ಟ್ವೆಂಟಿ-20 ಸರಣಿ ಗೆದ್ದ ಪಾಕಿಸ್ತಾನ ಕ್ರಿಕೆಟ್ ತಂಡ
ಝಿಂಬಾಬ್ವೆ ವಿರುದ್ಧ 10 ವಿಕೆಟ್ ಗೆಲುವು

PC : NDTV
ಬುಲಾವಯೊ : ಸ್ಪಿನ್ನರ್ ಸುಫಿಯಾನ್ ಮುಕೀಮ್ ಅವರ ಜೀವನಶ್ರೇಷ್ಠ ಬೌಲಿಂಗ್(3-5) ಸಹಾಯದಿಂದ ಪಾಕಿಸ್ತಾನ ಕ್ರಿಕೆಟ್ ತಂಡವು ಝಿಂಬಾಬ್ವೆ ವಿರುದ್ಧದ 2ನೇ ಟಿ-20 ಅಂತರ್ರಾಷ್ಟ್ರೀಯ ಪಂದ್ಯವನ್ನು 10 ವಿಕೆಟ್ಗಳ ಅಂತರದಿಂದ ಗೆದ್ದುಕೊಂಡಿದೆ. ಈ ಮೂಲಕ ಇನ್ನೂ ಒಂದು ಪಂದ್ಯ ಬಾಕಿ ಇರುವಾಗಲೇ 3 ಪಂದ್ಯಗಳ ಸರಣಿಯನ್ನು 2-0 ಅಂತರದಿಂದ ವಶಪಡಿಸಿಕೊಂಡಿದೆ.
ಮಂಗಳವಾರ ನಡೆದ ಪಂದ್ಯದಲ್ಲಿ ಬ್ಯಾಟಿಂಗ್ ಆಯ್ದುಕೊಂಡ ಝಿಂಬಾಬ್ವೆ ತಂಡವು 12.4 ಓವರ್ಗಳಲ್ಲಿ ಕೇವಲ 57 ರನ್ಗೆ ಆಲೌಟಾಯಿತು. ಇದರೊಂದಿಗೆ ಟಿ-20 ಪಂದ್ಯದಲ್ಲಿ ಕನಿಷ್ಠ ಸ್ಕೋರ್ ಗಳಿಸಿತು. ಜನವರಿಯಲ್ಲಿ ಶ್ರೀಲಂಕಾ ವಿರುದ್ಧ 84 ರನ್ ಗಳಿಸಿತ್ತು.
ಪಾಕಿಸ್ತಾನ ತಂಡವು 5.3 ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 61 ರನ್ ಗಳಿಸಿತು.
ಆತಿಥೇಯ ಝಿಂಬಾಬ್ವೆ ತಂಡವು 27 ಎಸೆತಗಳಲ್ಲಿ 37 ರನ್ ಸೇರಿಸಿ ಉತ್ತಮ ಆರಂಭ ಪಡೆದಿತ್ತು. ಆದರೆ ಕೇವಲ 20 ರನ್ ಸೇರಿಸುವಷ್ಟರಲ್ಲಿ ಎಲ್ಲ 10 ವಿಕೆಟ್ಗಳನ್ನು ಕಳೆದುಕೊಂಡು ಭಾರೀ ಬ್ಯಾಟಿಂಗ್ ವೈಫಲ್ಯಕ್ಕೆ ಒಳಗಾಯಿತು.
ಎಡಗೈ ಸ್ಪಿನ್ನರ್ ಸುಫಿಯನ್ ಮಧ್ಯಮ ಓವರ್ನಲ್ಲಿ ಝಿಂಬಾಬ್ವೆಗೆ ಸವಾಲಾದರು. ಸುಫಿಯನ್ 2.4 ಓವರ್ಗಳಲ್ಲಿ ಕೇವಲ 3 ರನ್ ನೀಡಿ 5 ವಿಕೆಟ್ಗಳನ್ನು ಉರುಳಿಸಿದರು. ಅಬ್ಬಾಸ್ ಅಫ್ರಿದಿ(2-2) ಎರಡು ವಿಕೆಟ್ ಪಡೆದರು.
ಪಾಕ್ ತಂಡವು ವಿಕೆಟ್ ನಷ್ಟವಿಲ್ಲದೆ 87 ಎಸೆತಗಳು ಬಾಕಿ ಇರುವಾಗಲೇ ಗೆಲುವಿನ ದಡ ಸೇರಿತು. ಓಪನರ್ಗಳಾದ ಸಯೀಮ್ ಅಯ್ಯೂಬ್(36 ರನ್, 18 ಎಸೆತ)ಹಾಗೂ ಉಮರ್ ಯೂಸುಫ್(22 ರನ್, 15 ಎಸೆತ)ಪಾಕ್ ತಂಡಕ್ಕೆ ಎಸೆತಗಳ ಅಂತರದಲ್ಲಿ ಭಾರೀ ಗೆಲುವು ತಂದುಕೊಟ್ಟರು.
ಪಾಕ್ ತಂಡವು ಸರಣಿಯ ಮೊದಲ ಪಂದ್ಯವನ್ನು 57 ರನ್ನಿಂದ ಗೆದ್ದುಕೊಂಡಿತ್ತು. 3ನೇ ಹಾಗೂ ಕೊನೆಯ ಪಂದ್ಯವನ್ನು ಗುರುವಾರ ಆಡಲಿದೆ.







