಸಿದರು. ಅವರು ಹಸ್ನೈನ್ ಅಬ್ಬಾಸ್ ದಾರ್ ಅವರೊಂದಿಗೆ 140 ಎಸೆತಗಳಲ್ಲಿ 107 ರನ್‌ಗಳ ಜತೆಯಾಟವಾಡಿ ತಂಡದ ಇನ್ನಿಂಗ್ಸ್‌ಗೆ ಚೇತರಿಕೆ ನೀಡಿದರು.
ಇದಕ್ಕೂ ಮುನ್ನ, ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ ಭಾರತಕ್ಕೆ 46.3 ಓವರ್‌ಗಳಲ್ಲಿ 208 ರನ್ಗಳನ್ನಷ್ಟೇ ಗಳಿಸಲು ಸಾಧ್ಯವಾಯಿತು.
ಭಾರತದ ಪರ ಆಕ್ರಮಣಕಾರಿ ಬ್ಯಾಟಿಂಗ್ ನಡೆಸಿದ ಅರ್ಜುನ್ ರಜಪೂತ್ ಶತಕ ಬಾರಿಸಿದರು. ಅವರು 11 ಬೌಂಡರಿ ಮತ್ತು 5 ಸಿಕ್ಸರ್ಗಳನ್ನು ಒಳಗೊಂಡ 107 ರನ್‌ಗಳನ್ನು 85 ಎಸೆತಗಳಲ್ಲಿ ಪೇರಿಸಿದರು. ಆ ಮೂಲಕ ಭಾರತ 200 ರನ್‌ಗಳ ಗಡಿ ದಾಟಲು ಕಾರಣವಾದರು.
9ನೇ ಕ್ರಮಾಂಕದಲ್ಲಿ ಕಾವ್ಯ ಪಟೇಲ್ 23 ರನ್ ಗಳಿಸಿದರು. ಅಂತಿಮವಾಗಿ ಭಾರತ 47ನೇ ಓವರ್‌ನಲ್ಲಿ 208 ರನ್‌ಗಳಿಗೆ ಆಲೌಟ್ ಆಯಿತು. ಭಾರತೀಯ ಬೌಲರ್ಗಳು ಪೈಪೋಟಿ ನೀಡಿದರೂ, ಆ ಮೊತ್ತ ಗೆಲುವಿಗೆ ಸಾಕಾಗಲಿಲ್ಲ.
ಪ್ರಸ್ತುತ ಪಾಕಿಸ್ತಾನ ತಂಡವು ಎರಡು ಪಂದ್ಯಗಳಿಂದ ನಾಲ್ಕು ಅಂಕಗಳನ್ನು ಗಳಿಸಿ ‘ಎ’ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದ್ದರೆ, ಭಾರತ ಒಂದು ಜಯ ಮತ್ತು ಒಂದು ಸೋಲಿನೊಂದಿಗೆ ಎರಡನೇ ಸ್ಥಾನದಲ್ಲಿದೆ.






