ಪಾಕಿಸ್ತಾನ ಫುಟ್ಬಾಲ್ ಒಕ್ಕೂಟವನ್ನು ಅಮಾನತಿನಲ್ಲಿಟ್ಟ ಫಿಫಾ

ಸಾಂದರ್ಭಿಕ ಚಿತ್ರ | NDTV
ಹೊಸದಿಲ್ಲಿ: ಪಾಕಿಸ್ತಾನದಲ್ಲಿ ಫುಟ್ಬಾಲ್ನ ಸಮರ್ಪಕ ಆಡಳಿತಕ್ಕೆ ಅಗತ್ಯ ಎಂಬುದಾಗಿ ಕ್ರೀಡೆಯ ಜಾಗತಿಕ ಆಡಳಿತ ಮಂಡಳಿ ಫಿಫಾ ಭಾವಿಸಿರುವ ಸಾಂವಿಧಾನಿಕ ತಿದ್ದುಪಡಿಗಳನ್ನು ಜಾರಿಗೊಳಿಸಲು ವಿಫಲವಾಗಿರುವುದಕ್ಕಾಗಿ ಪಾಕಿಸ್ತಾನ ಫುಟ್ಬಾಲ್ ಫೆಡರೇಶನ್ (ಪಿಎಫ್ಎಫ್)ನ್ನು ಫಿಫಾ ಅಮಾನತಿನಲ್ಲಿರಿಸಿದೆ. ಪಿಎಫ್ಎಫ್ ಸಭೆಯು ಅಗತ್ಯ ತಿದ್ದುಪಡಿಗಳನ್ನು ಅಂಗೀಕರಿಸುವವರೆಗೆ ಅಮಾನತು ಜಾರಿಯಲ್ಲಿರುತ್ತದೆ ಎಂದು ಫಿಫಾ ತಿಳಿಸಿದೆ.
2019 ಜೂನ್ನಿಂದ, ಪಾಕಿಸ್ತಾನಿ ಫುಟ್ಬಾಲ್ ಫಿಫಾ ನೇಮಿತ ನಾರ್ಮಲೈಸೇಶನ್ ಕಮಿಟಿಯ ನಿಯಂತ್ರಣದಲ್ಲಿತ್ತು. ಚುನಾವಣೆಗಳನ್ನು ನಡೆಸುವ ಮತ್ತು ಆಂತರಿಕ ಸಂಘರ್ಷಗಳನ್ನು ಫೆಡರೇಶನ್ನ ಒಳಗೆಯೇ ಬಗೆಹರಿಸುವ ಕೆಲಸವನ್ನು ಸಮಿತಿಗೆ ನೀಡಲಾಗಿತ್ತು. ಆದರೆ, ತನ್ನ ಜವಾಬ್ದಾರಿಯನ್ನು ನಿಭಾಯಿಸಲು ಅದು ವಿಫಲವಾಗಿತ್ತು.
ಕಳೆದ ಐದು ವರ್ಷಗಳ ಅವಧಿಯಲ್ಲಿ ನಾಯಕತ್ವದಲ್ಲಿ ಹಲವು ಬದಲಾವಣೆಗಳಾದರೂ, ಪಾಕಿಸ್ತಾನಿ ಫುಟ್ಬಾಲ್ನೊಳಗಿನ ಮೂಲ ಸಮಸ್ಯೆಗಳು ಹಾಗೆಯೇ ಉಳಿದುಕೊಂಡಿದ್ದವು. ನ್ಯಾರ್ಮಲೈಸೇಶನ್ ಕಮಿಟಿ ಮತ್ತು ಸರಕಾರಿ ಒಡೆತನದ ಪಾಕಿಸ್ತಾನಿ ಕ್ರೀಡಾ ಮಂಡಳಿಯ ನಡುವೆ ಭಿನ್ನಾಭಿಪ್ರಾಯಗಳಿದ್ದವು. ಹಾಗಾಗಿ ಸಾಂವಿಧಾನಿಕ ತಿದ್ದುಪಡಿಯ ಕಾರ್ಯ ಮತ್ತಷ್ಟು ವಿಳಂಬವಾಯಿತು.
ಈ ವಾರದ ಆರಂಭದಲ್ಲಿ, ಪಾಕಿಸ್ತಾನಿ ಫುಟ್ಬಾಲ್ನ ನಾರ್ಮಲೈಸೇಶನ್ ಸಮಿತಿಯ ಅಧ್ಯಕ್ಷ ಹಾರೂನ್ ಮಲಿಕ್, ತನ್ನ ಅವಧಿ ಫೆಬ್ರವರಿ 15ರಂದು ಕೊನೆಗೊಳ್ಳುತ್ತದೆ ಹಾಗೂ ತಿದ್ದುಪಡಿಗಳನ್ನು ಜಾರಿಗೊಳಿಸದಿದ್ದರೆ ಅಮಾನತುಗೊಳ್ಳುವ ಅಪಾಯವನ್ನು ಪಾಕಿಸ್ತಾನ ಎದುರಿಸುತ್ತಿದೆ ಎಂಬುದಾಗಿ ಎಚ್ಚರಿಸಿದ್ದರು.
ಫಿಫಾದ ನಿರ್ದೇಶನಗಳನ್ನು ಪಾಲಿಸಲು ಪಿಎಫ್ಎಫ್ ಒಪ್ಪುತ್ತಿಲ್ಲ, ಹಾಗಾಗಿ ಅದು ಈಗ ಬಿಕ್ಕಟ್ಟು ಆಗಿ ಪರಿಣಮಿಸಿದೆ ಎಂದು ಮಲಿಕ್ ಹೇಳಿದರು.
ಪಾಕಿಸ್ತಾನ ಫುಟ್ಬಾಲ್ ಫೆಡರೇಶನ್ ಅಮಾನತುಗೊಳ್ಳುತ್ತಿರುವುದು 2017ರಿಂದ ಇದು ಮೂರನೇ ಬಾರಿಯಾಗಿದೆ.







