ದಕ್ಷಿಣ ಆಫ್ರಿಕಾದ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿದ ಪಾಕಿಸ್ತಾನ : ಮೊದಲ ಟೆಸ್ಟ್ನಲ್ಲಿ 93 ರನ್ ಗಳ ಜಯ

Photo Credit : X
ಲಾಹೋರ್,ಅ.15: ವಿಶ್ವ ಟೆಸ್ಟ್ ಕ್ರಿಕೆಟ್ ಚಾಂಪಿಯನ್ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಬುಧವಾರ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನ ತಂಡವು 93 ರನ್ಗಳ ಅಂತರದಿಂದ ರೋಚಕ ಜಯ ದಾಖಲಿಸಿದೆ. ಈ ಮೂಲಕ ಹರಿಣ ಪಡೆಯ ಸತತ 10 ಪಂದ್ಯಗಳ ಗೆಲುವಿನ ಓಟಕ್ಕೆ ಕಡಿವಾಣ ಹಾಕಿದೆ.
ಈ ಗೆಲುವಿನೊಂದಿಗೆ ಪಾಕಿಸ್ತಾನ ತಂಡ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್(ಡಬ್ಲ್ಯುಟಿಸಿ)ಪಾಯಿಂಟ್ಸ್ ಟೇಬಲ್ನಲ್ಲಿ ಭಾರತ ತಂಡವನ್ನು ಹಿಂದಿಕ್ಕಿ ಆಸ್ಟ್ರೇಲಿಯದ ನಂತರ 2ನೇ ಸ್ಥಾನಕ್ಕೆ ಜಿಗಿದಿದೆ. ಮಾತ್ರವಲ್ಲ 2 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಪಡೆದಿದೆ.
ಇದಕ್ಕೂ ಮೊದಲು ಎಡಗೈ ಸ್ಪಿನ್ನರ್ ನೊಮಾನ್ ಅಲಿ(4-79), ಶಾಹೀನ್ ಶಾ ಅಫ್ರಿದಿ(4-33) ಹಾಗೂ ಸಾಜಿದ್ ಖಾನ್(2-38) ಅವರ ಅತ್ಯುತ್ತಮ ಬೌಲಿಂಗ್ ಪ್ರದರ್ಶನದ ನೆರವಿನಿಂದ 4ನೇ ದಿನದಾಟವಾದ ಬುಧವಾರ ಪಾಕಿಸ್ತಾನ ತಂಡವು ದಕ್ಷಿಣ ಆಫ್ರಿಕಾ ತಂಡವನ್ನು 2ನೇ ಇನಿಂಗ್ಸ್ನಲ್ಲಿ 183 ರನ್ಗೆ ನಿಯಂತ್ರಿಸಿ ಭರ್ಜರಿ ಜಯ ಗಳಿಸಿದೆ.
ನೊಮಾನ್ ಅಲಿ ಸ್ವದೇಶದಲ್ಲಿ ತನ್ನ ಶ್ರೇಷ್ಠ ಪ್ರದರ್ಶನ ಮುಂದುವರಿಸಿದ್ದು, ಇಂಗ್ಲೆಂಡ್ ವಿರುದ್ಧ 20 ಹಾಗೂ ವೆಸ್ಟ್ಇಂಡೀಸ್ ಎದುರು 16 ಸಹಿತ ಸ್ವದೇಶದಲ್ಲಿ ನಡೆದ ಹಿಂದಿನ 5 ಟೆಸ್ಟ್ ಪಂದ್ಯಗಳಲ್ಲಿ ಒಟ್ಟು 46 ವಿಕೆಟ್ಗಳನ್ನು ಪಡೆದಿದ್ದಾರೆ. ಮೊದಲ ಇನಿಂಗ್ಸ್ನಲ್ಲಿ 112 ರನ್ಗೆ 6 ವಿಕೆಟ್ಗಳನ್ನು ಪಡೆದಿದ್ದ ಅಲಿ 2ನೇ ಇನಿಂಗ್ಸ್ನಲ್ಲಿ 28 ಓವರ್ಗಳ ಸ್ಪೆಲ್ನಲ್ಲಿ 79 ರನ್ಗೆ 4 ವಿಕೆಟ್ಗಳನ್ನು ಕಬಳಿಸಿದ್ದಾರೆ.
ಸ್ಪಿನ್ ಸ್ನೇಹಿ ಪಿಚ್ನಲ್ಲಿ ಗೆಲ್ಲಲು 277 ರನ್ ಗುರಿ ಪಡೆದಿದ್ದ ದಕ್ಷಿಣ ಆಫ್ರಿಕಾ ತಂಡವು ಬುಧವಾರ 2 ವಿಕೆಟ್ ನಷ್ಟಕ್ಕೆ 51 ರನ್ನಿಂದ ತನ್ನ 2ನೇ ಇನಿಂಗ್ಸ್ ಮುಂದುವರಿಸಿತು.
ಮೊದಲ ಇನಿಂಗ್ಸ್ನಲ್ಲಿ ಶತಕ ಗಳಿಸಿದ್ದ ಟೋನಿ ಡಿ ರೊರ್ಝಿ ಬೆಳಗ್ಗಿನ ಅವಧಿಯಲ್ಲಿ ಕೇವಲ 16 ರನ್ ಗಳಿಸಿ ಅಫ್ರಿದಿಗೆ ವಿಕೆಟ್ ಒಪ್ಪಿಸಿದರು. ಟ್ರಿಸ್ಟನ್ ಸ್ಟಬ್ಸ್ ಕೇವಲ 2 ರನ್ ಗಳಿಸಿ ಸಲ್ಮಾನ್ ಅಲಿಗೆ ಔಟಾದರು.
73 ರನ್ ಜೊತೆಯಾಟ ನಡೆಸಿದ ಡೆವಾಲ್ಡ್ ಬ್ರೆವಿಸ್(54 ರನ್) ಹಾಗೂ ರಿಯಾನ್ ರಿಕೆಲ್ಟನ್(45 ರನ್) ಒಂದಷ್ಟು ಹೋರಾಟ ನೀಡಿದರು. ತನ್ನ 3ನೇ ಟೆಸ್ಟ್ ಪಂದ್ಯವನ್ನಾಡಿದ ಬ್ರೆವಿಸ್ ಅವರು ನೊಮಾನ್ ಅಲಿ ಅವರ ಒಂದೇ ಓವರ್ನಲ್ಲಿ ಸಿಕ್ಸರ್ ಹಾಗೂ 2 ಬೌಂಡರಿ ಗಳಿಸಿ 51 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. 54 ರನ್ ಗಳಿಸಿ ಅಲಿಗೆ ಕ್ಲೀನ್ಬೌಲ್ಡಾದರು.
145 ಎಸೆತಗಳಲ್ಲಿ 45 ರನ್ ಗಳಿಸಿದ ರಿಕೆಲ್ಟನ್ ಅವರ ತಾಳ್ಮೆಯ ಇನಿಂಗ್ಸ್ಗೆ ಆಫ್ ಸ್ಪಿನ್ನರ್ ಸಾಜಿದ್ ಖಾನ್ ತೆರೆ ಎಳೆದರು.
ಭೋಜನ ವಿರಾಮದ ನಂತರ ದಕ್ಷಿಣ ಆಫ್ರಿಕಾದ ಪರದಾಟ ಮುಂದುವರಿಯಿತು. ಸ್ವೀಪ್ ಶಾಟ್ಗೆ ಯತ್ನಿಸಿದ ಮುತ್ತುಸ್ವಾಮಿ(6 ರನ್) ಅವರು ಖಾನ್ಗೆ ವಿಕೆಟ್ ಒಪ್ಪಿಸಿದರು. ಅಫ್ರಿದಿ ಕೊನೆಯ ಬ್ಯಾಟರ್ ಕಾಗಿಸೊ ರಬಾಡರನ್ನು ಔಟ್ ಮಾಡಿ ದಕ್ಷಿಣ ಆಫ್ರಿಕಾದ ಇನಿಂಗ್ಸ್ಗೆ ತೆರೆ ಎಳೆದರು.
ಪ್ರಸಕ್ತ ಟೆಸ್ಟ್ ಪಂದ್ಯದಲ್ಲಿ 191 ರನ್ಗೆ 10 ವಿಕೆಟ್ ಗೊಂಚಲನ್ನು ಪಡೆದ ನೊಮಾನ್ ಅಲಿ ಅವರು ಟೆಸ್ಟ್ ಕ್ರಿಕೆಟ್ನಲ್ಲಿ 3ನೇ ಬಾರಿ 10 ವಿಕೆಟ್ ಗೊಂಚಲು ಪಡೆದರು. ಈ ಸಾಧನೆಗೆ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಉಭಯ ತಂಡಗಳ ಸ್ಪಿನ್ನರ್ಗಳು ಒಟ್ಟು 34 ವಿಕೆಟ್ಗಳನ್ನು ಕಬಳಿಸಿದ್ದು, ವೇಗದ ಬೌಲರ್ಗಳು ಕೇವಲ 6 ವಿಕೆಟ್ಗಳನ್ನು ಪಡೆದರು. ದಕ್ಷಿಣ ಆಫ್ರಿಕಾದ ಎಡಗೈ ಸ್ಪಿನ್ನರ್ ಎಸ್. ಮುತ್ತುಸ್ವಾಮಿ ಪಂದ್ಯದಲ್ಲಿ 174 ರನ್ ವೆಚ್ಚಕ್ಕೆ 11 ವಿಕೆಟ್ಗಳನ್ನು ಕಬಳಿಸಿದರು.
ಪಾಕಿಸ್ತಾನ ತಂಡವು ಮೊದಲ ಇನಿಂಗ್ಸ್ನಲ್ಲಿ 378 ರನ್ ಗಳಿಸಿದ್ದರೆ,ಇದಕ್ಕೆ ಉತ್ತರವಾಗಿ ದಕ್ಷಿಣ ಆಫ್ರಿಕಾ 269 ರನ್ ಗಳಿಸಿ ಹಿನ್ನಡೆ ಕಂಡಿತು. ವಿರೂಪಗೊಂಡಿದ್ದ ಪಿಚ್ನಲ್ಲಿ ಪಾಕ್ ತಂಡವು 2ನೇ ಇನಿಂಗ್ಸ್ನಲ್ಲಿ 167 ರನ್ ಗಳಿಸಿ ಆಲೌಟಾಯಿತು. ಅಂತಿಮವಾಗಿ ಗೆಲುವು ದಾಖಲಿಸುವಲ್ಲಿ ಶಕ್ತವಾಯಿತು.
2ನೇ ಹಾಗೂ ದ್ವಿತೀಯ ಟೆಸ್ಟ್ ಪಂದ್ಯವು ಸೋಮವಾರ ರಾವಲ್ಪಿಂಡಿಯಲ್ಲಿ ಆರಂಭವಾಗಲಿದೆ. ಗಾಯದಿಂದಾಗಿ ಪ್ರಸಕ್ತ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದ ಅನುಭವಿ ಸ್ಪಿನ್ನರ್ ಕೇಶವ ಮಹಾರಾಜ್ 2ನೇ ಟೆಸ್ಟ್ ಪಂದ್ಯಕ್ಕೆ ವಾಪಸಾಗಿ ದಕ್ಷಿಣ ಆಫ್ರಿಕಾದ ಬೌಲಿಂಗ್ ವಿಭಾಗವನ್ನು ಬಲಪಡಿಸಲಿದ್ದಾರೆ.
ಸ್ವದೇಶಿ ವಾತಾವರಣದಲ್ಲಿ ಪಾಕಿಸ್ತಾನದ ಪ್ರಾಬಲ್ಯಕ್ಕೆ ಈ ಪಂದ್ಯವು ಸಾಕ್ಷಿಯಾಯಿತು. ಮುಖ್ಯವಾಗಿ ಸ್ಪಿನ್ನರ್ಗಳು ತಿರುವು ನೀಡುತ್ತಿದ್ದ ಪಿಚ್ನಲ್ಲಿ ಮಿಂಚಿದರು. ಸ್ಪಿನ್ ಎದುರು ಆಡಲು ಪರದಾಟ ನಡೆಸಿದ ದಕ್ಷಿಣ ಆಫ್ರಿಕಾ ತಂಡವು 11 ಪಂದ್ಯಗಳಲ್ಲಿ ಮೊದಲ ಸೋಲು ಕಂಡಿದೆ.
ಸಂಕ್ಷಿಪ್ತ ಸ್ಕೋರ್
ಪಾಕಿಸ್ತಾನ ಮೊದಲ ಇನಿಂಗ್ಸ್: 378 ರನ್
ದಕ್ಷಿಣ ಆಫ್ರಿಕಾ ಮೊದಲ ಇನಿಂಗ್ಸ್: 269 ರನ್
ಪಾಕಿಸ್ತಾನ 2ನೇ ಇನಿಂಗ್ಸ್: 167 ರನ್
ದಕ್ಷಿಣ ಆಫ್ರಿಕಾ 2ನೇ ಇನಿಂಗ್ಸ್: 183 ರನ್







