ಅಜ್ಜ - ಮೊಮ್ಮಗಳ ಭಾವನಾತ್ಮಕ ಕ್ಷಣಕ್ಕೆ ಸಾಕ್ಷಿಯಾಗಲಿದೆ ಭಾರತ – ಪಾಕ್ ಪಂದ್ಯ
2 ವರ್ಷದ ಮೊಮ್ಮಗಳನ್ನು ಮುದ್ದಿಸಲು ತುದಿಗಾಲಲ್ಲಿ ನಿಂತಿರುವ ಲಿಯಾಕತ್ ಖಾನ್

Photo: PTI
ಅಹ್ಮದಾಬಾದ್: ಹರಿಯಾಣದ ನಿವೃತ್ತ ಅಧಿಕಾರಿ ಲಿಯಾಕತ್ ಖಾನ್ ಅವರು ಅ.14ರಂದು ಗುಜರಾತಿನ ಅಹ್ಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಶನಿವಾರ ಭಾರತ ಮತ್ತು ಪಾಕಿಸ್ತಾನ ನಡುವೆ ನಡೆಯಲಿರುವ ಪಂದ್ಯಕ್ಕಾಗಿ ತುದಿಗಾಲಲ್ಲಿ ನಿಂತು ಕಾಯುತ್ತಿದ್ದಾರೆ ಎಂದು indianexpress.com ವರದಿ ಮಾಡಿದೆ.
ಈ ಪಂದ್ಯದಲ್ಲಿ ಲಿಯಾಕತ್ ಖಾನ್ ಅವರಿಗೆ ತಮ್ಮ ಎರಡು ವರ್ಷದ ಮೊಮ್ಮಗಳನ್ನು ಮುದ್ದಿಸುವ ಅವಕಾಶ ಸಿಗಲಿದೆ. ಖಾನ್ ಅವರು ಮಗಳು ಸಮಿಯಾ 2019ರಲ್ಲಿ ದುಬೈನಲ್ಲಿ ಪಾಕ್ ಬೌಲರ್ ಹಸನ್ ಅಲಿ ಅವರನ್ನು ಮದುವೆಯಾದರು. ಅಂದಿನಿಂದ ಇಂದಿನವರೆಗೂ ಖಾನ್ ಅವರಿಗೆ ಮಗಳನ್ನು ನೇರವಾಗಿ ನೋಡಲು ಸಾಧ್ಯವಾಗಿಲ್ಲ.
Photo : IG/ha55an_ali
ಮಗಳು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾಗ ನನ್ನ ಪತ್ನಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದರು. ಬಳಿಕ ಭೇಟಿಯಾಗಿಲ್ಲ, 4 ವರ್ಷಗಳಿಂದ ಮಗಳನ್ನು ನೋಡಲು ಕಾಯುತ್ತಿದ್ದೇನೆ. ಆದರೆ, ಅಹ್ಮದಾಬಾದ್ ನಲ್ಲಿ ಮತ್ತೊಮ್ಮೆ ಭೇಟಿಯಾಗುವ ನೀರೀಕ್ಷೆಯಿದೆ. ನನ್ನ ಮೊಮ್ಮಗಳನ್ನು ಕೈಯ್ಯಲ್ಲಿ ಎತ್ತಿಕೊಳ್ಳಲು ಕಾತರದಿಂದ ಕಾಯುತ್ತಿದ್ದೇನೆ ಎಂದು ನುಹ್ ಜಿಲ್ಲೆಯ ಚಾಂದೇನಿ ಗ್ರಾಮದಲ್ಲಿ ನೆಲೆಸಿರುವ 63 ವರ್ಷದ ಲಿಯಾಕತ್ ಖಾನ್ ಪುಳಕಿತರಾಗಿ ಹೇಳಿದರು.
ರಾಜತಾಂತ್ರಿಕ ಸಮಸ್ಯೆ ಹಿನ್ನೆಲೆಯಲ್ಲಿ ಪಾಕಿಸ್ತಾನ ತಂಡದ ಭಾರತದ ಪ್ರವಾಸವೇ ಅನುಮಾನದಲ್ಲಿದ್ದರಿಂದ ಖಾನ್ ಕುಟುಂಬಕ್ಕೆ ಮಗಳು, ಅಳಿಯ ಮತ್ತು ಮೊಮ್ಮಗಳ ಭೇಟಿಯ ಅನಿಶ್ಚಿತತೆ ಕಾಡುತ್ತಿತ್ತು. ಹಸನ್ ಅಲಿ ಅವರ ಹೆಸರು ವಿಶ್ವಕಪ್ ತಂಡದ ತಾತ್ಕಾಲಿಕ ಪಟ್ಟಿಯಲ್ಲೂ ಇರಲಿಲ್ಲ. ಏಷ್ಯಾ ಕಪ್ ಸಂದರ್ಭದಲ್ಲಿ ನಸೀಮ್ ಶಾ ಗಾಯಗೊಂಡಿದ್ದರಿಂದ, ಅವರ ಸ್ಥಾನಕ್ಕೆ ಹಸನ್ ಅಲಿ ಹೆಸರು ಆಯ್ಕೆಯಾದಾಗ ಲಿಯಾಕತ್ ಖಾನ್ ಕುಟುಂಬ ಸಂಭ್ರಮಪಟ್ಟಿತ್ತು. ಆ ಮೂಲಕ ತನ್ನ ಮಗಳು ಮೊಮ್ಮಗಳನ್ನು ನೋಡಬಹುದೆಂಬ ಆಸೆ ಮತ್ತೆ ಚಿಗುರೊಡೆದಿತ್ತು.
ನಾನು ಹಸನ್ ಅವರನ್ನು ಭೇಟಿಯಾದಾಗ, ಭಾರತ ತಂಡದ ಆಟಗಾರರನ್ನು ಭೇಟಿ ಮಾಡಲು ನನಗೆ ಸಹಾಯ ಮಾಡಲು ಅಳಿಯ ಹಸನ್ ಅಲಿಯನ್ನು ವಿನಂತಿಸುತ್ತೇನೆ. ವಿರಾಟ್ ಕೊಹ್ಲಿಯೊಂದಿಗೆ ಫೋಟೋ ತೆಗೆಸಿಕೊಳ್ಳುವ ಆಸೆಯಿದೆ. ರಾಹುಲ್ ದ್ರಾವಿಡ್ಗೆ ನನ್ನ ಶುಭಾಶಯ ಹಂಚಿಕೊಳ್ಳಲು ಬಯಸುತ್ತೇನೆ ಎಂದು ಲಿಯಾಕತ್ ಖಾನ್ ತಮ್ಮ ಮನದಾಳವನ್ನು ತೆರೆದಿಟ್ಟರು.







