ಐಸಿಸಿಗೆ ದೂರು ನೀಡಿದ ಪಾಕಿಸ್ತಾನ ಕ್ರಿಕೆಟ್ ಮಂಡಳಿ

ಪಿಸಿಬಿ | PC : X
ದುಬೈ, ಸೆ.15: ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಏಶ್ಯ ಕಪ್ ಪಂದ್ಯದ ವೇಳೆ ಹಸ್ತಲಾಘವ ಮಾಡದೇ ಇರುವುದು ವಿವಾದಕ್ಕೆ ಕಾರಣವಾಗಿದ್ದು, ಪಾಕಿಸ್ತಾನ ಕ್ರಿಕೆಟ್ ಮಂಡಳಿಯು(ಪಿಸಿಬಿ)ಈ ಕುರಿತು ಅಂತರ್ರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ(ಐಸಿಸಿ)ದೂರು ನೀಡಿದೆ.
ಐಸಿಸಿ ನೀತಿ ಸಂಹಿತೆ ಹಾಗೂ ಕ್ರಿಕೆಟ್ ಸ್ಫೂರ್ತಿಗೆ ಸಂಬಂಧಿಸಿದ ಎಂಸಿಸಿ ಕಾನೂನುಗಳನ್ನು ಉಲ್ಲಂಘಿಸಿರುವ ಮ್ಯಾಚ್ ರೆಫರಿಯನ್ನು ಏಶ್ಯ ಕಪ್ನಿಂದ ತಕ್ಷಣವೇ ತೆಗೆದುಹಾಕಬೇಕೆಂದು ಮಂಡಳಿಯು ಬೇಡಿಕೆ ಸಲ್ಲಿಸಿದೆ ಎಂದು ಪಿಸಿಬಿ ಅಧ್ಯಕ್ಷ ಮುಹ್ಸಿನ್ ನಖ್ವಿ ಹೇಳಿದ್ದಾರೆ.
ರವಿವಾರ ದುಬೈ ಇಂಟರ್ನ್ಯಾಶನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಟಾಸ್ ಸಮಯದಲ್ಲಿ ಪಾಕಿಸ್ತಾನ ತಂಡದ ನಾಯಕ ಸಲ್ಮಾನ್ ಅಲಿ ಹಾಗೂ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಸಾಂಪ್ರದಾಯಿಕ ಹ್ಯಾಂಡ್ಶೇಕ್ ಮಾಡಲಿಲ್ಲ. ಮ್ಯಾಚ್ ರೆಫರಿ ಆ್ಯಂಡಿ ಪೈಕ್ರಾಫ್ಟ್ ಅವರು ಸಲ್ಮಾನ್ಗೆ ಕೈಕುಲುಕದಂತೆ ನಿರ್ದಿಷ್ಟವಾಗಿ ಸೂಚಿಸಿದ್ದರು ಎಂದು ಪಿಸಿಬಿ ದೂರಿದೆ.
‘‘ಟಾಸ್ ಸಮಯದಲ್ಲಿ ಮ್ಯಾಚ್ ರೆಫರಿ ಆ್ಯಂಡಿ ಪೈಕ್ರಾಫ್ಟ್ ನಾಯಕ ಸಲ್ಮಾನ್ ಅಲಿ ಅಘಾ ಅವರನ್ನು ಭಾರತೀಯ ತಂಡದ ನಾಯಕನೊಂದಿಗೆ ಹಸ್ತಲಾಘವ ಮಾಡದಂತೆ ಕೇಳಿಕೊಂಡಿದ್ದರು. ಪಾಕಿಸ್ತಾನ ತಂಡದ ಆಡಳಿತ ಮಂಡಳಿಯು ಈ ನಡವಳಿಕೆಯನ್ನು ಕ್ರೀಡಾ ಮನೋಭಾವಕ್ಕೆ ವಿರುದ್ಧವೆಂದು ಕರೆದು ಪ್ರತಿಭಟನೆ ದಾಖಲಿಸಿದೆ’’ ಎಂದು ಮಂಡಳಿ ತಿಳಿಸಿದೆ.
ಪಂದ್ಯ ಮುಗಿದ ನಂತರ ಸೂರ್ಯಕುಮಾರ್ ಅವರು ತನ್ನ ಬ್ಯಾಟಿಂಗ್ ಸಹಪಾಠಿ ಶಿವಂ ದುಬೆ ಅವರ ಕೈಕುಲುಕಿ ಪಾಕಿಸ್ತಾನ ಆಟಗಾರರ ಕೈಕುಲಕದೆ ಸೀದಾ ಪೆವಿಲಿಯನ್ಗೆ ತೆರಳಿದರು.
‘‘ ಪಂದ್ಯದ ಮುಗಿದ ನಂತರ ನಮ್ಮ ಆಟಗಾರರು ಭಾರತದ ಆಟಗಾರರ ಕೈ ಕುಲುಕಲು ಸಿದ್ಧರಾಗಿದ್ದರು. ನಮ್ಮ ಎದುರಾಳಿ ತಂಡ ಹಸ್ತಲಾಘವ ಮಾಡದೇ ಇರುವುದಕ್ಕೆ ನಮಗೆ ನಿರಾಶೆಯಾಗಿದೆ. ನಾವು ಕೈಕುಲುಕಲು ಅಲ್ಲಿಗೆ ಹೋದೆವು. ಆದರೆ ಅವರು ಅದಾಗಲೇ ಡ್ರೆಸ್ಸಿಂಗ್ ರೂಮ್ಗೆ ಹೋಗುತ್ತಿದ್ದರು. ಪಂದ್ಯದಲ್ಲಿ ನಾವು ನಿರಾಶಾದಾಯಕ ಪ್ರದರ್ಶನ ನೀಡಿದ್ದೆವು. ಕನಿಷ್ಠ ಪಕ್ಷ ಕೈಕುಲುಕಲು ನಾವು ಸಿದ್ಧರಿದ್ದೆವು’’ ಎಂದು ಪಾಕಿಸ್ತಾನ ತಂಡದ ಕೋಚ್ ಮೈಕ್ ಹಸ್ಸನ್ ಹೇಳಿದ್ದಾರೆ.







